ಉಡುಪಿ : ಭ್ರಷ್ಟಾಚಾರದ ಬಗ್ಗೆ ಸಾಮಾನ್ಯ ಜನರೂ ಈಗ ಮಾತನಾಡುತ್ತಿದ್ದು, ಹೆಚ್ಚು ಕಾಲ ಸಹಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇಲ್ಲ. ಜನರು ಎದ್ದೇಳುವ ಮೊದಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಇದಕ್ಕೆ ನ್ಯಾಯವಾದಿಗಳು ಕೂಡ ಸಹಕರಿಸಬೇಕು ಎಂದು ಲೋಕಾಯುಕ್ತ ನ್ಯಾ| ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಶನಿವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಜರಗಿದ “ಸೇವೆಗಾಗಿ ಸಂಪರ್ಕ’ ಕಾನೂನು ಮಾಹಿತಿ ಆಂದೋಲನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರು ತಮ್ಮ ಕೆಲಸವಾಗಲು ಲಂಚ ನೀಡುವುದಿಲ್ಲ ಎಂದು ತೀರ್ಮಾನಿಸಬೇಕು. ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಉತ್ತಮ ಸಮಾಜದ ನಿರ್ಮಾಣದಲ್ಲಿ ನ್ಯಾಯವಾದಿಗಳ ಪಾತ್ರ ಕೂಡ ಮಹತ್ವದ್ದಾಗಿದೆ. ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಹಾಗೂ ಕಳ್ಳಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ನೀಡುವಂತೆ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ.ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಅಧೀಕ್ಷಕ ಡಾ| ಸಂಜೀವ್ ಎಂ.ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶೆ, ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎ.ಸಂತೋಷ್ ಹೆಬ್ಟಾರ್ ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಮೇರಿ ಎ.ಆರ್. ಶ್ರೇಷ್ಠಾ ಕಾರ್ಯಕ್ರಮ ನಿರ್ವಹಿಸಿದರು. ಕಾನೂನು ಸೇವೆಗಳ ಪ್ರಾಧಿಕಾರ ಶಾಲಾ ಮಕ್ಕಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳ ಬೀದಿನಾಟಕ ಪ್ರದರ್ಶಿಸಿದರು.