ಕಲಬುರಗಿ: ಜಿಲ್ಲಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಜಿಟಿಜಿಟಿ ಮಳೆ ನಡುವೆ ಹಲವಡೆ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.
ಕಳೆದ ಮೂರು ದಿನಗಳಿಂದ ಮಳೆ ತುಂತುರು ಮಳೆಯಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದಲೂ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ನಂತರದಲ್ಲಿ ಮಳೆಯಲ್ಲೇ ತೆರೆದ ವಾಹನದಲ್ಲಿ ಸಚಿವರು ಡಿಎಆರ್, ಕೆಎಸ್ಆರ್ ಪಿ, ಸಿವಿಲ್ ಪೊಲೀಸ್, ಕಾರಾಗೃಹ, ಹೋಂಗಾರ್ಡ್ ಮತ್ತು ಎನ್ ಸಿಸಿ ತುಕಡಿಗಳ ಬಳಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.
ಸ್ವಾತಂತ್ರ್ಯೋತ್ಸವದಲ್ಲೂ ಕೋವಿಡ್ ಕುರಿತು ಜಾಗೃತಿ ಹೆಚ್ಚಿನ ಒತ್ತು ನೀಡಲಾಯಿತು. ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳು ಕೋವಿಡ್ ತಡೆಯ ಅರಿವು, ಸ್ವಚ್ಛತೆ ಬಗ್ಗೆ ಪ್ರತಿಬಿಂಬಿಸಿದವು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಉಮೇಶ್ ಜಾಧವ್, ಜಿಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಎಂಎಲ್ ಸಿ ಬಿ.ಜಿ.ಪಾಟೀಲ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಐಜಿಪಿ ಮನೀಷ. ಖರ್ಬೀಕರ್, ಜಿಲ್ಲಾಧಿಕಾರಿ ಶರತ್ ಬಿ, ಜಿಪಂ ಸಿಇಓ ಡಾ.ರಾಜಾ. ಪಿ., ಎಸ್ಪಿ ಸಿಮಿ ಮರಿಯಂ ಜಾರ್ಜ್, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ ಸೇರಿ ಹಲವರು ಉಪಸ್ಥಿತರಿದ್ದರು.