Advertisement

ಮತದಾನ ಪ್ರಮಾಣ ಹೆಚ್ಚಳ ಆರೋಗ್ಯಕಾರಿ ಬೆಳವಣಿಗೆ

06:00 AM May 15, 2018 | |

ಶನಿವಾರ ನಡೆದ ವಿಧಾನಸಭೆ ಚುನಾವಣೆ ಹಲವಾರು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. 222 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆದರೂ ರಾಜ್ಯದಲ್ಲಿ ಯಾವುದೇ ರೀತಿಯ ಹಿಂಸಾಚಾರವಾಗಲಿ, ಗಲಭೆಯಾಗಲಿ ನಡೆಯದೆ ಶಾಂತಿಯುತವಾಗಿತ್ತು. ಈ ಮಟ್ಟಿಗೆ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿ ನಿಲ್ಲುತ್ತದೆ. ಅಂತೆಯೇ ಮತದಾನ ಪ್ರಮಾಣವೂ ಈ ಸಲ ಸಾಕಷ್ಟು ಸುಧಾರಣೆ ಕಂಡಿದೆ.ಶೇ. 80 ಮತದಾನದ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಈ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೂ ದಾಖಲೆಯ ಶೇ. 72.36 ಮತದಾನವಾಗಿರುವುದು ಸಮಾಧಾನ ಕೊಡುವ ಸಂಗತಿ. ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದು ಅತ್ಯಧಿಕ.

Advertisement

ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಜನರನ್ನು ಮತಗಟ್ಟೆಗೆ ಸೆಳೆಯಲು ಚುನಾವಣಾ ಆಯೋಗ ಹಲವು ವಿನೂತನ ಕ್ರಮಗಳನ್ನು ಕೈಗೊಂಡಿತ್ತು. ಜತೆಗೆ ಸ್ವೀಪ್‌ ಮೂಲಕ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಹಲವು ಸಂಘಟನೆಗಳು ಮತ್ತು ಗಣ್ಯರು ಚುನಾವಣಾ ಆಯೋಗದ ಈ ಪ್ರಯತ್ನದಲ್ಲಿ ಕೈಜೋಡಿಸಿದ್ದರು. ಈ ಸತತ ಪ್ರಯತ್ನದ ಪರಿಣಾಮವಾಗಿ ಮತದಾನ ಪ್ರಮಾಣದಲ್ಲಿ ತುಸು ಏರಿಕೆಯಾಗಿದೆ. ಚಿಕ್ಕಬಳ್ಳಾಪುರ, ಹಾಸನ, ಹಾವೇರಿ ಮತ್ತಿತರ ಚಿಲ್ಲೆಗಳಲ್ಲಿ ಮತದಾನ ಪ್ರಮಾಣ ಶೇ.80 ದಾಟಿದೆ. ಕರಾವಳಿ ಜಿಲ್ಲೆಗಳಲ್ಲೂ ತೃಪ್ತಿಕರ ಪ್ರಮಾಣದಲ್ಲಿ ಮತದಾನವಾಗಿದೆ. ಹೀಗಾಗಿ ಐದು ವರ್ಷಕ್ಕೊಮ್ಮೆ ನಡೆಯುವ ಪ್ರಜಾತಂತ್ರದ ಹಬ್ಬದಲ್ಲಿ ಬಹುಪಾಲು ಜನರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ ಎನ್ನಬಹುದು. ಆದರೆ ಇದಕ್ಕೊಂದು ಅಪವಾದ ಬೆಂಗಳೂರು ನಗರ. 

ರಾಜ್ಯದ ಆಡಳಿತ ಕೇಂದ್ರವಿರುವ, ಅತಿ ಹೆಚ್ಚು ವಿದ್ಯಾವಂತರನ್ನೊಳಗೊಂಡಿರುವ ಬೆಂಗಳೂರಿನಲ್ಲಿ ರಾಜ್ಯದಲ್ಲಿಯೇ ಅತಿ ಕಡಿಮೆ ಮತದಾನವಾಗಿರುವುದು ಚಿಂತಿಸಬೇಕಾದ ವಿಚಾರ. ಬೆಂಗಳೂರಿನ ಮತದಾನ ಪ್ರಮಾಣ ಶೇ. 54.72. ಒಂದು ಮತಗಟ್ಟೆಯಲ್ಲಂತೂ ಸಂಜೆ 3 ಗಂಟೆಯ ತನಕ ಒಂದೇ ಒಂದು ಮತ ಚಲಾವಣೆಯಾಗಿರಲಿಲ್ಲವಂತೆ. ಇಡೀ ರಾಜ್ಯವೇ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವಾಗ ಅರ್ಧದಷ್ಟು ಬೆಂಗಳೂರಿಗರು ಅದರಿಂದ ದೂರವುಳಿದದ್ದು ವಿಷಾದನೀಯ. ರಾಜಕೀಯ ವ್ಯವಸ್ಥೆಯ ಬಗ್ಗೆಯಾಗಲಿ, ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆಯಾಗಲಿ ಅಥವಾ ಪಕ್ಷಗಳ ಬಗ್ಗೆಯಾಗಲಿ ಏನೇ ಅಸಮಾಧಾನ ಇದ್ದರೂ ಮತದಾನದಲ್ಲಿ ಭಾಗವಹಿಸದಿರುವುದು ಜವಾಬ್ದಾರಿಯುತ ಪ್ರಜೆಗಳ ಲಕ್ಷಣವಲ್ಲ. ವಾರಾಂತ್ಯದಲ್ಲಿ ಚುನಾವಣೆಯಿಟ್ಟರೆ ಜನರು ದೀರ್ಘ‌ ರಜೆಯ ಲಾಭ ಪಡೆದು ದೂರ ಹೋಗುವ ಸಾಧ್ಯತೆಯಿದೆ ಎಂಬ ಆತಂಕವನ್ನು ಬೆಂಗಳೂರಿಗರು ನಿಜ ಮಾಡಿದ್ದಾರೆ. 

ಈ ಚುನಾವಣೆಯಲ್ಲಿ ಬೆಂಗಳೂರಿನ ರಸ್ತೆಗಳ ಹೊಂಡಗುಂಡಿ, ಮಾಲಿನ್ಯದ ಕೊಂಪೆಯಾಗಿರುವ ಕೆರೆಗಳ ಸಹಿತ ಹಲವು ಜ್ವಲಂತ ಸಮಸ್ಯೆಗಳೂ ಚುನಾವಣಾ ವಿಷಯಗಳಾಗಿದ್ದವು. ಆದರೆ ಮತದಾನದಿಂದ ದೂರವುಳಿಯುವ ಮೂಲಕ ನಗರದ ಜನರು ಈ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದಂತಾಗಿದೆ. ಹೀಗೆ ಜವಾಬ್ದಾರಿಯಿಂದ ತಪ್ಪಿಸಿಕೊಂಡವರು ನಾಳೆ ಹೇಗೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತೀರಿ? 

ಈ ಸಲವೂ ಸಾಕಷ್ಟು ಅಕ್ರಮಗಳು ಆಗಿವೆ. ಮತದಾರರನ್ನು ಸೆಳೆಯಲು ಹಣ, ಹೆಂಡವನ್ನು ಯಥೇತ್ಛವಾಗಿ ಹಂಚಿರುವ ಕುರಿತು ಅನೇಕ ವರದಿಗಳು ಬಂದಿವೆ. ಚುನಾವಣಾ ಆಯೋಗ ಎಷ್ಟೇ ಕಣ್ಗಾವಲು ಇಟ್ಟರೂ ಇಂಥ ಅಕ್ರಮಗಳು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿರುವುದು ಪ್ರಜಾತಂತ್ರಕ್ಕೊಂದು ಕಪ್ಪುಚುಕ್ಕೆ. ಒಂದೆಡೆ ಜನರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವಾಗ ಇನ್ನೊಂದೆಡೆಯಿಂದ ಈ ರೀತಿಯ ಪ್ರಲೋಭನೆಗಳು ಹರಿದು ಬಂದರೆ ಪ್ರಜಾತಂತ್ರದ ಆರೋಗ್ಯದ ಬಗ್ಗೆ ನೈಜ ಕಾಳಜಿ ಇರುವವರಿಗೆ ಭ್ರಮೆ ನಿರಸನವಾಗುತ್ತದೆ. ಯಾವ ಕಾರಣಕ್ಕೂ ಹಣ ಮತ್ತು ತೋಳ್ಬಲ ಚುನಾವಣೆಯನ್ನು ಹೈಜಾಕ್‌ ಮಾಡದಂತೆ ನೋಡಿಕೊಳ್ಳಲು ಇನ್ನಷ್ಟು ಬಿಗು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. 

Advertisement

ಮತದಾನದ ನಡುವೆ ಮತಯಂತ್ರಗಳು ಕೈಕೊಡುವುದು, ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವುದು, ಒಂದೇ ಮನೆಯವರಿಗೆ ಬೇರೆ ಬೇರೆ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿರುವಂತಹ ದೂರುಗಳು ಈ ಸಲವೂ ಇದ್ದವು. ಹಲವೆಡೆ ಪದೇ ಪದೇ ವಿದ್ಯುತ್‌ ಕಡಿತವಾದ ದೂರು ಬಂದಿದೆ. ಇಂತಹ ಲೋಪಗಳನ್ನು ನಿವಾರಿಸಿಕೊಂಡರೆ ಮತದಾನ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನವಿಲ್ಲ. ಮುಂದಿನ ಚುನಾವಣೆಗಳಲ್ಲಿ ಮತಗಟ್ಟೆಯಲ್ಲಿ ತಾಸುಗಟ್ಟಲೆ ಸಾಲು ನಿಲ್ಲುವುದನ್ನು ತಪ್ಪಿಸಲು ಒಂದಕ್ಕಿಂತ ಹೆಚ್ಚು ಮತಯಂತ್ರಗಳನ್ನು ಇಡುವ ವ್ಯವಸ್ಥೆಯನ್ನು ಮಾಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next