Advertisement

ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಕಪ್ಪು ಶಿಲೀಂಧ್ರ ಪ್ರಕರಣಗಳು

06:54 PM May 30, 2021 | Team Udayavani |

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದಂತೆ ಬ್ಲ್ಯಾಕ್ ಫಂಗಸ್‌ ತೀವ್ರವಾಗಿದೆ. ಕಪ್ಪು ಶಿಲೀಂಧ್ರ ಪ್ರಕರಣಗಳು ದಿನಗಳೆದಂತೆ ಹೆಚ್ಚುತ್ತಿವೆ. ಅಲ್ಲದೇ, ತಕ್ಷಣಕ್ಕೆ ಅಗತ್ಯ ಔಷಧ ಲಭ್ಯವಾಗುತ್ತಿಲ್ಲ. ಇದರಿಂದ ಸಕ್ಕರೆ ರೋಗ ಸೇರಿದಂತೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಆತಂಕದ ಛಾಯೆ ಆವರಿಸುತ್ತಿದೆ.

Advertisement

ಒಟ್ಟು 27 ಕಪ್ಪು ಶಿಲೀಂಧ್ರ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ ಮೂವರಿಗೆ ಬ್ಲ್ಯಾಕ್‌ ಫಂಗಸ್‌(ಮ್ಯೂಕರ್‌ ಮೈಕೋಸಿಸ್‌) ಒಳಗಾಗಿದೆ. ಇನ್ನುಳಿದ 24 ಜನರಿಗೆ (ಶಂಕಿತರು) ಕಪ್ಪು ಶಿಲೀಂಧ್ರ ಸೋಂಕು ತಗುಲಿರುವ ಸಾಧ್ಯತೆ ಇದೆ. ಬ್ಲ್ಯಾಕ್  ಫಂಗಸ್‌ ಖಚಿತಪಟ್ಟ ಮೂವರು ಸೇರಿದಂತೆ ಒಟ್ಟು 20 ಜನರು ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 7 ಜನರು ಮನೆಯಲ್ಲೇ ಚಿಕಿತ್ಸೆಗೊಳಗಾಗಿದ್ದಾರೆ. ಅಲ್ಲದೇ ನಾನಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಕಪ್ಪು ಶಿಲೀಂಧ್ರದ ಸಮಸ್ಯೆ ಕಾಡಬಹುದು ಎಂಬುದು ವೈದ್ಯರ ಆತಂಕ. 12 ದಿನದಲ್ಲಿ 27 ಪ್ರಕರಣಗಳು: ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಸಂಶಯಾಸ್ಪದ ಸೇರಿದಂತೆ ಒಟ್ಟು 27 ಜನರಿಗೆ ಬ್ಲ್ಯಾಕ್  ಫಂಗಸ್‌ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಮೇ 17ರಂದು ಮೊದಲ ಬಾರಿಗೆ ಇಬ್ಬರಿಗೆ ಬ್ಲ್ಯಾಕ್  ಫಂಗಸ್‌ ಸೋಂಕು ದೃಢಪಟ್ಟಿದೆ. ಆನಂತರ ಮೇ 20 ರಂದು 3, ಮೇ 21 ರಂದು 3, ಮೇ 22 ರಂದು 4 ಸೇರಿದಂತೆ ಒಟ್ಟು 27 ಜನರಲ್ಲಿ ಸೋಂಕು ಕಂಡು ಬಂದಿದೆ. ಅದರಲ್ಲಿ ಈವರೆಗೆ ಒಟ್ಟು 3 ಪ್ರಕರಣಗಳು ದೃಢಪಟ್ಟಿವೆ. 24 ಪ್ರಕರಣಗಳು ಸಂಶಯಾಸ್ಪದವಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಹೆಚ್ಚುತ್ತಿದೆ ಕಪ್ಪು ಶಿಲೀಂಧ್ರ ಉಪಟಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಪ್ಪು ಶಿಲೀಂಧ್ರದ ಸೋಂಕಿನ ಉಪಟಳ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಅಗತ್ಯ ಔಷ  ಧ ಪೂರೈಕೆಯಾಗುತ್ತಿಲ್ಲ. ಕಪ್ಪು ಶಿಲೀಂಧ್ರಕ್ಕೆ ಬೇಕಿರುವ “ಲೈಫೋಸೋಮಲ್‌ ಆಂಫೋಟೆರಿಸಿನ್‌ ಬಿ’ ಔಷಧವನ್ನು ಮೊದಲ 10 ದಿನ ಕಡ್ಡಾಯವಾಗಿ ನೀಡಬೇಕು. ಆದರೆ, “ಲೈಫೋಸೋಮಲ್‌ ಆಂಫೋಟೆರಿಸಿನ್‌ ಬಿ” ಅತ್ಯಂತ ದುಬಾರಿಯಾಗಿದ್ದು, ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬ್ಲ್ಯಾಕ್  ಫಂಗಸ್‌ ಮೂಗಿನಲ್ಲಿ ಉತ್ಪತ್ತಿಯಾಗಿ ಕಣ್ಣು ಮತ್ತು ಮೆದುಳಿಗೆ ಪ್ರವೇಶಿಸುತ್ತದೆ. ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು, ಇದು ಕಂಡು ಬಂದ ಮೂರ್ನಾಲ್ಕು ದಿನಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲೇಬೇಕು. ವಿಳಂಬ ಮಾಡಿದರೆ, ವ್ಯಕ್ತಿ ಬದುಕುಳಿಯುವುದೇ ಕಷ್ಟ. ಈ ಹಿನ್ನೆಲೆಯಲ್ಲಿ ಕಪ್ಪು ಶಿಲೀಂಧ್ರದಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಅಗತ್ಯ ಪ್ರಮಾಣದಲ್ಲಿ ಚುಚ್ಚುಮದ್ದು ಪೂರೈಸಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next