Advertisement

ಕಮಲೇಶ್ಚಂದ್ರ ವರದಿಅನುಷ್ಠಾನಗೊಳಿಸಿ,ತಾರತಮ್ಯ ನಿವಾರಿಸಲುನೌಕರರಒತ್ತಾಯ

11:08 AM May 25, 2018 | Team Udayavani |

ಆಲಂಕಾರು: ಭಾರತೀಯ ಅಂಚೆ ಇಲಾಖೆ ಇಂದಿಗೂ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ, ದೇಶಕ್ಕೆ ಆದಾಯ ತಂದುಕೊಡುವ ಇಲಾಖೆಯ ಆಧಾರ ಸ್ತಂಭವೇ ಅಲುಗಾಡುತ್ತಿದೆ. ಇಲಾಖೆಯ ಉನ್ನತಿಗೆ ಕಾರಣರಾದವರೇ ಹೊಟ್ಟೆಗೆ ಅನ್ನವಿಲ್ಲದೆ ದೇಶದ ಮೂಲೆ ಮೂಲೆಯಲ್ಲಿರುವ ಬಡವರ ಸೇವೆ ಮಾಡಬೇಕಾಗಿದೆ. ತಮ್ಮ ಹಕ್ಕನ್ನು ಮುಷ್ಕರದ ಮೂಲಕವೇ ಪಡೆಯಬೇಕಾಗಿದೆ. ದೇಶದಲ್ಲಿ 2.75 ಲಕ್ಷ ಇಲಾಖೇತರ ನೌಕರರು ಬ್ರಿಟಿಷರು ಬಿಟ್ಟು ಹೋದ ಜೀತಪದ್ಧತಿಯಲ್ಲೇ ದುಡಿಯುವಂತಾಗಿದೆ.

Advertisement

ಜಾರಿಯಾಗದ ವೇತನ ಆಯೋಗ
ಗ್ರಾಮೀಣ ಅಂಚೆ ನೌಕರರ ಕುರಿತು ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ. ತನ್ನ ಇಲಾಖೆಯ ನೌಕರರಿಗೆ 2016ರಲ್ಲೇ 7ನೇ ವೇತನ ಆಯೋಗವನ್ನು ಜಾರಿಗೊಳಿಸಿ ವೇತನವನ್ನು ಪರಿಷ್ಕರಿಸಿದೆ. ಆದರೆ ಇಲಾಖೇತರ ನೌಕರರಿಗೆ ವೇತನ ಪರಿಷ್ಕರಿಸದೆ ಸತಾಯಿಸುತ್ತಿದೆ. ನ್ಯಾಯಯುತ ಬೇಡಿಕೆಗಾಗಿ ಪ್ರತ್ಯೇಕ ಕಮಲೇಶ್ಚಂದ್ರ ಸಮಿತಿಯನ್ನು ರಚಿಸಿ ಸರಕಾರಕ್ಕೆ ವರದಿಯನ್ನು ನೀಡಲಾಯಿತು. ಆಯೋಗ ನೀಡಿದ 7ನೇ ವೇತನ ಆಯೋಗದ ವರದಿ ಮಂಡನೆಯಾಗಿ 16 ತಿಂಗಳು ಕಳೆದಿವೆ. ಹಣಕಾಸು ಇಲಾಖೆ ಅನುಮೋದಿಸಿ ಕಡತವನ್ನು ಕ್ಯಾಬಿನೆಟ್‌ ಗೆ ಕಳುಹಿಸಿ ತಿಂಗಳು ಎರಡು ಸಂದರೂ ಇನ್ನೂ ಅಲ್ಲೇ ಕೊಳೆಯುತ್ತಿದೆ.

ಎಲ್ಲವೂ ಹೋರಾಟದ ಫ‌ಲ
ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ಅಂಚೆ ಸೇವೆಗಳಿದ್ದರೂ ಇಲಾಖೆ ಮತ್ತು ಇಲಾಖೇತರ ಸಿಬಂದಿ ಎಂದು ಎರಡು ಬಗೆಯ ನೌಕರರನ್ನು ಸೃಷ್ಟಿಸಿ ದೌರ್ಜನ್ಯ ಎಸಗಿದೆ. 2004ರ ತನಕ ಇಲಾಖೇತರ ಹಾಗೂ ಇಲಾಖೆ ನೌಕರರು ಪ್ರತಿಯೊಂದು ಬೇಡಿಕೆಗೆ ಜಂಟಿಯಾಗಿ ಹೋರಾಟ ನಡೆಸುತ್ತಿದ್ದರು. ಆದರೆ ಇದರ ಫ‌ಲವನ್ನು ಇಲಾಖೆ ನೌಕರರು ಪಡೆಯುತ್ತಿದ್ದರೇ ಹೊರತು ಇಲಾಖೇತರರನ್ನು ವಂಚಿಸಲಾಗುತ್ತಿತ್ತು. 2004ರಲ್ಲಿ ಎಸ್‌.ಎಸ್‌. ಮಹಾದೇವಯ್ಯ ನೇತೃತ್ವದಲ್ಲಿ ಇಲಾಖೇತರ ನೌಕರರ ಪ್ರತ್ಯೇಕ ಸಂಘಟನೆ ಕಟ್ಟುವುದರ ಮೂಲಕ ಇಲಾಖೇತರ ಸಿಬಂದಿಯ ಬೇಡಿಕೆಗಳಿಗೆ ಹೋರಾಟದ ಕಿಚ್ಚು ಹೊತ್ತಿಸಲಾಯಿತು. ಇದರ ಪರಿಣಾಮ ಸಮಾನಾಂತರ ಬೋನಸ್‌, ಎಂಟಿಎಸ್‌ ಪರೀಕ್ಷೆಗಳಿಗೆ ಜಿಡಿಎಸ್‌ ನೌಕರರಿಗೆ ಮಾತ್ರ ಅವಕಾಶ, ಪೆನ್ಶನ್‌, ಪೋಸ್ಟ್‌ಮೆನ್‌ ಪರೀಕ್ಷೆಗೆ ಶೇ. 50 ಜಿಡಿಎಸ್‌ ನೌಕರರಿಗೆ ಅವಕಾಶ, 20 ದಿನ ವಾರ್ಷಿಕ ರಜೆ, ಮಹಿಳಾ ನೌಕರರಿಗೆ ವೆಲ್‌ಫೇರ್‌ ಫ‌ಂಡ್‌ ಮೂಲಕ ಹೆರಿಗೆ ಭತ್ತೆ – ಎಲ್ಲವನ್ನೂ ಹೋರಾಟ, ಮುಷ್ಕರದ ಮೂಲಕವೇ ಪಡೆಯಬೇಕಾಯಿತು. 

ಉಳಿತಾಯಕ್ಕೆ ಇಲ್ಲಿದೆ ಉಪಾಯ
ಈ ನೌಕರರು ರೆಗ್ಯುಲರ್‌ ನೌಕರರಿಗೆ ಸಮಾನರಲ್ಲ. ಓರ್ವ ಇಲಾಖೇತರ ಸಿಬಂದಿ ತನ್ನ ಜೀವನ ನಿರ್ವಹಣೆಗಾಗಿ ಇತರ ಆದಾಯದ ಮೂಲವನ್ನು ಹೊಂದಿರುತ್ತಾನೆ ಎಂದು ಇಲಾಖೆ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಇಲಾಖೆ ಇವರಿಗೆ ಬಿಡಿಗಾಸು ನೀಡಿ ಸಾಕಷ್ಟು ಉಳಿತಾಯ ಮಾಡುತ್ತಿದೆ ಎಂಬ ಮನೋಭಾವನೆ ಬೆಳೆಸಿಕೊಂಡಿದೆ.

ಹಾಗಾದರೆ ಇಲಾಖೇತರ ನೌಕರರ ಮಾದರಿ ಇಲಾಖೇತರ ಪೋಸ್ಟ್‌ ಮಾಸ್ಟರ್‌ ಜನರಲ್‌, ಇಲಾಖೇತರ ಪೋಸ್ಟಲ್‌ ಡೈರಡಕ್ಟರ್‌ ಹುದ್ದೆ ಏಕೆ ಸೃಷ್ಟಿಸಬಾರದು? ಇಂತಹ ಕ್ರಮಗಳಿಂದ ಇಲಾಖೆಗೆ ಇನ್ನಷ್ಟು ಕೋಟಿ ರೂ. ಉಳಿತಾಯವಾಗುವ ಸಾಧ್ಯತೆಯಿಲ್ಲವೇ? ಅಂಚೆ ಇಲಾಖೆಯನ್ನೇ ಸಂಪೂರ್ಣ ಇಲಾಖೇತರ ಸಿಬಂದಿಯಾಗಿ ಪರಿವರ್ತಿಸಿದರೆ ಹೇಗೆ? ದೇಶದ ಎಲ್ಲ ಇಲಾಖೆಗಳಲ್ಲೂ ಇದೇ ಮಾದರಿ ಅನುಷ್ಠಾನವಾದರೆ ದೇಶ ಉದ್ಧಾರ ಸಾಧ್ಯವಿಲ್ಲವೇ? ಎಂದು ಇಲಾಖೇತರ ನೌಕರರು ನೋವಿನಿಂದಲೇ ಪ್ರಶ್ನಿಸುತ್ತಿದ್ದಾರೆ.

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next