Advertisement

ಹೇಟ್‌ ಕ್ರೈಮ್‌ ಹೆಚ್ಚಳ ಕಳವಳಕಾರಿ: ಸಂಕುಚಿತ ಮನಸ್ಥಿತಿ ಬಿಡಿ

03:50 AM Feb 25, 2017 | |

ಸುಪ್ತವಾಗಿರುವ ಜನಾಂಗ, ವರ್ಣದ್ವೇಷ ಟ್ರಂಪ್‌ ಅಧ್ಯಕ್ಷರಾದ ಬಳಿಕ ಹೆಡೆಯೆತ್ತಲು ಆರಂಭಿಸಿದೆಯೇ ಅನ್ನುವ ಪ್ರಶ್ನೆಯನ್ನು ಅಮೆರಿಕದಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಹೇಟ್‌ಕ್ರೈಮ್‌ಗೆ ಬಲಿಯಾದ ದುರ್ಘ‌ಟನೆ ಎತ್ತಿದೆ.ಅದು ನಿಜವೇ ಆಗಿದ್ದರೆ ಅತ್ಯಂತ ದುರದೃಷ್ಟಕರ. ಅಮೆರಿಕ ಎಷ್ಟೇ ಮುಂದುವರಿದಿದ್ದರೂ ಹಳೆಯ ಕಾಲದ ಮನೋಭಾವಕ್ಕೆ ಮರಳುತ್ತಿರುವ ಸೂಚನೆ ಇದು.

Advertisement

ಅಮೆರಿಕದ ಕನ್ಸಾಸ್‌ನಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಶ್ರೀನಿವಾಸ ಕುಚ್ಚಿಬೋಟ್ಲ ಎಂಬವರನ್ನು ಅಮೆರಿಕದ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿರುವುದು ಅಲ್ಲಿ ವರ್ಣ ದ್ವೇಷ ಮತ್ತು ಜನಾಂಗ ದ್ವೇಷದ ಕಾರಣಕ್ಕೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕುಚ್ಚಿಬೋಟ್ಲ ತನ್ನ ಸಹೋದ್ಯೋಗಿ ಮತ್ತು ಸ್ನೇಹಿತ ಅಲೋಕ್‌ ಮದಸನಿ ಜತೆಗೆ ಬಾರ್‌ಗೆ ಭೇಟಿ ನೀಡಿದ್ದ ವೇಳೆ ವರ್ಣ ದ್ವೇಷವನ್ನು ತಲೆ ತುಂಬಿಕೊಂಡಿದ್ದ ಆ್ಯಡಮ್‌ ಪುರಿಂಟನ್‌ ಎಂಬಾತ ಕೆರಳಿ “ನನ್ನ ದೇಶ ಬಿಟ್ಟು ಹೋಗಿ ಉಗ್ರರೇ’ ಎಂದು ಅರಚಿ ಅವರಿಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಕುಚ್ಚಿಬೋಟ್ಲ ಗುಂಡೇಟಿಗೆ ಬಲಿಯಾದರೆ ಮದಸನಿ ಗಾಯಗೊಂಡಿದ್ದಾರೆ. ಈ ಘಟನೆ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಫ‌ಲಶ್ರುತಿಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. 

ಟ್ರಂಪ್‌ ಅಧ್ಯಕ್ಷರಾದರೆ ವರ್ಣ ದ್ವೇಷ ಮತ್ತು ಧಾರ್ಮಿಕ ದ್ವೇಷ ತಾಂಡವವಾಡಲಿದೆ ಎಂಬ ಆರೋಪ ಅವರು ಪ್ರೈಮರಿ ಚುನಾವಣೆಯಲ್ಲಿ ಸ್ಪರ್ಧಿಸುವಾಗಲೇ ಇತ್ತು. ಆರಂಭದಿಂದಲೇ ಟ್ರಂಪ್‌ ಅಪ್ಪಟ ರಾಷ್ಟ್ರೀಯವಾದಿ ನೀತಿಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ಬಿಳಿಯರ ಪಾರಮ್ಯವನ್ನು ಪ್ರತಿಪಾದಿಸುತ್ತಿದ್ದಾರೆಂಬ ಆರೋಪವೂ ಇದೆ. ಅಮೆರಿಕ ವಲಸಿಗರಿಂದಲೇ ನಿರ್ಮಾಣಗೊಂಡಿರುವ ದೇಶವಾಗಿದ್ದರೂ ಅಲ್ಲಿನ ಬಿಳಿಯರು ಅಮೆರಿಕ ನಮ್ಮದು ಎಂದು ಭಾವಿಸಿದ್ದಾರೆ. ಹೀಗಾಗಿ ಬಿಳಿಯರಲ್ಲದವರ ಮೇಲೆ ಆಗಾಗ ಹಲ್ಲೆಗಳಾಗುತ್ತಿವೆ. ಇವುಗಳನ್ನು ಹೇಟ್‌ಕ್ರೈಮ್‌ಗಳೆಂದು ಕರೆಯುತ್ತಾರೆ. ಇಂತಹ ಸುಮಾರು 800 ಹೇಟ್‌ಕ್ರೈಮ್‌ ಗುಂಪುಗಳು ಅಮೆರಿಕದಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ನಿರಂತರವಾಗಿ ದ್ವೇಷ ಚಿಂತನೆಯನ್ನು ಬಿತ್ತರಿಸುತ್ತಿರುತ್ತವೆ. ಉತ್ತಮ ಶಿಕ್ಷಣ ಪಡೆದವರು ಕೂಡ ಇಂತಹ ಚಿಂತನೆಗಳಿಗೆ ವಶವಾಗುತ್ತಾರೆ. ಕುಚ್ಚಿಬೋಟ್ಲ ಮೇಲೆ ಹಲ್ಲೆ ಮಾಡಿರುವ ಆ್ಯಡಮ್‌ ಇದಕ್ಕೆ ಅತ್ಯುತ್ತಮ ಉದಾಹರಣೆ. ಈತ ನೌಕಾಪಡೆಯ ನಿವೃತ್ತ ಯೋಧ, ಸ್ವಲ್ಪ ಸಮಯ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದ. 

ಟ್ರಂಪ್‌ ಅಧ್ಯಕ್ಷರಾದ ಬಳಿಕ ಹೇಟ್‌ಕ್ರೈಮ್‌ಗಳು ದುಪ್ಪಟ್ಟಾಗಿವೆ ಎನ್ನುವುದನ್ನು ಅಲ್ಲಿನ ಮಾಧ್ಯಮಗಳೇ ಹೇಳುತ್ತಿವೆ. ಹಿಂದೆ ವಾರಕ್ಕೆ ಒಂದಂಕಿಯಲ್ಲಿದ್ದ ಹೇಟ್‌ ಕ್ರೈಮ್‌ಗಳು ಈಗ ಎರಡಕ್ಕೇರಿವೆ. ಮುಸ್ಲಿಮರು ಮತ್ತು ಏಶ್ಯಾದವರು ಭೀತಿಯಿಂದಲೇ ಬದುಕುತ್ತಿದ್ದಾರೆ. ಅದರಲ್ಲೂ ಮಸೀದಿಗಳನ್ನು ಗುರಿ ಮಾಡಿಕೊಂಡಿರುವ ಹೇಟ್‌ಕ್ರೈಮ್‌ಗಳು ವಿಪರೀತ ಹೆಚ್ಚಿವೆ ಎಂದು ಮಾಧ್ಯಮವೊಂದು ಇತ್ತೀಚೆಗೆ ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದೆ. ಹಾಗೆಂದು ಹೇಟ್‌ಕ್ರೈಮ್‌ ಅಮೆರಿಕಕ್ಕೆ ಹೊಸತೇನೂ ಅಲ್ಲ. ಬಿಳಿಯರಲ್ಲದವರ ಪ್ರಾರ್ಥನಾ ಮಂದಿರಗಳ ಗೋಡೆಗಳಲ್ಲಿ ನಿಂದನೆಯ ಮತ್ತು ಬೆದರಿಕೆಯ ವಾಕ್ಯಗಳನ್ನು ಬರೆಯುವುದು ಸಾಮಾನ್ಯ. ಇಟಲಿ, ಕೊರಿಯಾ, ಚೀನ, ಮೆಕ್ಸಿಕೊ, ಪಾಕ್‌ ಮತ್ತು ಭಾರತದ ಪ್ರಜೆಗಳು ಅತಿ ಹೆಚ್ಚು ಹೇಟ್‌ಕ್ರೈಮ್‌ ಬಲಿಪಶುಗಳು. ಆದರೆ ಉಳಿದ ದೇಶದವರಿಗೆ ಮತ್ತು ಭಾರತೀಯರಿಗೆ ಒಂದು ಮೂಲಭೂತ ವ್ಯತ್ಯಾಸವಿದೆ. ಅನ್ಯದೇಶದವರು ತಮ್ಮವರ ಮೇಲೆ ಹಲ್ಲೆಯಾದಾಗ ಅಥವಾ ಹತ್ಯೆಯಾದಾಗ ಒಕ್ಕೊರಲಿನಿಂದ ಪ್ರತಿಭಟಿಸುತ್ತಾರೆ. ಆದರೆ ಭಾರತೀಯರು ಅಷ್ಟು ದೂರದಲ್ಲಿದ್ದರೂ ಪ್ರಾದೇಶಿಕ ಭಿನ್ನತೆಯ ಸಂಕುಚಿತ ಮನಸ್ಥಿತಿಯನ್ನು ಬಿಟ್ಟಿಲ್ಲ. 

ಹೀಗಾಗಿ ವರ್ಣದ್ವೇಷದ ಘಟನೆಗಳು ನಡೆದಾಗ ಭಾರತದ ಪ್ರತಿಭಟನೆಯ ಧ್ವನಿ ಪ್ರಬಲವಾಗಿ ಕೇಳಿಸುತ್ತಿಲ್ಲ. ಭಾರತೀಯ ಮೂಲದವರು ಸರಕಾರದ ಪ್ರಮುಖ ಹುದ್ದೆಗಳಲ್ಲಿದ್ದರೂ ಧ್ವನಿಯೆತ್ತುವ ದಿಟ್ಟತನ ತೋರಿಸುತ್ತಿಲ್ಲ. ಮುಖ್ಯವಾಹಿನಿಯಲ್ಲಿ ಭಾರತೀಯರ ಧ್ವನಿ ನಗಣ್ಯವಾಗಿದೆ. ಭಾರತೀಯರು ಎಲ್ಲದಕ್ಕೂ ಕೇಂದ್ರ ಸರಕಾರದತ್ತ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇಲ್ಲಿ ಪ್ರಧಾನಿಯೋ, ವಿದೇಶಾಂಗ ಸಚಿವರೋ ಖಂಡನೆಯ ಹೇಳಿಕೆ ನೀಡಿದರೆ ಸಂತೃಪ್ತರಾಗಿ ಬಿಡುತ್ತಾರೆ. ಈ ಮನೋಧರ್ಮವನ್ನು ಬಿಟ್ಟು ಹೊರದೇಶದಲ್ಲಿ ನಾವೆಲ್ಲ ಭಾರತೀಯರು ಎಂಬ ಒಗ್ಗಟ್ಟಿನ ಭಾವ ಹೊಂದುವುದರಲ್ಲಿ ನಮ್ಮ ಹಿತವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next