Advertisement

ಕರಾವಳಿಯಲ್ಲಿ ಹೆಚ್ಚುತ್ತಿದೆ ಎಲೆಕ್ಟ್ರಿಕ್‌ ವಾಹನ ಒಲವು

09:33 AM Feb 28, 2020 | mahesh |

ಮಹಾನಗರ: ವಿದ್ಯುತ್‌ ಚಾಲಿತ ವಾಹನಗಳಿಗೆ ಕೇಂದ್ರ ಸರಕಾರ ಪ್ರೋತ್ಸಾಹ ನೀಡುತ್ತಿರುವ ಬೆನ್ನಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Advertisement

ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ ಉಭಯ ಜಿಲ್ಲೆಗಳಲ್ಲಿ 114 ಎಲೆಕ್ಟ್ರಿಕ್‌ ಬೈಕ್‌, 29 ಕಾರು ಮತ್ತು 4 ರಿಕ್ಷಾಗಳಿವೆ. ಹಲವು ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯ ನಿರೀಕ್ಷೆಯಲ್ಲಿವೆ. ಸದ್ಯ ಈ ವಾಹನಗಳಿಗೆ ಸಾರ್ವಜನಿಕ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆ ಇಲ್ಲ. ಹೀಗಾಗಿ ಮನೆಯಲ್ಲಿಯೇ ಚಾರ್ಜ್‌ ಮಾಡಲಾಗುತ್ತಿದೆ.

ಎಲೆಕ್ಟ್ರಿಕ್‌ ಆಟೋರಿಕ್ಷಾ ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 130 ಕಿ.ಮೀ. ಸಂಚರಿಸಬಲ್ಲುದು. ಚಾರ್ಜಿಂಗ್‌ಗೆ ನಾಲ್ಕು ತಾಸು ಅಗತ್ಯ. ತೈಲ ಇಂಧನ ಬಳಸುವ ಮತ್ತು ಎಲೆಕ್ಟ್ರಿಕ್‌ ರಿಕ್ಷಾದ ವೆಚ್ಚ ಹೆಚ್ಚುಕಮ್ಮಿ ಸಮಾನವಾಗಿರುತ್ತದೆ.

ಪರಿಸರಕ್ಕೆ ಪೂರಕ
ಮಂಗಳೂರಿನಲ್ಲಿ ಮೊದಲ ಎಲೆಕ್ಟ್ರಿಕ್‌ ರಿಕ್ಷಾ ಓಡಿಸುತ್ತಿರುವ ರಾಬರ್ಟ್‌ ಉಳ್ಳಾಲ ಅವರು “ಉದಯವಾಣಿ ಸುದಿನ’ ಜತೆಗೆ ಮಾತನಾಡಿ, ಎಲೆಕ್ಟ್ರಿಕ್‌ ರಿಕ್ಷಾ ಮಂಗಳೂರಿಗೆ ಮೊದಲ ಪರಿಚಯ. ಇದರ ಬಣ್ಣ ಭಿನ್ನವಾಗಿರುವುದರಿಂದ ಗಮನ ಸೆಳೆಯುತ್ತಿದೆ. ನಗರದಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಇಲ್ಲದಿರುವುದರಿಂದ ಮನೆಯಲ್ಲೇ ಚಾರ್ಜ್‌ ಮಾಡುತ್ತೇನೆ. ತುರ್ತಾಗಿ ಬೇಕಾದರೆ ಶೋರೂಂಗೆ ಹೋಗುತ್ತೇನೆ. ಇದು ಪರಿಸರಕ್ಕೆ ಪೂರಕ ಮತ್ತು ಹೆಚ್ಚು ನಿರ್ವಹಣೆ ಬಯಸದ ವಾಹನ ಎಂದಿದ್ದಾರೆ.

ಚಾರ್ಜಿಂಗ್‌ ಪಾಯಿಂಟ್‌ ಸಮಸ್ಯೆ!
ಮುಂದುವರಿದ ಬ್ಯಾಟರಿ ತಂತ್ರಜ್ಞಾನ ವಿದ್ಯುತ್‌ಚಾಲಿತ ವಾಹನಗಳ ಸಂಚಾರ ಸಾಮರ್ಥ್ಯ ಮತ್ತು ಬೆಲೆಗೆ ಸಂಬಂಧಿಸಿ ಇರುವ ಆತಂಕವನ್ನು ಕಡಿಮೆ ಮಾಡಬಹುದಾದರೂ ಸದ್ಯ ಇವು ಪೂರ್ಣಪ್ರಮಾಣದಲ್ಲಿ ರಸ್ತೆಗಿಳಿಯಲು ಸಮಸ್ಯೆಯಿದೆ. ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಅಡ್ಡಿ. ಸಾರ್ವಜನಿಕ ಜಾರ್ಜಿಂಗ್‌ ಸ್ಟೇಶನ್‌ ಸ್ಥಾಪಿಸಿದರೆ ಎಲೆಕ್ಟ್ರಿಕ್‌ ವಾಹನ ಖರೀದಿಗೆ ಹಲವರು ಉತ್ಸುಕರಾಗಿದ್ದಾರೆ.

Advertisement

ಬೇಡಿಕೆ ಹೆಚ್ಚಳ
ಎಲೆಕ್ಟ್ರಿಕ್‌ ವಾಹನಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಎಲೆಕ್ಟ್ರಿಕ್‌ ರಿಕ್ಷಾಗಳು ಮಾರುಕಟ್ಟೆಯಲ್ಲಿವೆ. ನಗರದಲ್ಲಿ ಚಾರ್ಜಿಂಗ್‌ ಪಾಯಿಂಟ್‌ಬೇಕು ಎಂದು ಗ್ರಾಹಕರಿಂದ ಆಗ್ರಹವಿದೆ.
– ರಾಮಕೃಷ್ಣ ರೈ, ಸಾರಿಗೆ ಅಧಿಕಾರಿ, ಮಂಗಳೂರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next