ಬಾಗಲಕೋಟೆ: ಎರಡು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಕೃಷ್ಣಾ ನದಿಯ ಪ್ರವಾಹ ಗುರುವಾರ ಮತ್ತೆ ಏರಿಕೆಯಾಗಿದೆ. ಸಂಜೆಯ ಹೊತ್ತಿಗೆ ಕೃಷ್ಣಾ ನದಿಗೆ 4.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ 60 ಗ್ರಾಮಗಳು ಜಲಾವೃತಗೊಂಡಿವೆ.
ಹೌದು, ಬುಧವಾರ ಕೃಷ್ಣಾ ನದಿಗೆ 3.82 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಹೀಗಾಗಿ ಇನ್ನೇನು ಪ್ರವಾಹ ಸಂಕಷ್ಟ ಕಡಿಮೆ ಆಯ್ತು ಎಂದು ಜನ ನಿಟ್ಟುಸಿರುವ ಬಿಡುವಾಗಲೇ ಮತ್ತೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ. ಕೃಷ್ಣಾ ನದಿಗೆ 4.10 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಗೆ 17,379 ಕ್ಯೂಸೆಕ್ ಹಾಗೂ ಮಲÅಪಭಾ ನದಿಗೆ 5094 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮೂರು ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಘಟಪ್ರಭಾ ನದಿ ಪ್ರವಾಹದಿಂದ ಮುಧೋಳ ತಾಲೂಕಿನ 36, ಕೃಷ್ಣಾ ನದಿ ಪ್ರವಾಹದಿಂದ ರಬಕವಿ-ಬನಹಟ್ಟಿ ತಾಲೂಕಿನ 8, ಜಮಖಂಡಿ ತಾಲೂಕಿನ 11, ಬಾಗಲಕೋಟೆ ತಾಲೂಕಿನ 1, ಮಲÅಪಭಾ ನದಿ ಪ್ರವಾಹದಿಂದ ಬಾದಾಮಿ ತಾಲೂಕಿನ 4 ಸೇರಿದಂತೆ ಒಟ್ಟು 60 ಗ್ರಾಮಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 96 ಮನೆಗಳು ಮಳೆಯಿಂದ ಬಾಧಿತಗೊಂಡಿದ್ದು, ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 55 ಕಾಳಜಿ ಕೇಂದ್ರ: ಜಿಲ್ಲೆಯ 60 ಪ್ರವಾಹ ಬಾಧಿತ ಗ್ರಾಮಗಳ 8813 ಕುಟುಂಬಗಳ, 35,157 ಜನ ಸಂತ್ರಸ್ತರಾಗಿದ್ದು, ಅವರಿಗಾಗಿ ಒಟ್ಟು 55 ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಸದ್ಯ 55 ಕಾಳಜಿ ಕೇಂದ್ರಗಳಲ್ಲಿ 11,961 ಜನ ಆಶ್ರಯ ಪಡೆದಿದ್ದು, ಉಳಿದವರು ತೋಟದ ಮನೆ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲದೇ ಪ್ರವಾಹದಿಂದ ಜನ-ಜಾನುವಾರುಗಳಿಗೂ ತೀವ್ರ ಸಂಕಷ್ಟ ಎದುರಾಗಿದ್ದು, ಅವುಗಳಿಗಾಗಿ ಗೋ ಶಾಲೆ ಆರಂಭಿಸಿ, 9755 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ.
ಜಾನುವಾರುಗಳಿಗೆ ಆಗಿ 346 ಮೆಟ್ರಿಕ್ ಟನ್ ಮೇವು ವಿತರಣೆ ಮಾಡಲಾಗಿದೆ. ಜಿಲ್ಲೆಯ ತ್ರಿವಳಿ ನದಿಯ ಪ್ರವಾಹದಿಂದ 19 ಸಣ್ಣ, 5 ದೊಡ್ಡ ಜಾನುವಾರು ಸೇರಿದಂತೆ ಒಟ್ಟು 24 ಜಾನುವಾರುಗಳು ಸಾವನ್ನಪ್ಪಿವೆ. ಅಲ್ಲದೇ 11,149 ಹೆಕ್ಟೇರ್ ಕೃಷಿ, 796.60 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಸಿದ್ಧ ದೇವಸ್ಥಾನ ಜಲಾವೃತ: ಜಮಖಂಡಿ ತಾಲೂಕಿನ ಐತಿಹಾಸಿಕ ಶೂರ್ಪಾಲಿಯ ನರಸಿಂಹ ದೇವಸ್ಥಾನ ಹಾಗೂ ತುಬಚಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ನರಸಿಂಹ ದೇವಸ್ಥಾನ, ಕೃಷ್ಣಾ ನದಿಗೆ ಹೊಂದಿಕೊಂಡಿದ್ದು, ನಡುಗಡ್ಡೆಯಾಗಿ ಪರಿಣಮಿಸಿದೆ.
ಜಿಲ್ಲೆಯ ತ್ರಿವಳಿ ನದಿಗಳ ಪ್ರವಾಹದಿಂದ ಜನ-ಜಾನುವಾರು ಸಂಕಷ್ಟಕ್ಕೆ ಈಡಾಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.