Advertisement
ಕಳೆದ ಕೆಲವು ವರ್ಷಗಳಿಂದ ಬಾಧಿಸುತ್ತಿರುವ ಡೆಂಗ್ಯೂ ಈಗ ಕೊರೊನಾ ಕಾಲಘಟ್ಟದಲ್ಲಿ ಕಂಡು ಬಂದಿದೆ. ಈ ಎರಡಕ್ಕೂ ಏಕಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ಸಂಕಟ ಆರೋಗ್ಯ ಇಲಾಖೆಯದ್ದಾದರೆ, ಇವೆರಡರ ಮಧ್ಯೆ ಚಿಕಿತ್ಸೆ ಪಡೆಯಬೇಕಾದ ಸಂಕಟ ಜನರದ್ದಾಗಿದೆ. ಅಕಾಲಿಕ ಮಳೆ ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
Related Articles
Advertisement
ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯ ಕರ್ತೆಯರು ಮನೆ ಮನೆ ಭೇಟಿ ಮಾಡುವ ಸಂದ ರ್ಭದಲ್ಲಿ ಹೌಸ್ ಇಂಡೆಕ್ಸ್ ಆಧಾರದಲ್ಲಿ ಡೆಂಗ್ಯೂ ಬಾಧಿತ ಪ್ರದೇಶ ನಿರ್ಧರಿಸುತ್ತಾರೆ. ಸರ್ವೇ ಮಾಡಿದ ಮನೆಗಳ ಪೈಕಿ ಲಾರ್ವಾ ಕಂಡು ಬಂದ ಮನೆಗಳನ್ನು ಒಟ್ಟು ಮನೆಗಳೊಂದಿಗೆ ಹೋಲಿಕೆ ಮಾಡಿ ಬಾಧಿತ ಪ್ರದೇಶವನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ 20 ಮನೆಗಳನ್ನು ಸರ್ವೇ ಮಾಡಿದಾಗ ಅದರಲ್ಲಿ 5 ಮನೆ ಪರಿಸರದಲ್ಲಿ ಲಾರ್ವಾ ಉತ್ಪಾದನೆ ಅಂಶ ಗೋಚರಿಸಿದರೆ ಆಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. 20 ರಲ್ಲಿ 1 ಮನೆಯಲ್ಲಿ ಲಕ್ಷಣ ಕಂಡು ಬಂದಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ಗುರುತಿಸಿ ರೋಗ ನಿಯಂತ್ರಣಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ.
ಫಾಗಿಂಗ್ ಸೂಕ್ತ :
ಡೆಂಗ್ಯೂ ಪ್ರಕರಣ ದೃಢಪಟ್ಟ ವ್ಯಕ್ತಿಯ ಪರಿಸರದಲ್ಲಿ 24 ತಾಸಿನೊಳಗೆ ಫಾಗಿಂಗ್ ಮೂಲಕ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಒಂದು ವಾರ ಬಿಟ್ಟು ಮಾಡಿದರೆ ಅದರಿಂದ ಪ್ರಯೋಜನ ಶೂನ್ಯ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜ್ವರ ಇಡೀ ಊರಿಗೆ ಹರಡುವ ಸಾಧ್ಯತೆ ಇದೆ.
ಲಾರ್ವಾ ನಾಶಕ್ಕೆ ಗಪ್ಪಿ ಮೀನು :
ಡೆಂಗ್ಯೂ, ಮಲೇರಿಯಾ ಲಾರ್ವಾಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಬಳಕೆಗೆ ಆರೋಗ್ಯ ಇಲಾಖೆ ವಿನಂತಿಸಿದೆ. ಇವುಗಳು ಲಾರ್ವಾ (ಸೊಳ್ಳೆಯ ಮೊಟ್ಟೆ)ಯನ್ನು ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲೇ ನಿಯಂತ್ರಣ ಮಾಡಲು ಸಾಧ್ಯವಿದೆ. 1 ಸೆ.ಮೀ.ಉದ್ದ ಇರುವ ಈ ಮೀನುಗಳಿಗೆ ಲಾರ್ವಾ ಗಳೇ ಆಹಾರ. ಪ್ರತೀ ತಾಲೂಕು ಆರೋಗ್ಯ ಇಲಾಖೆ ಯಲ್ಲಿ ಈ ಮೀನನ್ನು ಉಚಿತವಾಗಿ ನೀಡಲಾಗುತ್ತಿದ್ದು ಮನೆ, ವಠಾರದಲ್ಲಿ ನೀರು ನಿಲ್ಲುವ ಅಥವಾ ಸಂಗ್ರಹಿಸುವ ಸಾಧನಗಳಲ್ಲಿ ಈ ಮೀನನ್ನು ಸಾಕಬೇಕು ಎನ್ನುತ್ತದೆ ಆರೋಗ್ಯ ಇಲಾಖೆ.
ಲಾರ್ವಾ ಉತ್ಪತ್ತಿಯಾಗಲು ಕಾರಣವಾಗುವ ಅಂಶಗಳನ್ನು ಗುರುತಿಸಿ ಅದರ ನಿಯಂತ್ರಣಕ್ಕೆ ಆದ್ಯತೆ ನೀಡುವುದೇ ಡೆಂಗ್ಯೂ ತಡೆಗೆ ಇರುವ ಉತ್ತಮ ದಾರಿ. ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಹರಡುವಿಕೆ ಪ್ರಮಾಣ ಏರಿಕೆ ಕಂಡಿದೆ. -ಡಾ| ನವೀನ್ ಚಂದ್ರ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ, ಮಂಗಳೂರು
-ಕಿರಣ್ ಪ್ರಸಾದ್ ಕುಂಡಡ್ಕ