Advertisement

ಕ್ರೀಡೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ: ಕರುಣಾಕರ ಹೆಗ್ಡೆ

06:29 PM Jan 22, 2020 | Suhan S |

ಮುಂಬಯಿ, ಜ. 21: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ ಸದೃಢರನ್ನಾಗಿ ಪರಿವರ್ತಿಸುವ ಕ್ರಿಯಾಶೀಲತೆಯನ್ನು ಹೊಂದಿದೆ.

Advertisement

ಪ್ರಸ್ತುತ ಪೀಳಿಗೆಯನ್ನು ಹಿರಿಯರಾದ ನಾವು ಜ್ಞಾನ ವಿಕಾಸ ಮಾಡುವಲ್ಲಿ ಪ್ರಚೋದಿಸುತ್ತೇವೆಯೇ ವಿನಃ ಕ್ರೀಡೆಗೆ ಪ್ರೋತ್ಸಾಹಿಸುವುದಿಲ್ಲ. ವಿದ್ಯಾರ್ಥಿಗಳ ಭವ್ಯವಾದ ಭವಿಷ್ಯಕ್ಕೆ ಪಾಲಕರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಕ್ರೀಡೆಯಿಂದ ಸಿಗುವ ಮನರಂಜನೆ, ಆನಂದ, ಉಲ್ಲಾಸ, ಸೃಜನಶೀಲತೆ, ಉತ್ಸಾಹ, ನಿರ್ಮಲವಾದ ಮನಸ್ಸು ಇತ್ಯಾದಿಗಳು ಮತ್ತೂಂದರಿಂದ ಲಭಿಸಲು ಸಾಧ್ಯವಿಲ್ಲ. ಭ್ರಮಣಧ್ವನಿಯ ವಿಪರೀತ ಬಳಕೆಯಿಂದ ಯುವ ಪೀಳಿಗೆಯು ಕ್ರೀಡೆಯಿಂದ, ಅಧ್ಯಯನದಿಂದ, ವಿಚಾರ- ವಿಮರ್ಶೆಗಳಿಂದ ಬಹುದೂರ ಉಳಿದು ಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಕೊಳ್ಳದೆ, ಜಾಗೃತಿಯ ಮನೋಭಾವನೆಯನ್ನು ನಿರ್ಮಿಸಿಕೊಳ್ಳುವಲ್ಲಿ ಪ್ರಯತ್ನಶೀಲರಾಗಬೇಕು ಎಂದು ಕರುಣಾಕರ ನಾರಾಯಣ ಹೆಗ್ಡೆ ನುಡಿದರು.

ವಿದ್ಯಾ ಪ್ರಸಾರಕ ಮಂಡಲವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಲ್‌. ಡಿ. ಚಾರ್‌ ಸ್ಮರಣಾರ್ಥ ಅಂತರ್‌ ಶಾಲಾ ಕ್ರೀಡಾ ಮತ್ತು ಪಥ ಸಂಚಲನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಯಾವುದೇ ಕೆಲಸ ಕಾರ್ಯವಿರಲಿ ಸ್ವ-ಇಚ್ಛೆಯಿಂದ ಆಸಕ್ತಿ ಭರಿತರಾಗಿ ಪ್ರಯತ್ನ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ಪೂರ್ವ ಯೋಜನೆಯ ಮೂಲಕ ಮಾಡಿಕೊಂಡು ಬಂದರೆ ಅವರವರ ಭವ್ಯವಾದ ಭವಿಷ್ಯವನ್ನು ರೂಪಿಸಿಕೊಳ್ಳುವ ಮಹಾನ್‌ ಶಿಲ್ಪಿಗಳಾಗುತ್ತಿರಿ ಎಂದರು.

ವಿದ್ಯಾ ಪ್ರಸಾರಕ ಮಂಡಳದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ| ಪಿ. ಎಂ. ಕಾಮತ್‌ ಅವರು ಅತಿಥಿಗಳನ್ನು ಗೌರವಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸ್ಪರ್ಧೆಯು ಮನುಷ್ಯನಜೀವನದಲ್ಲಿ ಹೆಚ್ಚು ಅನುಭವವನ್ನು ತಂದುಕೊಡುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಜಯ-ಅಪಜಯ ಒಂದೇ ನಾಣ್ಯದ ಎರಡು ಮುಖಗಳು. ಸೋಲೇ ಗೆಲುವಿನ ಮೂಲವಾಗಿದೆ. ಸೋತವರು ಆತ್ಮ ವಿಮರ್ಶೆಯನ್ನು ಮಾಡಿಕೊಂಡರೆ ಗೆಲುವಿನ ಪತಾಕೆ ಲಭಿಸುತ್ತದೆ ಎಂದು ನುಡಿದು, ಕಾರ್ಯಕ್ರಮವನ್ನು ಸಂಘ ಟಿಸಿ, ಯಶಸ್ವಿಗೊಳ್ಳಲು ಕಾರಣರಾದ ಶಿಕ್ಷಕರಿಗೆ, ವಿಜೇತ ವಿದ್ಯಾರ್ಥಿ ತಂಡಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಶುಭ ಹಾರೈಸಿದರು.

ಈ ಮೊದಲು 40ನೇ ಕ್ರೀಡಾಕೂಟಕ್ಕೆ ಮತ್ತು ಪಥಸಂಚಲನೆಗೆ ಮುಲುಂಡ್‌ ವಲಯದ ನಗರ ಸೇವಕಿ ರಜನಿ ಕೇಣಿಯವರು ಚಾಲನೆ ನೀಡಿದರು. ಅವರನ್ನು ಕಾರ್ಯದರ್ಶಿಗಳಾದ ವಿಜಯ ಕುಲಕರ್ಣಿ ಗೌರವಿಸಿದರು.

Advertisement

ಕರುಣಾಕರ ನಾರಾಯಣ, ಡಾ| ಪಿ. ಎಂ. ಕಾಮತ್‌, ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ್‌ ಮುಳುಗುಂದ, ಮುಖ್ಯ ಶಿಕ್ಷಕಿಸುವಿನಾ ಶೆಟ್ಟಿ ಮತ್ತು ಅರುಣಾ ಭಟ್‌ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸುಮಾರು 21 ಶಾಲೆಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮವು ಶಿಕ್ಷಕಿ ಜಯಂತಿ ಐಲ್‌ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಂತರ್‌ ಶಾಲಾ ಶಿಕ್ಷಕರ ಹೆಸರುಗಳನ್ನು ಶಿಕ್ಷಕ ಅಂಬಾಜೆಪ್ಪಾ ಕಾಟಗಾಂವ್‌ ಓದಿದರೆ, ವಿಜೇತ ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ಅಶ್ವಿ‌ನಿ ಬಂಗೇರ ಘೋಷಿಸಿದರು. ಸುನೀತಾ ಮಠ ಅವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next