Advertisement

ನಿವೇಶನ ಹಂಚಿಕೆಗೆ ಹೆಚ್ಚುತ್ತಿದೆ ವಸತಿ ರಹಿತರ ಬೇಡಿಕೆ

12:21 AM Mar 21, 2020 | Team Udayavani |

ಬೆಳ್ತಂಗಡಿ: ಇತಿಹಾಸದಲ್ಲೇ ಮೊದಲ ಬಾರಿಗೆ ಪ.ಪಂ. ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಬಿಜೆಪಿಗೆ ಮೀಸ ಲಾತಿ ಗೊಂದಲದಿಂದ ಸಿಕ್ಕಿದ ಅಧಿಕಾರ ಅವಕಾಶವೂ ವಿಳಂಬವಾಗಿತ್ತು. ಇತ್ತ ಕಳೆದ ವಾರ ರಾಜ್ಯ ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ್ದರೂ ಸಿಂಧ ನೂರು ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಿಂದ ಮತ್ತೆ ನಿರಾಸೆ ಮೂಡಿಸಿದೆ.

Advertisement

ನೂತನ ಆಡಳಿತ ಮಂಡಳಿ ಬಂದರೂ ಹಲವು ಸವಾಲುಗಳನ್ನು ಎದುರಿಸಲು ಸನದ್ಧ ವಾಗಬೇಕಿದೆ. ಈಗಾ ಗಲೇ ಬೆಳ್ತಂಗಡಿ ಪ.ಪಂ. ವ್ಯಾಪ್ತಿಗೊಳಪಟ್ಟಂತೆ ನಿವೇಶನ ಹಂಚಿಕೆ ಸವಾಲಾಗಿರುವ ನಡುವೆಯೇ ನಿವೇಶನ ರಹಿತ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಅಂದಾಜು ಪ್ರಕಾರ 8,300ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ನಡುವೆ 400ಕ್ಕೂ ಹೆಚ್ಚು ಮಂದಿ ನಿವೇಶನ ಬೇಡಿಕೆಯಲ್ಲಿದ್ದರೆ, ಅನೇಕ ಮಂದಿ ಮೂಡ ಕಾನೂನಿನ ಅಡೆತಡೆಯಿಂದ ಪೇಟೆ ಬಿಟ್ಟು ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

155 ನಿವೇಶನ ಹಸ್ತಾಂತರ
ನಿವೇಶನ ರಹಿತರ ಅರ್ಜಿಯಂತೆ 2000-01ರಲ್ಲಿ ಮೊದಲ ಬಾರಿಗೆ ವಾರ್ಡ್‌ ನಂ. 7ರ ರೆಂಕೆದಗುತ್ತು ಎಂಬಲ್ಲಿ ಆಶ್ರಯ ಯೋಜನೆಯಡಿ ಬಡಾವಣೆ ನಿರ್ಮಿಸಿ ಎರಡು ಮುಕ್ಕಾಲು ಸೆಂಟ್ಸ್‌ನಂತೆ 108 ನಿವೇಶನ ಹಂಚಿಕೆ ಮಾಡಲಾಗಿತ್ತು. ಇದರ ಹೊರತಾಗಿ 2012-14ರಲ್ಲಿ ವಾರ್ಡ್‌ ನಂ. 9ರ ಹುಣ್ಸೆಕಟ್ಟೆ ಎಂಬಲ್ಲಿ ಪ. ಜಾತಿ, ಪ. ಪಂಗಡದ 47 ಕುಟುಂಬಗಳಿಗೆ ನಿವೇಶನ ಒದಗಿಸಿತ್ತು. 2019-20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರಸಕ್ತ ವಾರ್ಡ್‌ ನಂ. 2ರ ಕಲ್ಲಗುಡ್ಡೆ ಎಂಬಲ್ಲಿ ನಿವೇಶನ ಗುರುತಿಸಲಾಗಿದ್ದು, ಹಕ್ಕುಪತ್ರ ಬರುವ ಹಂತದಲ್ಲಿದೆ.

ಉಳಿದಂತೆ ಸುಮಾರು 400ಕ್ಕೂ ಹೆಚ್ಚು ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸವಾಲಿದ್ದು, 10ರಿಂದ 12 ಎಕ್ರೆ ಸ್ಥಳಾವಕಾಶ ಅಗತ್ಯವಿದೆ. ಈ ಕುರಿತಾಗಿ ಪ.ಪಂ. ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್‌ ಹಾಗೂ ಶಾಸಕರು ನಿವೇಶನ ಗುರುತಿಸುವ ಪ್ರಯತ್ನದಲ್ಲಿದ್ದಾರೆ. ಸರಕಾರಿ ಸ್ಥಳಾವಕಾಶ ಇಲ್ಲದಿದ್ದಲ್ಲಿ ಖಾಸಗಿಯಾಗಿ ಎಕ್ರೆಗೆ 12 ಲಕ್ಷ ರೂ.ನಂತೆ ಖರೀದಿಸುವ ಅವಕಾಶವೂ ಇದೆ. ಆದರೆ ಅದರ ಅನುಷ್ಠಾನಕ್ಕೆ ಮುಂದಾಗಬೇಕಿದೆ.

ಮೂಡ ಸಮಸ್ಯೆ ಬಗೆಹರಿಯುವುದೇ?
ಮೂಡ ಕಾನೂನು ಸಡಿಲಗೊಳಿಸುವ ಸಲುವಾಗಿ ಈಗಾಗಲೇ ಪ.ಪಂ. ವತಿಯಿಂದ ನಗರಾಭಿವೃದ್ಧಿ ಸಚಿವರಿಗೆ ಮನವಿ ನೀಡಲಾಗಿದೆ. ಸಿಂಗಲ್‌ ಲೇಔಟ್‌ ಕನ್ವರ್ಶನ್‌, ರಸ್ತೆ ವಿಸ್ತರಣೆ ಕಾನೂನು ತೊಡಕು ಮನೆ ನಿರ್ಮಾಣಕ್ಕೆ ಸದ್ಯ ದುಪ್ಪಟ್ಟು ದಂಡ ತೆರಬೇಕಾದ ಸ್ಥಿತಿ ಇದೆ. ಕಾನೂನು ಸರಳಗೊಳಿಸಿದಲ್ಲಿ ಅನೇಕ ಮಂದಿಗೆ ಅನುಕೂಲವಾಗಲಿದೆ.

Advertisement

ಹೊಟೇಲ್‌ ತ್ಯಾಜ್ಯ, ಒಳಚರಂಡಿ ನಿರ್ವಹಣೆ
ಹೊಟೇಲ್‌ ತ್ಯಾಜ್ಯ ನೀರು ರಸ್ತೆ ಚರಂಡಿಯಲ್ಲಿ ಸಾಗುತ್ತಿರುವ ಕುರಿತು ಅನೇಕ ದೂರುಗಳು ಕೇಳಿಬರುತ್ತಿವೆ. ಉಳಿದಂತೆ ಒಳಚರಂಡಿ ಯೋಜನೆಗೆ 2009-10ನೇ ಸಾಲಿನಲ್ಲಿ ಸರ್ವೆ ನಡೆದಿದೆ. ಆದರೆ ಮುಖ್ಯ ರಸ್ತೆ ಹೆದ್ದಾರಿ ಇಲಾಖೆಗೆ ಹಸ್ತಾಂತರಗೊಂಡಿದ್ದರಿಂದ ಒಳಚರಂಡಿ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಸಮಗ್ರ ಒಳಚರಂಡಿ ನಿರ್ಮಾಣವಾಗದಿದ್ದಲ್ಲಿ ಬೆಳೆಯುತ್ತಿರುವ ಪಟ್ಟಣದ ಅಭಿವೃದ್ಧಿಗೆ ಹೊಡೆತ ಬೀಳಲಿವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸವಾಲು ಪ.ಪಂ. ಆಡಳಿತದ ಮುಂದಿದೆ.

ಪಾರ್ಕಿಂಗ್‌ ವ್ಯವಸ್ಥೆ, ಸಂತೆ ಮಾರುಕಟ್ಟೆ ಸ್ಥಳಾಂತರ
ಈಗಿರುವ ರಸ್ತೆ ಕಿರಿದಾಗಿದ್ದು, ಪಾರ್ಕಿಂಗ್‌ ವ್ಯವಸ್ಥೆ ಪ.ಪಂ.ಗೆ ಸವಾಲಾಗಿದೆ. ಸೂಕ್ತ ಸ್ಥಳಾವಕಾಶ ಗುರುತಿಸುವುದು ಒಂದೆಡೆಯಾದರೆ, ವಾರದ ಸಂತೆ ಮಾರುಕಟ್ಟೆಯಿಂದ ಸಂಚಾರ ಕಿರಿಕಿರಿಯಾಗುತ್ತಿರುವುದರಿಂದ ಎಪಿಎಂಸಿಗೆ ಸ್ಥಳಾಂತರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಸ್ಥಳಾಂತರಗೊಂಡಲ್ಲಿ ಪ.ಪಂ. ಆದಾಯಕ್ಕೆ ಹೊಡೆತ ಬೀಳುವುದರಿಂದ ಇರುವ ಮಾರಕಟ್ಟೆಯಲ್ಲೇ ಸ್ಥಳಾವಕಾಶ ನೀಡುವ ಯೋಜನೆ ಫಲಪ್ರದಾವಗುತ್ತದೋ ಕಾದುನೋಡಬೇಕಿದೆ.

 ಹಂತಹಂತವಾಗಿ ಹಂಚಿಕೆಗೆ ಆದ್ಯತೆ
ನಿವೇಶನ ಹಂಚಿಕೆ ಹಿಂದಿನಿಂದಲೂ ಗರಿಷ್ಠ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಾವಕಾಶ ಗುರುತಿಸುವಲ್ಲಿ ಸರ್ವೆ ನಡೆಸಲಾಗುವುದು. ಹೊಸ ಆಡಳಿತ ಮಂಡಳಿ ಸಲಹೆಯಂತೆ ಬೇಡಿಕೆಯಷ್ಟು ನಿವೇಶನ ನೀಡಲಾಗದಿದ್ದರೂ ಹಂತಹಂತವಾಗಿ ನಿವೇಶನ ಹಂಚಿಕೆಗೆ ಆದ್ಯತೆ ನೀಡಲಾಗುವುದು.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌, ಪ‌.ಪಂ. ಆಡಳಿತಾಧಿಕಾರಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next