Advertisement
ಅಳಿವೆ ಪ್ರದೇಶದಲ್ಲಿ ಮರಳು ದಿಬ್ಬ ನಿರ್ಮಾಣಗೊಂಡಿದ್ದು, ಬೋಟುಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಮತ್ತು ಹೊರ ಹೋಗಲು ಹರಸಾಹಸ ಪಡುವಂತಾಗಿದೆ. ಮರಳು ದಿಬ್ಬಗಳ ಆಳ- ಎತ್ತರ ವನ್ನು ಅಂದಾಜಿಸಲಾಗದೆ ಅನೇಕ ಬೋಟುಗಳು ಅವಘಡಕ್ಕೀಡಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹೂಳೆತ್ತಲು ಮುಂದಾಗುತ್ತಿಲ್ಲ ಎನ್ನುವುದು ಮೀನುಗಾರರ ಅಳಲು. ಗಂಗೊಳ್ಳಿಯಲ್ಲಿ ಅನುಷ್ಠಾನಗೊಂಡಿರುವ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಪ್ರದೇಶ ಹೂಳೆತ್ತಲು ಅನುದಾನ ಮೀಸಲಿರಿ ಸಲಾಗಿದ್ದು, ಗುತ್ತಿಗೆದಾರರು ಹೂಳೆತ್ತಲು ಮೀನಮೇಷ ಎಣಿಸುತ್ತಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡು ವರ್ಷ ಕಳೆಯುತ್ತಿದ್ದರೂ ಬ್ರೇಕ್ ವಾಟರ್ ಕಾಮಗಾರಿಯ ಪ್ರಸ್ತಾವನೆಯಲ್ಲಿ ಹೂಳೆತ್ತುವ ಕಾಮಗಾರಿ ಇದ್ದರೂ ಹೂಳೆತ್ತದೇ ಇರುವುದು ಸ್ಥಳೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರೇಕ್ ವಾಟರ್ ಕಾಮಗಾರಿ ವೇಳೆ ಕೋಡಿ ಪ್ರದೇಶದಲ್ಲಿ ರಾಶಿ ಹಾಕಲಾದ ಮರಳನ್ನು ಅಲ್ಲಿಂದ ತೆಗೆಯದೆ ಬಿಟ್ಟಿದ್ದರಿಂದ ಈಗ ಪಂಚಗಂಗಾವಳಿ ಹೊಳೆಯಲ್ಲಿ ಮರಳು ದಿಬ್ಬ ಸಂಗ್ರಹವಾಗಿದೆ. ಈ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವುದರ ಜತೆಗೆ ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗಿ ದಿಬ್ಬಗಳಾಗಿವೆ. ನದಿಯಲ್ಲಿ ಅಲ್ಲಲ್ಲಿ ಮರಳ ದಿಬ್ಬ ಸೃಷ್ಟಿಯಾಗುತ್ತಿರುವುದರಿಂದ ನದಿ ಪಾತ್ರವೇ ಬದಲಾಗುವ ಆತಂಕ ಕೂಡ ಎದುರಾಗಿದೆ. ಜತೆಗೆ ಗಂಗೊಳ್ಳಿ ಬಂದರು ಹಾಗೂ ಕೋಡಿಯಿಂದ ಮೀನುಗಾರಿಕೆಗೆ ತೆರಳುವ ಬೋಟುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದೇನು ಸಮಸ್ಯೆ?
ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಭರತದ ಸಮಯ ನೋಡಿ ಬೋಟುಗಳು ಬಂದರು ಒಳಗೆ ಬರುವುದು ಮತ್ತು ಹೊರಗೆ ಹೋಗಬೇಕಾಗಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮರಳು ಶೇಖರಣೆಯಾದ್ದರಿಂದ ಕಳೆದ ಒಂದು ತಿಂಗಳೊಳಗೆ ಮೂರು ಬೋಟುಗಳು ಮರಳ ದಿಬ್ಬಕ್ಕೆ ಢಿಕ್ಕಿ ಹೊಡೆದು ಮರಳಲ್ಲಿ ಹೂತು ಹೋದ ಘಟನೆ ನಡೆದಿದೆ.
Related Articles
Advertisement
ಹೂಳೆತ್ತುವ ಸಂಬಂಧ ಮುಂಬಯಿಯ ಸಂಸ್ಥೆಯೊಂದು ಸರ್ವೇ ಮಾಡಿದ್ದು, ಅದರ ವರದಿಗೆ ಕಾಯುತ್ತಿದ್ದೇವೆ. ಆ ವರದಿ ಆಧರಿಸಿ ಕರಡು ತಯಾರಿಸಿ, ಸರಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅಳಿವೆ, ಜೆಟ್ಟಿ ಮತ್ತು ಮ್ಯಾಂಗನೀಸ್ ಜೆಟ್ಟಿ ಹೂಳೆತ್ತಲು 2 ಕೋ.ರೂ. ಬೇಕಾಗಬಹುದು. ಬ್ರೇಕ್ ವಾಟರ್ ಕಾಮಗಾರಿಯ ಪ್ರಸ್ತಾವನೆಯಲ್ಲಿ ಹೂಳೆತ್ತುವ ಕಾಮಗಾರಿ ಸೇರಿಲ್ಲ. ಹೀಗಾಗಿ ಬೇರೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಮೀನುಗಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅರಿವಿದ್ದು, ಶೀಘ್ರ ಹೂಳೆತ್ತಲು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ. – ಉದಯಕುಮಾರ್, ಸ.ಕಾ. ಎಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ, ಉಡುಪಿ