ದಾವಣಗೆರೆ: ಅತ್ಯಂತ ಅಚ್ಚುಕಟ್ಟಾದ 71ನೇ ಸ್ವಾತಂತ್ರ್ಯ ದಿನೋತ್ಸವದ ಆಚರಣೆಗೆ ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನೋತ್ಸ ಅಚ್ಚುಕಟ್ಟಾಗಿ ನಡೆಯುವಂತೆ ಸಹಕಾರ ನೀಡಬೇಕು ಎಂದರು.
ಅಂದು ಎಲ್ಲಾ ಶಾಲಾ- ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 7.30 ರೊಳಗೆ ಧ್ವಜಾರೋಹಣ ನೆರವೇರಿಸಬೇಕು. ಸರ್ಕಾರಿ ಕಚೇರಿಗಳಿಗೆ ವಿದ್ಯುದೀಪಾಲಂಕಾರ ಮಾಡಬೇಕು. ಅಗತ್ಯವಿದ್ದರೆ ಸುಣ್ಣ ಬಣ್ಣ ಬಳಸುವಂತೆ ಸೂಚಿಸಿದರು. ಸ್ವಾತಂತ್ರ್ಯ ದಿನೋತ್ಸವದ ವೇದಿಕೆ ನಿರ್ಮಾಣ ಧ್ವನಿವರ್ಧ, ವಿದ್ಯುತ್ ದೀಪಗಳ ಅಲಂಕಾರದ ಜವಾಬ್ದಾರಿಯನ್ನ ಮಹಾನಗರ ಪಾಲಿಕೆ ವಹಿಸಿಕೊಳ್ಳಬೇಕು. ಕ್ರೀಡಾಂಗಣದ ಸಿದ್ದತೆ ಮತ್ತು ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಸಂಬಂಧಿತ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಾರಿಗೆ ಇಲಾಖೆಯವರು ಶಾಲಾ-ಕಾಲೇಜು ಮಕ್ಕಳನ್ನು ಸಮಾರಂಭಕ್ಕೆ ಕರೆ ತರಲು ಸೂಕ್ತ ವ್ಯವಸ್ಥೆ ಮಾಡಬೇಕು. 32 ಶಾಲಾ ಮಕ್ಕಳ ತಂಡಗಳು ಪೆರೇಡ್‌ನಲ್ಲಿ ಭಾಗವಹಿಸಲಿದ್ದು, ಪೊಲೀಸ್ ಇಲಾಖೆಯುಂದಿಗೆ ಸಮನ್ವಯ ಸಾಧಿಸಿ ಪಥ ಸಂಚಲನ ಆಕರ್ಷವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಅಂದು ಸಂಜೆ ಕುವೆಂಪು ಕನ್ನಡ ಭವನದಲ್ಲಿ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಶಾಲಾ ಮಕ್ಕಳಿಂದ 30 ರಿಂದ 45 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮವಿರಲಿ ಹಾಗೂ ಯಾವುದೇ ಹಾಡುಗಳು ಪುನರಾವರ್ತನೆಯಾಗದಂತೆ ಗಮನ ನೀಡಬೇಕು ಎಂದು ಸೂಚಿಸಿದರು. ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ| ಎನ್.ಟಿ. ಮಂಜುನಾಥ್ ಮಾತನಾಡಿ, ಆ.14 ರ ಸಂಜೆ ಶಾಲೆಗಳಿಗೆ ಸಿಹಿ ತಿನಿಸು ನೀಡಲಾಗುವುದು. ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಮಂಗಳವಾರ ಬೆಳಗ್ಗೆ ಸಿಹಿ ತಿಂಡಿ ಹಂಚಿ ಮುಖ್ಯ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಹಿರಿಯ ಸ್ವಾತಂತ್ರ್ಯಹೋರಾಟಗಾರರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಪ್ಲಾಸ್ಟಿಕ್ ಧ್ವಜದ ಬದಲಿಗೆ ಖಾದಿ ಬಟ್ಟೆಯಿಂದ ತಯಾರಿಸಿದ ಧ್ವಜಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯುತ್ತಮ ಪಥಸಂಚಲನ ನೀಡುವ ತಂಡಗಳಿಗೆ ಬಹುಮಾನ ನೀಡಲು ತೀರ್ಮಾನಿಸಲಾಯಿತು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ನಗರ ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಸಮಾಜ ಕಲ್ಯಾಣ ಲಾಖೆ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.