ಲಂಡನ್: ಕೋವಿಡ್-19 ಇಂಗ್ಲೆಂಡ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದು ನಿರುದ್ಯೋಗ ಭತ್ತೆ ಕೋರುತ್ತಿರುವವರ ಸಂಖ್ಯೆ ಶೇ. 69ರಷ್ಟು ಏರಿಕೆಯಾಗಿದೆ.
ಕೋವಿಡ್ ವೈರಸ್ ದೇಶದ ಕಾರ್ಮಿಕ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಉಂಟುಮಾಡಿದ್ದು, ಎಪ್ರಿಲ್-ಜೂನ್ ಅವಧಿಯಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ. 10ಕ್ಕೇರಬಹುದೆಂದು ಅಂದಾಜಿಸಲಾಗಿದೆ.
ಮಾಲಕರು ತಾತ್ಕಾಲಿಕ ರಜೆ ಮೇಲೆ ಕಳುಹಿಸಿರುವ ಕಾರ್ಮಿಕರ ವೇತನದ ಶೇ. 80 ಭಾಗವನ್ನು ಭರಿಸುವ ಕಾರ್ಯಕ್ರಮವನ್ನು ಸರಕಾರ ಹಾಕಿಕೊಳ್ಳದೆ ಇರುತ್ತಿದ್ದಲ್ಲಿ ನಿರುದ್ಯೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಸರಕಾರದ ವೇತನ ಸಬ್ಸಿಡಿಯಿಂದಾಗಿ ಈಗಿನ ಮಟ್ಟಿಗೆ ಕೆಲ ಉದ್ಯೋಗಗಳು ನಷ್ಟವಾಗುವುದು ತಪ್ಪಿದೆ. ಆದರೆ ಆಗಸ್ಟ್‌ನಿಂದ ಸಂಸ್ಥೆಗಳೇ ವೇತನ ನೀಡಬೇಕಾಗಿದ್ದು ಅವು ಹೇಗೆ ಪ್ರತಿಕ್ರಿಯಿಸುವುವು ಎಂಬುದು ಈಗ ಸ್ಪಷ್ಟವಿಲ್ಲ ಎಂದು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ನ ಮುಖ್ಯ ಅರ್ಥಶಾಸ್ತ್ರಜ್ಞ ತೇಜ್ ಪಾರಿಖ್ ಹೇಳುತ್ತಾರೆ.
ಫೆಬ್ರವರಿ – ಎಪ್ರಿಲ್ ಅವಧಿಯಲ್ಲಿ 1,70,000 ಮಂದಿ ಉದ್ಯೋಗ ಕಳಕೊಂಡಿದ್ದು ಈ ಪೈಕಿ ಆತಿಥ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯೋಗ ನಷ್ಟವಾಗಿದೆ. ಇಂಗ್ಲೆಂಡ್ 300 ವರ್ಷಗಳಲ್ಲೇ ಆತಿದೊಡ್ಡ ಆರ್ಥಿಕ ಕುಸಿತಕ್ಕೆ ಈಡಾಗಬಹುದೆಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಎಚ್ಚರಿಸಿದೆ.
ಸದ್ಯ 80 ಲಕ್ಷ ಉದ್ಯೋಗಿಗಳನ್ನು ವೇತನ ಸಬ್ಸಿಡಿ ಮೂಲಕ ರಕ್ಷಿಸಲಾಗಿದೆ ಮತ್ತು ಸಮಾನ ಕಾರ್ಯಕ್ರಮದಡಿ ಸ್ವದ್ಯೋಗಿಗಳಿಂದ 20 ಲಕ್ಷಕ್ಕಿಂತ ಅಧಿಕ ಹೇಳಿಕೆಗಳು ಬಂದಿವೆ ಎಂದು ವಿತ್ತ ಸಚಿವ ರಿಷಿ ಸುನಾಕ್ ಹೇಳಿದ್ದಾರೆ.