Advertisement

ಕಾಪು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ”ಅಮೃತ ಭಾರತಿಗೆ ಕನ್ನಡದಾರತಿ”; ಸಮಾಲೋಚನಾ ಸಭೆ

03:10 PM May 21, 2022 | Team Udayavani |

ಕಾಪು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ” ಅಮೃತ ಭಾರತಿಗೆ ಕನ್ನಡದಾರತಿ ” ಶೀರ್ಷಿಕೆಯಡಿ ಉಡುಪಿ ಅಜ್ಜರಕಾಡಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಿದ್ಧತೆ ಮತ್ತು ಪಾಲ್ಗೊಳ್ಳುವಿಕೆ ಬಗ್ಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ಶನಿವಾರ ಸಮಾಲೋಚನಾ ಸಭೆ ನಡೆಯಿತು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ‌ ಆರ್. ಮೆಂಡನ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಮಡಿದಿದ್ದು ಸ್ವಾತಂತ್ರ್ಯ ಸಂಗ್ರಾಮದಲ್ಲಿ‌ ಭಾಗಿಗಳಾದ ಹೋರಾಟಗಾರರು ಮತ್ತು ವೀರ ಸೇನಾನಿಗಳ ಹೋರಾಟದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರಮ ಪೂರಕವಾಗಿರಲಿದೆ. ದೇಶಕ್ಕೆ‌‌ ಸ್ವಾತಂತ್ರ್ಯ ದೊರಕಿ 75 ವರ್ಷಗಳಲ್ಲಿ ದೇಶ‌ ನಡೆದು ಬಂದ ಹಾದಿಯ ಬಗ್ಗೆಯೂ ಪುನರಾವಲೋಕ ನಡೆಯಬೇಕಿದೆ ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವು ನಮ್ಮಲ್ಲಿರುವ ದೇಶ ಪ್ರೇಮವನ್ನು ಅನಾವರಣಗೊಳಿಸುವ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮ‌ ಪಂಚಾಯತ್ ನಿಂದ ಕನಿಷ್ಟ ಎರಡು ವಾಹನಗಳನ್ನು ನಿಯೋಜಿಸಿಕೊಂಡು ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಪ್ರೇರೇಪಿಸುವಂತೆ ಅವರು ಮನವಿ ಮಾಡಿದರು.

ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮಾತನಾಡಿ, ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದ್ದು ರಾಜ್ಯ ಸರಕಾರ ಈಗಾಗಲೇ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಉಡುಪಿ ಜಿಲ್ಲೆಯ ಎರಡು ಕಡೆಗಳಲ್ಲಿ ಮೇ 28 ರಂದು ಕಾರ್ಯಕ್ರಮ ನಡೆಯಲಿದ್ದು ಅಜ್ಜರಕಾಡಿನಲ್ಲಿ ನಡೆಯುವ ಸಮಾರಂಭದಲ್ಲಿ ಕಾಪು ತಾಲೂಕಿನ‌ ಸಮಸ್ತ ಜನತೆ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿ ಕೊಡುವಂತೆ ವಿನಂತಿಸಿದರು.

ಕಾಪು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಎಸ್. , ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ ಉಪಸ್ಥಿತರಿದ್ದರು.

Advertisement

ಪುರಸಭಾ ಸದಸ್ಯ ಅನಿಲ್ ಕುಮಾರ್, ಗಂಗಾಧರ ಸುವರ್ಣ ಕಾರ್ಯಕ್ರಮದ ಕುರಿತಾಗಿ ಸಮಗ್ರ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ, ಕುತ್ಯಾರು ಗ್ರಾ.ಪಂ.‌ ಅಧ್ಯಕ್ಷೆ‌ ಲತಾ ಆಚಾರ್ಯ, ಪಲಿಮಾರು ಗ್ರಾ.ಪಂ‌‌ ಅಧ್ಯಕ್ಷೆ ಗಾಯತ್ರಿ ಪ್ರಭು, ಮುದರಂಗಡಿ ಗ್ರಾ.ಪಂ. ಉಪಾಧ್ಯಕ್ಷ ಶರತ್ ಶೆಟ್ಟಿ, ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಪುರಸಭಾ ಸದಸ್ಯರು, ಗ್ರಾ.ಪಂ. ಸದಸ್ಯರು ಮತ್ತು ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಕರಣಿಕ ಕ್ಲಾರೆನ್ಸ್ ಲೆಸ್ಟರ್ನ್ ಕರ್ನೆಲಿಯೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ವಂದಿಸಿದರು. ‌

Advertisement

Udayavani is now on Telegram. Click here to join our channel and stay updated with the latest news.

Next