Advertisement

ಅಂಡಮಾನ್ ನಲ್ಲಿ ನುಸುಳುಕೋರರ ವಿರುದ್ಧ ಸೇನೆಯ ಸ್ಪೆಷಲ್ ಫೋರ್ಸ್ ನಿಂದ ವಾರ್ ಗೇಮ್

11:52 AM Oct 19, 2019 | Hari Prasad |

ನವದೆಹಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗ (AFSOD) ಅಂಡಮಾನ್ ದ್ವೀಪ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇಲ್ಲಿನ ಜನವಸತಿ ಇಲ್ಲದಿರುವ ದ್ವೀಪಗಳಲ್ಲಿ ನುಸುಳಿ ಕುಳಿತಿರಬಹುದಾದ ನುಸುಳುಕೋರರನ್ನು ಹಾಗೂ ಉಗ್ರರನ್ನು ಮಟ್ಟಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

ಡಿ.ಎ.ಎನ್.ಎಕ್ಸ್. 2019 ಎಂಬ ಕೋಡ್ ನೇಮ್ ಇಟ್ಟುಕೊಂಡು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು ಇದರಲ್ಲಿ ಸೇನಾಪಡೆಯ ಅರೆ ವಿಶೇಷ ಪಡೆಗಳು, ನೌಕಾಪಡೆಯ ಸಾಗರ ಕಮಾಂಡೋಗಳು ಮತ್ತು ವಾಯುಪಡೆಯ ಗಾರ್ಡ್ ಕಮಾಂಡೋಗಳು ಭಾಗವಹಿಸುತ್ತಿದ್ದಾರೆ.

ದೆಹಲಿ, ಆಗ್ರಾ, ಬೆಂಗಳೂರು ಮತ್ತು ಕಲೈಕುಂಡ ಭಾಗಗಳಿಂದ ತುಕಡಿಗಳನ್ನು ಅಕ್ಟೋಬರ್ 10ರಂದು ಹೊರಡಿಸುವ ಮೂಲಕ ಈ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಇದೀಗ ಈ ಕಾರ್ಯಾಚರಣೆ ಪ್ರಮುಖ ಘಟ್ಟವನ್ನು ತಲುಪಿದೆ. 1987ರಲ್ಲಿ ಮಾಲ್ಡೀವ್ಸ್ ರಾಜಧಾನಿ ಮಾಲೆಯನ್ನು ತಮಿಳು ಉಗ್ರರಿಂದ ತೆರವುಗೊಳಿಸಲು ಕೈಗೊಳ್ಳಲಾಗಿದ್ದ ವಿಶೇಷ ಸೇನಾ ಕಾರ್ಯಾಚರಣೆಯ ಮಾದರಿಯಲ್ಲಿಯೇ ಈ ಕಾರ್ಯಾಚರಣೆಯೂ ನಡೆಯುತ್ತಿರುವುದು ವಿಶೇಷವಾಗಿದೆ.

ದೇಶದ ಸಾರ್ವಭೌಮತೆಗೆ ಅಪಾಯ ಒದಗಿದ ಸಂದರ್ಭಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಸೇನೆಯ ಈ ವಿಶೇಷ ವಿಭಾಗವು ಸ್ಥಾಪನೆಗೊಂಡ ಬಳಿಕ ನಡೆಸಲಾಗುತ್ತಿರುವ ಎರಡನೇ ಪ್ರಮುಖ ಕಾರ್ಯಾಚರಣೆಯೂ ಇದಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಪ್ರಥಮ ಕಾರ್ಯಾಚರಣೆಯನ್ನು ಗುಜರಾತಿನಲ್ಲಿರುವ ನಾಲಿಯಾ ಪಟ್ಟಣದಲ್ಲಿ ಪಾಕಿಸ್ಥಾನ ಗಡಿಗೆ ಸಮೀಪದಲ್ಲಿ ‘ಎಕ್ಸ್ ಸ್ಮೆಲ್ಲಿಂಗ್ ಫೀಲ್ಡ್ಸ್’ ಎಂಬ ಕೋಡ್ ನೇಮ್ ನಡಿಯಲ್ಲಿ ನಡೆಸಲಾಗಿತ್ತು.

ಈ ವಿಶೇಷ ಕಾರ್ಯಪಡೆಯನ್ನು ಅರೆ ವಿಶೇಷ ಪಡೆಗಳ ಮೇಜರ್ ಜನರಲ್ ಅವರು ಮುನ್ನಡೆಸುತ್ತಾರೆ. ಸಶಸ್ತ್ರದಳದ ವಿಶೇಷ ಕಾರ್ಯಪಡೆ ವಿಭಾಗದ ಮೊದಲ ಮುಖ್ಯಸ್ಥರಾಗಿ ಮೇಜರ್ ಜನರಲ್ ಅಶೋಕ್ ಧಿಂಗ್ರಾ ಅವರು ನೇಮಕಗೊಂಡಿದ್ದರು. ಇದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next