Advertisement

ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

03:08 PM Aug 16, 2019 | Suhan S |

ಕನಕಪುರ: ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಹೋರಾಟಗಾರರ ಶ್ರಮವಿದೆ. ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್ ಸೇರಿದಂತೆ ಆಯಾ ಪ್ರಾಂತ್ಯಗಳ ರಾಜ ಮನೆತನಗಳ ತ್ಯಾಗ ಮತ್ತು ಬಲಿದಾನವಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ನಗರದ ಮುನ್ಸಿಪಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸ್ವರೂಪ ಬೇರೆ ಬೇರೆಯಾದರೂ, ಅವರ ತ್ಯಾಗ ಮತ್ತು ಬಲಿದಾನ ದೇಶವಾಸಿಗಳಿಗೆ ಎಂದು ಮರೆಯಲು ಸಾಧ್ಯವಿಲ್ಲ. ಕೆಲವರ ಸ್ವಾರ್ಥದಿಂದ ನೂರಾರು ವರ್ಷಗಳ ಕಾಲ ಈ ದೇಶ ಪರಕೀಯರ ಆಳ್ವಿಕೆಯಲ್ಲಿತ್ತು. ಪರಕೀಯರಿಂದ ದೇಶವನ್ನು ಮುಕ್ತವಾಗಲು ಅನೇಕ ಹೋರಾಟಗಾರರ ತ್ಯಾಗ, ಬಲಿದಾನವಿದೆ ಎಂದರು.

ಅನೇಕರಿಗೆ ಸ್ವಾತಂತ್ರ್ಯದ ಮಹತ್ವ ತಿಳಿದಿಲ್ಲ: ಇಂದಿಗೂ ಅನೇಕರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಯುತ್ತಿಲ್ಲ. ಸ್ವತಂತ್ರ್ಯ ಭಾರತದಲ್ಲಿ ಬ್ರಿಟಷರು ಬಿಟ್ಟುಹೋದ ಗುಲಾಮಗಿರಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸ್ವತಂತ್ರ ಭಾರತಕ್ಕೆ ವಲ್ಲಭಾಯ್‌ ಪಟೇಲ್, ಲಾಲ್ ಬಹುದ್ದೂರ್‌ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿಯಂತ ಆನೇಕ ಮಹನೀಯರು ಈ ದೇಶಕ್ಕೆ ಬದ್ರಬುನಾದಿ ಹಾಕಿ ಕೊಟ್ಟಿದ್ದಾರೆ. ಒಗ್ಗಟ್ಟಿನ ಮಂತ್ರ ಪಠಿಸಿ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಏಕತೆ ಬೆಸೆಯುವ ಹಬ್ಬ: ತಹಶೀಲ್ದಾರ್‌ ಆನಂದಯ್ಯ ಮಾತನಾಡಿ, ಜಾತಿ, ಧರ್ಮ, ಪಂಗಡ, ಭಾಷೆಗಳನ್ನು ಹೊರತು ಪಡಿಸಿ ದೇಶವಾಸಿಗಳನ್ನೆಲ್ಲ ಒಗ್ಗೂಡಿಸುವ, ಸಹೋದರತ್ವವನ್ನು ಸಾರುವ ಮತ್ತು ಏಕತೆಯನ್ನು ಬೆಸೆಯುವ ಹಬ್ಬ ಸ್ವಾತಂತ್ರ್ಯ ದಿನಾಚರಣೆ. ಎರಡು ಶತಮಾನಗಳ ಕಾಲ ಆಂಗ್ಲರ ಆಳ್ವಿಕೆಯಲ್ಲಿ ಬಲಿಪಶುಗಳಾಗಿ, ನಮ್ಮ ತನವನ್ನು ಕಳೆದುಕೊಂಡು ಬದುಕುತ್ತಿದ್ದ ನಮಗೆ ದೂರೆತ ಸ್ವಾತಂತ್ರ್ಯ ಬಹಳ ಮಹತ್ವದ್ದು. ಆನೇಕ ಹೋರಾಟಗಾರರ ಶ್ರಮವನ್ನು ಇಂದಿನ ಯುವಕರು ಅರಿತುಕೊಳ್ಳಬೇಕು. ಸ್ವಾಂತಂತ್ರ್ಯ ದಿನಾಚರಣೆ ಎಂಬ ಹಬ್ಬವನ್ನು ಮನೆಯ ಹಬ್ಬವನ್ನಾಗಿ ಆಚರಿಸಬೇಕು ಎಂದು ಹೇಳಿದರು.

ಈ ವೇಳೆ ತಾಲೂಕಿನ ಅನೇಕ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಧನಂಜಯ್‌, ನಗರಸಭೆ ಮಾಜಿ ಅಧ್ಯಕ್ಷ ದಿಲೀಪ್‌, ತಾಪಂ ಇಒ ಶಿವರಾಮು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್‌ ಸೇರಿದಂತೆ ಸಾರ್ವಜನಿಕರು, ವಿವಿಧ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next