Advertisement

ಕರಾವಳಿಯಲ್ಲಿ  ಹೆಚ್ಚುತ್ತಿದೆ “ಸಾರಿ’ಕೋವಿಡ್ ಪ್ರಕರಣ!

06:15 AM May 21, 2020 | mahesh |

“ಸಾರಿ’ ಪ್ರಕರಣ ಹೆಚ್ಚುತ್ತಿರುವುದು ವೈದ್ಯರಿಗೂ ಸವಾಲಾಗಿದ್ದು, ಹೇಗೆ ಕೋವಿಡ್ ಬಂತೆಂಬುದೇ ನಿಗೂಢವಾಗಿದೆ. ರೋಗಿಯ ಟ್ರಾವೆಲ್‌ ಹಿಸ್ಟರಿಯನ್ನು ಕೆದಕುವುದೊಂದೇ ವೈದ್ಯರಿಗಿರುವ ದಾರಿ ಎಂಬಂತಾಗಿದೆ.

Advertisement

ಮಂಗಳೂರು/ಉಡುಪಿ: ಸೋಂಕು ಬಾಧಿತರ ನೇರ ಅಥವಾ ದ್ವಿತೀಯ ಸಂಪರ್ಕದಿಂದ ಹರಡುತ್ತಿದ್ದ ಕೋವಿಡ್ ಇದೀಗ ಯಾವುದೇ ಸಂಪರ್ಕ ಅಥವಾ ಪ್ರಯಾಣದ ಇತಿಹಾಸ ಇಲ್ಲದವರನ್ನೂ ಬಾಧಿಸತೊಡಗಿದೆ. ಅದರಲ್ಲೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರನ್ನು ಮತ್ತಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಸುತ್ತಿದೆ.

ಮಂಗಳೂರಿನಲ್ಲಿ ತೀವ್ರ ಉಸಿರಾಟದ ಸಮಸ್ಯೆ (Severe Acute Respiratory Illness – SARI) ಯಿಂದ ಬಳಲುತ್ತಿರುವ ಒಟ್ಟು ಮೂರು ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಇಬ್ಬರಿಗೆ ಯಾವುದೇ ಪ್ರಯಾಣದ ಇತಿಹಾಸವಾಗಲೀ ಕೋವಿಡ್ ರೋಗಿಗಳ ಸಂಪರ್ಕವಾಗಲೀ ಇರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಕಳೆದ ವಾರ ಕೋವಿಡ್ ದೃಢಪಟ್ಟ ಸುರತ್ಕಲ್‌ನ 68 ವರ್ಷದ ಮಹಿಳೆ ಹಾಗೂ ಮೇ 18ರಂದು ಕೋವಿಡ್ ದೃಢಪಟ್ಟ ಯೆಯ್ನಾಡಿ ಬಾರೆಬೈಲ್‌ನ 55 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರು. ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದರು. ಗಂಟಲ ದ್ರವ ಮಾದರಿ ತಪಾಸಣೆಗೊಳಪಡಿಸಿದಾಗ ಕೊರೊನಾ ಇರುವುದು ಗೊತ್ತಾಗಿದೆ. ಯೆಯ್ನಾಡಿಯ ಮಹಿಳೆ ಮನೆಗೆಲಸಕ್ಕೆ ತೆರಳುತ್ತಿದ್ದವರು. ಆಕೆ ಹೋದ ಮನೆಗಳಲ್ಲಿ ಯಾರಿ
ಗಾದರೂ ಲಕ್ಷಣಗಳಿತ್ತೇ ಎಂಬುದನ್ನು ಕಲೆ ಹಾಕಬೇಕಿದೆ.

ಸುರತ್ಕಲ್‌ನ ಮಹಿಳೆ ಕಾಲು ನೋವಿನಿಂದ ಬಳಲುತ್ತಿರುವುದರಿಂದ ಮನೆ ಬಿಟ್ಟು ಹೊರಗೆ ತೆರಳುವುದು ಕಡಿಮೆಯೇ. ಹಾಗಿದ್ದಾಗ್ಯೂ ಆಕೆಗೆ ಕೋವಿಡ್ ಬಾಧಿಸಿರುವ ಮೂಲ ಹುಡುಕುವುದು ಸವಾಲಾಗಿದೆ ಎಂಬುದು ಕೋವಿಡ್ ಸೋಂಕಿತರ ಟ್ರ್ಯಾಕಿಂಗ್‌ ಸಿಸ್ಟಮ್‌ ನಿರ್ವಹಿಸುತ್ತಿರುವ ಬಿನಯ್‌ ಅವರ ಮಾತು. ಬುಧವಾರ ಕೋವಿಡ್ ದೃಢಪಟ್ಟ ಮಹಿಳೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದವರು. ಇವರಿಗೂ ತೀವ್ರ ಉಸಿ ರಾಟದ ಸಮಸ್ಯೆಯಿಂದಾಗಿ ಕೋವಿಡ್ ದೃಢಪಟ್ಟಿದೆ. ಆದರೆ ಆಕೆ ಬೆಂಗಳೂರಿನಲ್ಲಿ ಯಾವುದಾದರೂ ಕೋವಿಡ್ ರೋಗಿಗಳ ಸಂಪರ್ಕಕ್ಕೆ ಬಂದಿದ್ದರೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಉಡುಪಿಯ 2 ಪ್ರಕರಣ
ಉಡುಪಿಯ ಎರಡು ಪ್ರಕರಣಗಳಲ್ಲೂ ಹೀಗೇ ಆಗಿದೆ. ಕುಂದಾಪುರ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಬಳಿಕ ಪರೀಕ್ಷಿಸಿದಾಗ ಸೋಂಕು ದೃಢವಾಗಿದ್ದರೆ, ಕ್ಯಾನ್ಸರ್‌ ಬಾಧಿತ ಚಿತ್ರದುರ್ಗದ ಯುವತಿಯನ್ನು ಮುನ್ನಚ್ಚರಿಕೆ ಕ್ರಮ ವಾಗಿ ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿದೆ. ಕುಂದಾಪುರದ ವ್ಯಕ್ತಿ ಮುಂಬಯಿಯಿಂದ ಬಂದಿದ್ದರೂ ಕೋವಿಡ್ ದ ಸೋಂಕಿನ ಲಕ್ಷಣ ಕೊನೆಯ ವರೆಗೂ ಕಾಣಿಸಿಕೊಂಡಿರಲಿಲ್ಲ. ಚಿತ್ರದುರ್ಗದ ಯುವತಿಗಂತೂ ಪ್ರಯಾಣದ ಇತಿಹಾಸವೂ ಇಲ್ಲ. ಹೀಗಿರುವಾಗ ಏಕಾಏಕಿ ಕೋವಿಡ್ ಬಾಧಿಸಲು ಕಾರಣ ಏನೆಂಬುದು ಇನ್ನೂ ನಿಗೂಢವಾಗಿದೆ.

Advertisement

ಹರಡಲು ಕಾರಣವಾಗದಿರಿ
ತಪಾಸಣೆಗೆ ತೆರಳಿದರೆ ಕ್ವಾರಂಟೈನ್‌ ಮಾಡುತ್ತಾರೆಂಬ ಕಾರಣಕ್ಕೆ ಈಗಾಗಲೇ ಕೆಲವು ರೋಗಿಗಳು ಜ್ವರ, ಕೆಮ್ಮು, ಉಸಿರಾಟದ ತೊಂದರೆ ಹೊಂದಿದ್ದರೂ ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಪಾಸಣೆಗೊಳಪಡದೆ ಮನೆಯಲ್ಲೇ ಕುಳಿತರೆ ಇತರರಿಗೂ ಕೋವಿಡ್ ಹರಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಪರೀಕ್ಷೆ ಮಾಡಿದ ಎಲ್ಲರನ್ನೂ ಕ್ವಾರಂಟೈನ್‌ ಮಾಡುವುದಿಲ್ಲ. ಅಗತ್ಯ ಬಿದ್ದಲ್ಲಿ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌, ಇಲ್ಲವಾದರೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ. ಇನ್ನು ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಭೀತಿಯೂ ಶುರುವಾಗುವುದರಿಂದ ಭಯ ಬಿಟ್ಟು ಜನ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕಡ್ಡಾಯ ತಪಾಸಣೆಗೆ ಐಸಿಎಂಆರ್‌ ಸೂಚನೆ
ದೇಶಾದ್ಯಂತ “ಸಾರಿ’ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಭಾರತೀಯ ವೈದ್ಯಕೀಯ ಮಂಡಳಿ ಬಿಡುಗಡೆಗೊಳಿಸಿರುವ 5ನೇ ಆವೃತ್ತಿಯ ಮಾರ್ಗ ಸೂಚಿಯಲ್ಲಿ “ಸಾರಿ’ ಸಮಸ್ಯೆಯನ್ನು ಹೊಂದಿದ ಎಲ್ಲ ರೋಗಿಗಳನ್ನು ಕಡ್ಡಾಯವಾಗಿ ತಪಾಸಣೆ ಗೊಳಪಡಿಸಬೇಕು ಎಂದು ಸೂಚಿಸಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಜ್ವರ, ಕೆಮ್ಮು, ಕಫ ಕಾಣಿಸಿಕೊಂಡಲ್ಲಿ ತತ್‌ಕ್ಷಣವೇ ಸಮೀಪದ ವೈದ್ಯಕೀಯ ಕಾಲೇಜು, ವೆನ್ಲಾಕ್‌ ಆಸ್ಪತ್ರೆ ಅಥವಾ ಇತರ ಕುಟುಂಬ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಬೇಕೆಂದು ವೈದ್ಯರು ಮನವಿ ಮಾಡಿದ್ದಾರೆ. 38 ಡಿಗ್ರಿಗಿಂತ ಹೆಚ್ಚು ಜ್ವರ ಕಾಣಿಸಿಕೊಂಡಲ್ಲಿ ತಪಾಸಣೆ ತೀರಾ ಅಗತ್ಯ. ಅಸ್ತಮಾ, ದಮ್ಮು ಕಟ್ಟು ವಿಕೆಯಂತಹ ಕಾಯಿಲೆ ಇದ್ದವರೂ ಜ್ವರ ಬಂದಲ್ಲಿ ತಪಾಸಣೆಗೆ ಬರಬೇಕು ಎಂಬುದು ವೈದ್ಯರು ಮನವಿ.

ಕೋವಿಡ್ ಬಾರದಂತೆ ಎಚ್ಚರವಿರಲಿ
ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಔಷಧ ಇನ್ನೂ ಬಂದಿಲ್ಲ. ಸ್ವಯಂ ಅರಿವು ಮತ್ತು ಸ್ವಯಂ ರಕ್ಷಣೆಯೊಂದೇ ಇದು ಬಾರದಂತೆ ತಡೆಯಲು ಇರುವ ಮಾರ್ಗ. ಮಾಸ್ಕ್ ಧರಿಸುವುದು, ಭೌತಿಕವಾಗಿ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈ ತೊಳೆದುಕೊಳ್ಳುವುದನ್ನು ನಿರಂತರ ಪಾಲಿಸಿದರೆ ಕೋವಿಡ್ ಬಾರದಂತೆ ತಡೆಯಬಹುದು
ಡಾ| ದೀಪಕ್‌ ಮಡಿ, ಕೆಎಂಸಿ ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next