ಆಳಂದ: ದೇಶದಲ್ಲೆಡೆ “ಹರ್ ಘರ್ ತಿರಂಗಾ’ಕ್ಕೆ ಕರೆ ನೀಡಿದಂತೆ ಪ್ರತಿಯೊಬ್ಬರೂ ದೇಶಾಭಿಮಾನ, ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಧ್ಯಾನಭೂಮಿ ಬೆಳಮಗಿ ಗ್ರಾಮದಲ್ಲಿನ ಬುದ್ಧ ವಿವಾಹರದಲ್ಲಿ ರವಿವಾರ ಆಯೋಜಿಸಿದ್ದ ಧಮ್ಮ ರಕ್ಷಾಶೀಲ ಕಾರ್ಯಕ್ರಮ ಹಾಗೂ ಒಂದು ಜತೆ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಂತೇ ಅಮರಜ್ಯೋತಿ, ಬೌದ್ಧರ ಜೀವನ ಶೈಲಿ ಸಂಸ್ಕಾರಗಳು ಕುರಿತು ಬೋಧಿಸಿ, ಧಮ್ಮ ಮಾರ್ಗದಲ್ಲಿ ಮತ್ತು ಸಂವಿಧಾನ ಮಾರ್ಗದಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಮಹಾಪುರುಷರ ಚಿಂತನ ಮಂಥನ ಜತೆಗೆ ಧಾರ್ಮಿಕ ಕಾರ್ಯಗಳ ಮೂಲಕ ಜನರ ಕಲ್ಯಾಣಕ್ಕಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಶಾಂತಿವನ ಚರ್ಚ್ ಫಾದರ್ ಬಾಪು ಅತಿಥಿಯಾಗಿದ್ದರು. ಜಾಗತಿಕ ಲಿಂಗಾಯರ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಮಾತನಾಡಿ, ಬಂತೇ ಅಮರಜ್ಯೋತಿ ಅವರ ಜನ ಸಾಮಾನ್ಯರಿಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇದೇ ವೇಳೆ ಝಳಕಿ ಗ್ರಾಮದ ಬಸವರಾಜ ನಿಂಗದಳಿ, ವಾಗªರಿ ಗ್ರಾಮದ ಸ್ನೇಹಾ ಅವರ ವಿವಾಹ ನೆರವೇರಿತು. ಗ್ರಾಪಂ ಸದಸ್ಯೆ ಪಾರ್ವತಿ ಅಂಬರಾಯ, ರಾಜು ಮುದಗಲೆ, ಗೌತಮ ಕಾಂಬಳೆ, ಧಾರ್ಮಿಕ ಮುಖಂಡರು ಇತರರಿದ್ದರು.