Advertisement

ಮಕ್ಕಳಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್‌ ಸೋಂಕು

10:50 PM Jan 14, 2022 | Team Udayavani |

ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಕೋವಿಡ್‌ 3ನೇ ಅಲೆ ರಾಜ್ಯದಲ್ಲಿ ತೀವ್ರವಾಗುತ್ತಲೇ ಇದೆ. ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 15 ಮಕ್ಕಳು, ದಾವಣಗೆರೆ ಜಿಲ್ಲೆ ಮಲೇಬೆನ್ನೂರು ಪಟ್ಟಣದ ಸರಕಾರಿ ಪ.ಪೂ.ಕಾಲೇಜಿನ 15 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಕಾಂಗ್ರೆಸ್‌ನ ಪಾದಯಾತ್ರೆಗೆ ಬಂದೋಬಸ್ತ್ ನೀಡಲು ಹೋಗಿದ್ದ ಕೋಲಾರ ಜಿಲ್ಲೆ ಕೆಜಿಎಫ್ ಪೊಲೀಸ್‌ ಸಿಬಂದಿಗೆ ಕೋವಿಡ್‌ ದೃಢಪಟ್ಟಿದೆ.

Advertisement

ಬಾಗಲಕೋಟೆಯಲ್ಲಿ 15 ಮಕ್ಕಳಿಗೆ ಸೋಂಕು
ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿದ್ದು, ಶುಕ್ರವಾರ ಒಂದೇ ದಿನ 15 ಮಕ್ಕಳಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದಿದೆ. ನಗರದ ವಿದ್ಯಾಗಿರಿಯ ಖಾಸಗಿ ಶಾಲೆಯೊಂದರಲ್ಲಿ 12 ಮಕ್ಕಳಿಗೆ ಸೋಂಕು ಪತ್ತೆಯಾಗಿದ್ದು, ಶಾಲೆಗೆ ಸದ್ಯ ರಜೆ ಘೋಷಿಸಲಾಗಿದೆ. ಅಮೀನಗಡದ ಖಾಸಗಿ ಶಾಲೆಯಲ್ಲಿ ಮೂವರು ಮಕ್ಕಳಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ತಪಾಸಣೆಗೆ ಒಳಪಡಿಸಿದ 2,855 ಮಂದಿಯ ವರದಿ ಬರಬೇಕಿದೆ.

ಮಲೇಬೆನ್ನೂರಿನ 15 ವಿದ್ಯಾರ್ಥಿಗಳಿಗೆ ಸೋಂಕು
ಮಲೇಬೆನ್ನೂರು: ನಗರದ ಸರಕಾರಿ ಪ.ಪೂ. ಕಾಲೇಜಿನ 15 ವಿದ್ಯಾರ್ಥಿ ಗಳಲ್ಲಿ ಕೋವಿಡ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿಗಳ ಆದೇಶದ ಮೇರೆಗೆ 7 ದಿನಗಳ ವರೆಗೆ ಕಾಲೇಜಿಗೆ ರಜೆ ಘೋಷಿಸ ಲಾಗಿದೆ. ಸೋಂಕಿತ‌ ವಿದ್ಯಾರ್ಥಿಗಳನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. 15 ವಿದ್ಯಾರ್ಥಿಗಳಲ್ಲಿ ಮಲೇಬೆನ್ನೂರಿನ 12 ವಿದ್ಯಾರ್ಥಿಗಳು, ಹಿಂಡಸಘಟ್ಟದ ಒಬ್ಬರು ಮತ್ತು ಕುಂಬಳೂರಿನ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ.

ಸುತ್ತೂರು ಜಾತ್ರೆ ರದ್ದು
ಮೈಸೂರು: ನಂಜನಗೂಡು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ. 28ರಿಂದ ಫೆ.2ರ ವರೆಗೆ ನಡೆಯಬೇಕಾಗಿದ್ದ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಸರಕಾರದ ಮಾರ್ಗಸೂಚಿಯಂತೆ ರದ್ದುಪಡಿಸಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೋವಿಡ್ ಪರೀಕ್ಷೆ : 28,723 ಕೇಸ್, 14 ಸಾವು

Advertisement

ಪೊಲೀಸ್‌ ಸಿಬಂದಿಗೆ ಸಾಮೂಹಿಕ ಸೋಂಕು
ಕೆಜಿಎಫ್: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷವು ರಾಮನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ಪಾದಯಾತ್ರೆಗೆ ಬಂದೋಬಸ್ತ್ ನೀಡಿದ್ದ ಕೆಜಿಎಫ್ ಪೊಲೀಸ್‌ ಸಿಬಂದಿಗೆ ಸಾಮೂಹಿಕವಾಗಿ ಸೋಂಕು ತಗಲಿದೆ. ಸುಮಾರು 25 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಇನ್ನೂ ಹಲವರು ಸೋಂಕಿಗೆ ತುತ್ತಾಗಿರಬಹುದು ಎಂದು ಶಂಕಿಸಲಾಗಿದೆ. ರಾಮನಗರಕ್ಕೆ ಒಬ್ಬ ಸರ್ಕಲ್‌ ಇನ್‌ಸ್ಪೆಕ್ಟರ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಎರಡು ಕೆಎಸ್‌ಆರ್‌ಪಿಸಿ ಬಸ್ಸಿನಲ್ಲಿ ಸಿಬಂದಿ ಕರ್ತವ್ಯಕ್ಕೆ ಹೋಗಿದ್ದರು. ಪಾದಯಾತ್ರೆ ಮತ್ತು ವಾಸ್ತವ್ಯದ ಸಮಯದಲ್ಲಿ ಮೂಲಭೂತ ಸೌಕರ್ಯದ ಕೊರತೆ ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ಕೋವಿಡ್‌ ಹರಡಿದೆ ಎನ್ನಲಾಗುತ್ತಿದೆ. ಸೋಂಕಿತರ ಆರೋಗ್ಯ ವರದಿ ಮತ್ತಷ್ಟು ಬರಬೇಕಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರು, ಮಕ್ಕಳಲ್ಲಿ ಹೆಚ್ಚಿದ ಸೋಂಕು
ಹಾಸನ ಜಿಲ್ಲೆಯಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಕೊರೊನಾ ಸೋಂಕು ದೃಢವಾಗಿದೆ. 3ನೇ ಅಲೆ ಯಲ್ಲಿ ಈವರೆಗೆ ಜಿಲ್ಲೆಯಲ್ಲಿ 160 ಮಕ್ಕಳು ಹಾಗೂ 64 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ದೃಢ ಪಟ್ಟಿರುವ ಮಕ್ಕಳಲ್ಲಿ 67 ಬಾಲಕರು ಹಾಗೂ 93 ಬಾಲಕಿಯರು. ಇದು ವರೆಗೆ 21 ವಿದ್ಯಾರ್ಥಿಗಳು ಗುಣ ಮುಖರಾಗಿದ್ದಾರೆ. 139 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾ.ಶಿ.ಇ. ಉಪ ನಿರ್ದೇಶಕ ಪ್ರಕಾಶ್‌ ತಿಳಿಸಿದ್ದಾರೆ. 35 ಮಂದಿ ಶಿಕ್ಷಕರು ಹಾಗೂ 29 ಶಿಕ್ಷಕಿಯರು ಸೇರಿ 64 ಮಂದಿಗೆ ಸೋಂಕು ದೃಢಪಟ್ಟಿದ್ದು, 9 ಮಂದಿ ಗುಣಮುಖರಾಗಿದ್ದಾರೆ. 55 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next