ಕುಂದಾಪುರ: ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ನೋಡಲು ಹೆಮ್ಮೆ. ಆದರೆ ಇದನ್ನು ಪಡೆಯಲು ಹಲವರ ತ್ಯಾಗ ಬಲಿದಾನವಿದೆ. ಬ್ರಿಟಿಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಉತ್ತಮ ಹೆಜ್ಜೆಯಲ್ಲಿ ನಾವು ಸಾಗಬೇಕು. ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ದೇಶದ ಸಮಗ್ರತೆ, ಭದ್ರತೆ, ಏಕತೆಯನ್ನು ಛಿದ್ರಗೊಳಿಸಲು ಮುಂದಾಗುವ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಕುಂದಾಪುರ ಈ ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದು, ಕರಾವಳಿ ಭಾಗದ ಸ್ವಾತಂತ್ರ್ಯ ಕಲಿಗಳು ತಮ್ಮ ಕಿಚ್ಚನ್ನು ಬ್ರಿಟಿಷರಿಗೆ ಮುಟ್ಟಿಸಿ ಅವರನ್ನು ಹಿಮ್ಮೆಟ್ಟಿಸಿದ ಕಾರ್ಯವನ್ನು ನೆನೆಯಬೇಕು. ರಾಜ್ಯದ ವಿವಿಧೆಡೆ ನೆರೆ ಸಮಸ್ಯೆಯಿದ್ದು ಕೈಲಾದಷ್ಟು ಸಹಕಾರವನ್ನು ಚೆಕ್ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬಹುದಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಡಾ| ಎಸ್. ಎಸ್. ಮಧುಕೇಶ್ವರ್ ಹೇಳಿದರು.
ಅವರು ಗುರುವಾರ ಕುಂದಾಪುರದ ಗಾಂಧಿ ಮೈದಾನ ದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಇದೇ ಸಂದರ್ಭ ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಂದಾಪುರ ವಲಯದ ಸರಕಾರಿ ಪ್ರೌಢಶಾಲೆಯ ಐದು ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಯಿತು.
ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಮಂಜಪ್ಪ, ಎಸ್‌ಐ ಹರೀಶ್ ನಾಯ್ಕ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ| ನಾಗಭೂಷಣ್ ಉಡುಪ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್, ಜಿ.ಕೆ. ಗಿರೀಶ್, ಶ್ರೀಧರ ಸೇರಿಗಾರ್, ಸಂತೋಷ್ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷರಾದ ವಸಂತಿ ಸಾರಂಗ, ಗುಣರತ್ನಾ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮತ್ತಿತರರಿದ್ದರು.ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಪರೇಡ್‌ಗೆ ಮಳೆ ಅಡಚಣೆ
ರಾಜ್ಯದ ಹಲವೆಡೆ ನೆರೆ ಹಿನ್ನೆಲೆಯಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗುರುವಾರ ಬೆಳಗ್ಗೆ ಎಡೆಬಿಡದೆ ಮಳೆ ಸುರಿದಿದ್ದು ಪರೇಡ್ ಮಾಡಲು ಅಡಚಣೆಯಾಗಿತ್ತು. ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ ಅವರ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ, ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಭಾರತ್ ಸೇವಾದಳ ತಂಡ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಮಳೆ ಹಿನ್ನೆಲೆ ಅದನ್ನು ರದ್ದುಗೊಳಿಸಿ ಧ್ವಜವಂದನೆ ಮಾತ್ರ ನಡೆಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಕೂಡಾ ರದ್ದಾಯಿತು. ಮಳೆಯ ನಡುವೆಯೂ ಮಕ್ಕಳು ಕೊಡೆ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.