Advertisement

ಹೆಚ್ಚುತ್ತಿದೆ ಅನಗತ್ಯ ಅಲೆದಾಟ

05:48 PM Mar 30, 2020 | Suhan S |

ಗದಗ: ಮಹಾಮಾರಿ ಕೋವಿಡ್ 19 ತಡೆಗಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಐದು ದಿನಗಳಾದರೂ ಜಿಲ್ಲೆಯಲ್ಲಿ ಅದರ ಗಂಭೀರತೆ ಕಾಣುತ್ತಿಲ್ಲ. ಅನಗತ್ಯವಾಗಿ ಅಲೆದಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಲಾಕ್‌ ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಸಕಾರಾಣವಿಲ್ಲದೇ ಅಲೆದಾಡುವವರ ಬೈಕ್‌ ವಶಪಡೆಸಿಕೊಳ್ಳುತ್ತಿದೆ.

Advertisement

ಸಾರ್ವಜನಿಕರ ಹಿತಕ್ಕಾಗಿ ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರ ಸಂಚಾರದ ನಿರ್ಬಂಧದಲ್ಲಿ ಸಡಲಿಕೆ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಯುವಕರು ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಬೈಕ್‌ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.

ಇಲ್ಲಿನ ಮಹಾತ್ಮ ಗಾಂಧಿ  ವೃತ್ತ, ರೋಟರಿ ಸರ್ಕಲ್‌, ಟಾಂಗಾಕೂಟ, ಭೂಮರೆಡ್ಡಿ ಸರ್ಕಲ್‌, ಮುಳಗುಂದ ನಾಕಾ ಸೇರಿದಂತೆ ವಿವಿಧೆಡೆ ಸುಮಾರು 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಲಾಠಿ ಏಟು: ಲಾಕ್‌ಡೌನ್‌ ಮಧ್ಯೆಯೂ ದಿನಸಿ ಖರೀದಿಗಾಗಿ ಜಿಲ್ಲಾಡಳಿತ ಬೆಳಗ್ಗೆ 7ರಿಂದ 10 ಗಂಟೆವರೆಗೆ ಸಮಯಾವಕಾಶ ನೀಡಿದೆ. ಆದರೆ ಕೆಲವರು ನಿಗದಿತ ಅವಧಿ  ಮೀರಿದ್ದರೂ ಅಲೆದಾಡುತ್ತಿದ್ದಾರೆ. ಅಂತಹವರನ್ನು ತಡೆದು ಪೊಲೀಸರು ಬೆತ್ತದ ರುಚಿ ತೋರಿಸಿದರು. ಇಲ್ಲಿನ ಬಸವೇಶ್ವರ ವೃತ್ತ, ರೋಟರಿ ಸರ್ಕಲ್‌ ಹಾಗೂ ಜೋಡು ಮಾರುತಿ ದೇವಸ್ಥಾನದ ಬಳಿ ಆಗೊಮ್ಮೆ-ಈಗೊಮ್ಮೆ ಲಾಠಿ ಬೀಸಿದರು.

ಮಾಂಸಕ್ಕೆ ಮುಗಿಬಿದ್ದ ಜನ: ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು, ಕೋವಿಡ್ 19  ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಮಾಂಸ, ಮದ್ಯವನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ರವಿವಾರ ಬೆಳಗ್ಗೆಯೇ ಇಲ್ಲಿನ ಜವಳಗಲ್ಲಿಯಲ್ಲಿ ವಿವಿಧ ಮಾಂಸದ ಅಂಗಡಿಗಳು ಭರ್ಜರಿ ವಹಿವಾಟು ನಡೆಸಿದವು. ಮಟನ್‌ ಹಾಗೂ ಚಿಕನ್‌ ಸೆಂಟರ್‌ಗಳಿಗೆ ಗ್ರಾಹಕರು ಮುಗಿಬಿದಿದ್ದರು. ಈ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಲಾಠಿ ಬೀಸುತ್ತಿದ್ದಂತೆ ಗ್ರಾಹಕರು ದಿಕ್ಕೆಟ್ಟು ಓಡಿದರೆ, ವರ್ತಕರು ಲಾಠಿ ಏಟಿಗೆ ಮಂಡಿಯೂರುವಂತಾಯಿತು.

Advertisement

ರಸ್ತೆ ಬಂದ್‌: ಇಲ್ಲಿನ ಹಳೇ ಡಿಸಿ ಕಚೇರಿ ಸರ್ಕಲ್‌ ಸಮೀಪದಲ್ಲಿರುವ ಕಾಶಿ ವಿಶ್ವನಾಥ ನಗರಕ್ಕೆ ಸ್ಥಳೀಯ ನಿವಾಸಿಗಳು ಸ್ವಯಂ ಪ್ರೇರಿತವಾಗಿ ನಿಷೇಧಾಜ್ಞೆ ಹೇರಿಕೊಂಡಿದ್ದಾರೆ. ಹಳೇ ಡಿಸಿ ಕಚೇರಿ ಸಮೀಪದ ಮುಖ್ಯ ರಸ್ತೆ ಹಾಗೂ ಎಪಿಎಂಸಿ ಗೇಟ್‌ನಿಂದ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್‌ ಮಾಡಿಕೊಂಡಿದ್ದಾರೆ. ಜೊತೆಗೆ ಇಬ್ಬರು ಸ್ಥಳೀಯ ಯುವಕರನ್ನು ಕಾವಲಿಗಿಟ್ಟು, ಸಾರ್ವಜನಿಕರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ತಾಲೂಕಿನ ಕಲ್ಲೂರು ಗ್ರಾಮಸ್ಥರೂ ಇದೇ ಕ್ರಮವನ್ನು ಅನುರಿಸಿದ್ದಾರೆ. ಗ್ರಾಮದ ಸುತ್ತಲೂ ಮುಳ್ಳಿನ ಕಂಟಿ ಹಾಕಿಕೊಂಡಿದ್ದರಿಂದ ಮುಳಗುಂದ, ಶಿರಹಟ್ಟಿ ಹಾಗೂ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next