ಉಡುಪಿ: ಸಣ್ಣ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುವುದು ಅತೀ ಅಗತ್ಯ. ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಇಂತಹ ಉದ್ಯಮಗಳ ಏಳಿಗೆಗೆ ಬ್ಯಾಂಕ್‌ಗಳು ಸಂಪೂರ್ಣ ಬೆಂಬಲ ನೀಡುತ್ತವೆ ಎಂದು ಕಾರ್ಪೊರೇಶನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ವಿ.ಭಾರತಿ ಹೇಳಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಎಂ.ಎಸ್.ಎಂ.ಇ. ಅಭಿವೃದ್ಧಿ ಸಂಸ್ಥೆ ಮಂಗಳೂರು, ಕೈಗಾರಿಕೆ ಕೇಂದ್ರ ಉಡುಪಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ-ಉಡುಪಿ ಇದರ ಆಶ್ರಯದಲ್ಲಿ ಶುಕ್ರವಾರ ಪುರಭವನದಲ್ಲಿ ನಡೆದ ಉದ್ಯಮ್ ಸಮಾಗಮ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೌಶಲ ಅಭಿವೃದ್ಧಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಸ್ವಂತ ಉದ್ದಿಮೆದಾರರಿಗೆ ಬಂಡವಾಳ ಒದಗಿಸುವ ಕೆಲಸ ಮಾಡಲು ಬ್ಯಾಂಕ್‌ಗಳು ಯಾವತ್ತಿಗೂ ಸಿದ್ದವಾಗಿದೆ. ಯುವ ಉದ್ಯಮಿಗಳು ಸಣ್ಣ ಕೈಗಾರಿಕೆಗಳತ್ತ ಮನಸ್ಸು ಮಾಡಬೇಕು. ಇದರಿಂದಾಗಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ.
ಮಾರುಕಟ್ಟೆ ತಂತ್ರಜ್ಞಾನವನ್ನು ಬಲವರ್ಧಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ವಿವಿಧ ಉದ್ಯಮಗಳಿಗೆ ಬ್ಯಾಂಕ್‌ಗಳಲ್ಲಿ ಸಿಗುವ ಸಾಲ-ಸೌಲಭ್ಯಗಳನ್ನು ಉಪಯೋಗಿಸುವ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಫೆರ್ನಾಂಡೀಸ್, ನ್ಯಾಷನಲ್ ಲಾ ಸ್ಕೂಲ್ ಆಫ್ ಯುನಿವರ್ಸಿಟಿಯ ಪ್ರೊ| ರಾಮಕೃಷ್ಣ, ಎಕ್ಸ್‌ಪೋರ್ಟ್ ಕೌನ್ಸಿಲ್‌ನ ರೀಜನಲ್ ಕನ್ವೆಂಟರ್ ತುಳಸೀರಾಮ್, ಪ್ರಮುಖರಾದ ವಿಶ್ವನಾಥ ಭಟ್, ಗೋಪಿನಾಥ್ ರಾವ್, ವಾಮನ ನಾಯಕ್, ವಸಂತ ಕಿಣಿ ಉಪಸ್ಥಿತರಿದ್ದರು.
ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಕೆ.ಸಾಕ್ರಟೀಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ವ್ಯಾಪಾರ ಮೇಳ ಹಾಗೂ ವಸ್ತುಪ್ರದರ್ಶನ ಉದ್ಘಾಟನೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿ ಜಗದೀಶ್, ಶಾಸಕ ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು.