Advertisement

IND vs AUS : ಇಂದು ಇಂದೋರ್‌ ಹೋರಾಟ; ಪಂದ್ಯಕ್ಕೆ ಮಳೆ ಭೀತಿ

06:59 PM Sep 24, 2023 | Team Udayavani |

ಇಂದೋರ್‌: ನಾಲ್ಕು ಮಂದಿ “ಫ‌ಸ್ಟ್‌ ಇಲೆವೆನ್‌’ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬಲಿಷ್ಠ ಆಸ್ಟ್ರೇಲಿಯವನ್ನು ಮೊಹಾಲಿಯಲ್ಲಿ 5 ವಿಕೆಟ್‌ಗಳಿಂದ ಉರುಳಿಸಿದ ಭಾರತವೀಗ ಇಂದೋರ್‌ ಹೋರಾಟಕ್ಕೆ ಅಣಿಯಾಗಿದೆ. ಇಲ್ಲಿ ಗೆದ್ದರೆ ಸರಣಿ ಕೂಡ ಒಲಿಯಲಿದೆ. ಹೀಗಾಗಿ ಆಸೀಸ್‌ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚಿದೆ. ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ.

Advertisement

ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್‌ ಸಿರಾಜ್‌ ಮೊದಲಾದ ಸ್ಟಾರ್‌ ಆಟಗಾರರನ್ನು ಹೊಂದಿಲ್ಲದ ಭಾರತ ಅದೆಂಥ ಪ್ರದರ್ಶನ ನೀಡುತ್ತದೋ ಎಂಬ ಆತಂಕ ಇದ್ದಿತ್ತು. ಏಕೆಂದರೆ ಕಾಗದದಲ್ಲಿ ಭಾರತಕ್ಕಿಂತ ಆಸ್ಟ್ರೇಲಿಯ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿತ್ತು. ನಾಯಕ ಪ್ಯಾಟ್‌ ಕಮಿನ್ಸ್‌, ಅನುಭವಿ ಬ್ಯಾಟರ್‌ ಸ್ಟೀವನ್‌ ಸ್ಮಿತ್‌ ತಂಡಕ್ಕೆ ಮರಳಿದ್ದರು. ಆದರೆ ಮೊಹಾಲಿಯಲ್ಲಿ ಸಂಭವಿಸಿದ್ದೇ ಬೇರೆ!

ಬೌಲಿಂಗ್‌ನಲ್ಲಿ ಮೊಹಮ್ಮದ್‌ ಶಮಿ ಘಾತಕ ಪ್ರದರ್ಶನ ನೀಡಿ 5 ವಿಕೆಟ್‌ ಕಬಳಿಸಿದರು. ಆದರೂ 276 ರನ್‌ ಸಣ್ಣ ಮೊತ್ತವೇನೂ ಆಗಿರಲಿಲ್ಲ. ಅನನುಭವಿ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿದ್ದ ಟೀಮ್‌ ಇಂಡಿಯಾ ಪಾಲಿಗೆ ಇದು ಕಠಿನ ಸವಾಲೇ ಆಗಿತ್ತು. ಆದರೆ ಆರಂಭಿಕರಾದ ಶುಭಮನ್‌ ಗಿಲ್‌-ರುತುರಾಜ್‌ ಗಾಯಕ್ವಾಡ್‌ ಸೇರಿಕೊಂಡು ಆಸೀಸ್‌ ದಾಳಿಯನ್ನು ಪುಡಿಗಟ್ಟುತ್ತ ಹೋದರು. ಇಬ್ಬರೂ 70 ಪ್ಲಸ್‌ ರನ್‌ ಬಾರಿಸಿದರು. 21.4 ಓವರ್‌ ನಿಭಾಯಿಸಿ ಮೊದಲ ವಿಕೆಟಿಗೆ 142 ರನ್‌ ರಾಶಿ ಹಾಕಿದರು. ಭಾರತ ಸೋಲುವ ಸಾಧ್ಯತೆಯೇ ಇರಲಿಲ್ಲ.

ಆದರೂ ನಮ್ಮವರ ಬ್ಯಾಟಿಂಗ್‌ ಲೈನ್‌ಅಪ್‌ ನಡುವಲ್ಲಿ ಒಂದಿಷ್ಟು ಅದುರಿತು. ಆರಂಭಿಕರಿಬ್ಬರು ಬೆನ್ನು ಬೆನ್ನಿಗೆ ಪೆವಿಲಿಯನ್‌ ಸೇರಿಕೊಂಡರು. ಶ್ರೇಯಸ್‌ ಅಯ್ಯರ್‌ ಬಹಳ ಬೇಗ ರನೌಟ್‌ ಆಗಿ ನಿರ್ಗಮಿಸಿದರು. ಇಶಾನ್‌ ಕಿಶನ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಈ ಮೇಲುಗೈಯನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಕ್ಕೆ ಸಾಧ್ಯವಾಗದೇ ಹೋಯಿತು. ಕೆ.ಎಲ್‌. ರಾಹುಲ್‌ ಮತ್ತೂಂದು ಸೊಗಸಾದ ಆಟದ ಮೂಲಕ ಕಪ್ತಾನನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. “ಏಕದಿನದಲ್ಲಿ ಆಡುವುದಿಲ್ಲ’ ಎಂಬ ಅಪವಾದ ಹೊತ್ತಿದ್ದ ಸೂರ್ಯಕುಮಾರ್‌ ಯಾದವ್‌ ಅರ್ಧ ಶತಕದ ಕೊಡುಗೆ ಸಲ್ಲಿಸಿದರು. ಪ್ರತೀ ಪಂದ್ಯದಲ್ಲೂ ಕನಿಷ್ಠ 50 ಎಸೆತಗಳನ್ನು ಎದುರಿಸಬೇಕು ಎಂಬ ಆಡಳಿತ ಮಂಡಳಿಯ ಸೂಚನೆಯನ್ನು ಸೂರ್ಯಕುಮಾರ್‌ ಮೊಹಾಲಿಯಲ್ಲಿ ಪಾಲಿಸಿದ್ದಾರೆ.

ಸೀನಿಯರ್‌ಗಳ ಗೈರಲ್ಲಿ ಯುವ ಬ್ಯಾಟರ್‌ಗಳೆಲ್ಲ ಜವಾಬ್ದಾರಿಯುತವಾಗಿ ಆಡಿ ಇನ್ನಿಂಗ್ಸ್‌ ಕಟ್ಟಿದ್ದೊಂದು ಪ್ಲಸ್‌ ಪಾಯಿಂಟ್‌. ವಿಶ್ವಕಪ್‌ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾದ್ದರಿಂದ ಟೀಮ್‌ ಇಂಡಿಯಾದ ಒಂದು ಹಂತದ ಸಮಸ್ಯೆ ಪರಿಹಾರ ಕಂಡಿದೆ ಎನ್ನಲಡ್ಡಿಯಿಲ್ಲ. ಆದರೆ ವನ್‌ಡೌನ್‌ನಲ್ಲಿ ಬರುವ ಶ್ರೇಯಸ್‌ ಅಯ್ಯರ್‌ ನಿರೀಕ್ಷಿತ ಬ್ಯಾಟಿಂಗ್‌ ನಡೆಸದಿರುವುದು ತಂಡಕ್ಕೊಂದು ಹಿನ್ನಡೆ. ಮೊಹಾಲಿಯಲ್ಲಿ ಎದುರಿಸಿದ್ದು ಎಂಟೇ ಎಸೆತ. ರನೌಟ್‌ ಎಂಬುದು ವೈಫ‌ಲ್ಯಕ್ಕೆ ಖಂಡಿತ ನೆಪವಲ್ಲ. ಮುಂದಿನ ಅವಕಾಶಗಳನ್ನು ಅಯ್ಯರ್‌ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.

Advertisement

ಸುಮಾರು 20 ತಿಂಗಳ ಬಳಿಕ ಏಕದಿನ ಪಂದ್ಯವಾಡಲಿಳಿದ ಚಾಂಪಿಯನ್‌ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಕೂಡ ನಿರೀಕ್ಷಿತ ಬೌಲಿಂಗ್‌ ಪ್ರದರ್ಶಿಸಿಲ್ಲ ಎಂಬ ಅಪವಾದವಿದೆ. ಆದರೆ ಅವರ ಸೆಕೆಂಡ್‌ ಸ್ಪೆಲ್‌ ಉತ್ತಮವಾಗಿಯೇ ಇತ್ತು. ಅಲ್ಲದೇ ಅಶ್ವಿ‌ನ್‌ ವಿಶ್ವಕಪ್‌ ತಂಡದಲ್ಲಿಲ್ಲ. ಒಂದು ವೇಳೆ ಅಕ್ಷರ್‌ ಪಟೇಲ್‌ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದೆ ಹೋದರೆ ಅಶ್ವಿ‌ನ್‌ಗೆ ಅದೃಷ್ಟದ ಬಾಗಿಲು ತೆರೆದೀತು. ಹೀಗಾಗಿ ಅಶ್ವಿ‌ನ್‌ ನಿರ್ವಹಣೆ ಕೂಡ ಇಲ್ಲಿ ನಿರ್ಣಾಯಕವಾಗುತ್ತದೆ. ಇಲ್ಲಿನ ರೇಸ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಕೂಡ ಇದ್ದಾರೆ.

ತಂಡದಲ್ಲಿ ಶಾದೂìಲ್‌ ಠಾಕೂರ್‌ ಪಾತ್ರ ಏನೆಂಬುದು ತಿಳಿಯುತ್ತಿಲ್ಲ. ಅವರ 10 ಓವರ್‌ಗಳಲ್ಲಿ 78 ರನ್‌ ಸೋರಿ ಹೋಗಿದೆ.

ಕೀ ಪ್ಲೇಯರ್‌ಗಳ ಗೈರು
ಆಸ್ಟ್ರೇಲಿಯ ಕೂಡ ಕೆಲವು ಕೀ ಪ್ಲೇಯರ್‌ಗಳ ಸೇವೆಯಿಂದ ವಂಚಿತವಾಗಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಝಲ್‌ವುಡ್‌ ತಂಡದಲ್ಲಿಲ್ಲ. ಇವರು ರಾಜ್‌ಕೋಟ್‌ನ ಅಂತಿಮ ಪಂದ್ಯಕ್ಕೆ ಲಭ್ಯರಾಗಬಹುದು ಎಂಬುದಾಗಿ ನಾಯಕ ಕಮಿನ್ಸ್‌ ಸುಳಿವಿತ್ತಿದ್ದಾರೆ. ಅಷ್ಟರಲ್ಲಿ ಭಾರತ ಸರಣಿ ಗೆಲುವನ್ನು ಪೂರೈಸಬೇಕಿದೆ.

ಬ್ಯಾಟಿಂಗ್‌ ಟ್ರ್ಯಾಕ್‌
ಇಂದೋರ್‌ನ ಹೋಳ್ಕರ್‌ ಸ್ಟೇಡಿಯಂ ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್ ಆಗಿರುವ ಸಾಧ್ಯತೆ ಇದೆ. ಜನವರಿಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಾದ ಪಂದ್ಯದಲ್ಲಿ ಭಾರತ 385 ರನ್‌ ಪೇರಿಸಿತ್ತು. ರೋಹಿತ್‌ ಶರ್ಮ, ಶುಭಮನ್‌ ಗಿಲ್‌ ಸೆಂಚುರಿ ಹೊಡೆದಿದ್ದರು. ಮೊದಲ ವಿಕೆಟಿಗೆ 212 ರನ್‌ ಹರಿದು ಬಂದಿತ್ತು. ಭಾರತ 90 ರನ್ನುಗಳ ಜಯ ಸಾಧಿಸಿತ್ತು.

ಇಲ್ಲಿ ಭಾರತ-ಆಸ್ಟ್ರೇಲಿಯ 2017ರಲ್ಲೊಮ್ಮೆ ಮುಖಾಮುಖೀ ಆಗಿದ್ದವು. 293 ರನ್‌ ಬೆನ್ನಟ್ಟಿ ಹೋದ ಭಾರತ 5 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು. ಇಲ್ಲಿ ಆಡಿದ ಆರೂ ಏಕದಿನ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next