Advertisement

ಹೆಚ್ಚಬೇಕಿದೆ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ವೇಗ

03:45 AM Jun 27, 2017 | Team Udayavani |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ವಿವಿಧ ಯತ್ನಗಳು ಸಾಗಿವೆ. ಆದರೆ ಯೋಜನೆಯ ವೇಗ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲವೆಂಬ ಅನಿಸಿಕೆ ಅನೇಕ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರದ್ದಾಗಿದೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕಾಗಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಸಂಸ್ಥೆ ಕಂಪನಿ ಕಾಯ್ದೆಯಡಿ ನೋಂದಣಿಯಾಗಿದೆ. ಅಗತ್ಯ ಸಲಹೆ ಹಾಗೂ ವಿಸ್ತ್ರತ ಯೋಜನಾ ವರದಿ (ಡಿಪಿಆರ್‌)ಸಲ್ಲಿಕೆಗಾಗಿ ಸಲಹಾ ಏಜೆನ್ಸಿ ನೇಮಕಗೊಂಡಿದ್ದು, ಏಜೆನ್ಸಿಯ ವಿವಿಧ ತಜ್ಞರು ವಿವಿಧ ಯೋಜನೆಗಳ ಡಿಪಿಆರ್‌ ಸಿದ್ಧತೆಯಲ್ಲಿ ತೊಡಗಿದ್ದಾರೆ. 15 ನಿರ್ದೇಶಕ ಮಂಡಳಿ ರಚನೆಗೊಂಡಿದ್ದು, ಹಿರಿಯ ಐಎಎಸ್‌ ಅಧಿಕಾರಿ ಮಣಿವಣ್ಣನ್‌ ಇದರ ಚೇರ¾ನ್‌ರಾಗಿದ್ದಾರೆ. ಈಗಾಗಲೇ ಮಂಡಳಿ ಎರಡು ಬಾರಿ ಸಭೆ ನಡೆಸಿದೆ. ಸ್ಪೆಶಲ್‌ ಪರ್‌ಪೋಸ್‌ ವೆಹಿಕಲ್‌(ಎಸ್‌ಪಿವಿ)ರಚನೆಗೊಂಡಿದೆ.
992 ಎಕರೆಯಲ್ಲಿ ಮಾದರಿ ಅನುಷ್ಠಾನ: ಹು.ಧಾ. ಸ್ಮಾರ್ಟ್‌ಸಿಟಿ ಪ್ರಾಯೋಗಿಕ ಮಾದರಿಯನ್ನು ಸುಮಾರು 992ಎಕರೆ ಪ್ರದೇಶ ವ್ಯಾಪ್ತಿಯಲ್ಲಿ  ಕೈಗೊಳ್ಳಲಾಗುತ್ತಿದೆ. 7 ವಾರ್ಡ್‌ ಪೂರ್ಣ ಹಾಗೂ 6 ವಾರ್ಡ್‌ ಭಾಗಶಃ ಸೇರಿ ಒಟ್ಟು 13 ವಾರ್ಡ್‌ಗಳ, ಒಟ್ಟು 32,485 ಕುಟುಂಬಗಳ 1.17ಲಕ್ಷ ಜನಸಂಖ್ಯೆಗೆ ಪ್ರಾಯೋಗಿಕ ಯೋಜನೆ ಪ್ರಯೋಜನ ದೊರೆಯಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ, ಗೋಕುಲ ರಸ್ತೆ, ರೈಲ್ವೆ ನಿಲ್ದಾಣ, ದುರ್ಗದ ಬಯಲು, ದಾಜೀಬಾನಪೇಟೆ, ರಾಣಿ ಚನ್ನಮ್ಮ ವೃತ್ತ ಇನ್ನಿತರ ಪ್ರಮುಖ ಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿವೆ. ಪ್ರಮುಖ ರಸ್ತೆ ಹಾಗೂ ವೃತ್ತಗಳ ನವೀಕರಣ, ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ ಸಿಗ್ನಲ್‌ ರಹಿತ ಸಂಚಾರ ವ್ಯವಸ್ಥೆ, ಮಾರುಕಟ್ಟೆ ಹಾಗೂ ಕೊಳಗೇರಿ ಪ್ರದೇಶ, ಕೆರೆ ಹಾಗೂ ನಾಲಾಗಳ ಅಭಿವೃದ್ಧಿ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

1,662ಕೋಟಿ ರೂ.ಯೋಜನೆ:
ಸ್ಮಾರ್ಟ್‌ ಸಿಟಿ ಯೋಜನೆ ವೆಚ್ಚ 1,662 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಐದು ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 500 ಕೋಟಿ ರೂ.ಗಳನ್ನು ನೀಡಿದರೆ, ಮಹಾನಗರ ಪಾಲಿಕೆ ತನ್ನ ವಂತಿಗೆಯಾಗಿ 17 ಕೋಟಿ ರೂ., ಬಿಆರ್‌ಟಿಎಸ್‌, ಒಳಚರಂಡಿ ಯೋಜನೆ, 24/7 ನೀರು ಪೂರೈಕೆ ಯೋಜನೆ ಇತ್ಯಾದಿ ಯೋಜನೆಗಳಿಂದ ಸುಮಾರು 645ಕೋಟಿ ರೂ. ಒಳಗೊಂಡಿದೆ.

ಕೇಂದ್ರ ಸರ್ಕಾರ ಸುಮಾರು 194ಕೋಟಿ ರೂ. ಮಂಜೂರಾತಿಗೆ ಅಧಿಸೂಚನೆ ಹೊರಡಿಸಿದ್ದು, ಇದುವರೆಗೆ ಸುಮಾರು 108 ಕೋಟಿ ರೂ.ಗಳ ಅನುದಾನ ಮಂಜೂರಾತಿ ಪತ್ರ ಸ್ವೀಕರಿಸಲಾಗಿದೆ. ಇದರಲ್ಲಿ 1ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸಲಹಾ ಏಜೆನ್ಸಿಯಾಗಿ ಸುಮಾರು 22ಕೋಟಿ ರೂ.ವೆಚ್ಚದಲ್ಲಿ ಪ್ರೈಸ್‌ವಾಟರ್‌ ಹೌಸ್‌ಕೂಪರ್‌ ಸಂಸ್ಥೆಯನ್ನು ನೇಮಿಸಲಾಗಿದೆ.

Advertisement

ಕ್ಟೋಬರ್‌ 1ರೊಳಗೆ ಡಿಪಿಆರ್‌ ಸಿದ್ಧ
ಪ್ರೈಸ್‌ವಾಟರ್‌ಹೌಸ್‌ಕೂಪರ್‌ ಸಂಸ್ಥೆಯವರು ಈಗಾಗಲೇ ಯೋಜನೆ ಅನುಷ್ಠಾನ ಪ್ರದೇಶದ ಸಮೀಕ್ಷೆ, ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ. ವಿವಿಧ ಯೋಜನೆಗಳ ಡಿಪಿಆರ್‌ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೆಲವೊಂದು ಯೋಜನೆಗಳ ಡಿಪಿಆರ್‌ ಮಾಸಾಂತ್ಯಕ್ಕೆ ರೂಪುಗೊಂಡರೆ, ಇನ್ನು ಕೆಲವು ಜುಲೈ, ಆಗಸ್ಟ್‌ನಲ್ಲಿ ರೂಪುಗೊಳ್ಳಲಿವೆ. ಒಟ್ಟಾರೆಯಾಗಿ ಅಕ್ಟೋಬರ್‌ 1ರೊಳಗಾಗಿ ಒಟ್ಟು 36 ಯೋಜನೆಗಳ ಡಿಪಿಆರ್‌ ಸಿದ್ಧಗೊಳ್ಳಲಿವೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರ ವೇಗಕ್ಕೆ ತಕ್ಕ ರೀತಿಯಲ್ಲಿ ಅಧಿಕಾರಶಾಹಿ ಸಾಗುತ್ತಿಲ್ಲ. ಇದರಿಂದಾಗಿ ಯೋಜನೆ ನಿಧಾನದ ಭಾಸವಾಗುತ್ತಿದೆ. ಕಡತಗಳ ವೇಗವೂ ನಿಧಾನತೆ ಪಡೆದಿದೆ. ಬಿಆರ್‌ಟಿಎಸ್‌ ಸೇರಿ ವಿವಿಧ ಯೋಜನೆಗಳ ವೇಗ ಹೆಚ್ಚಬೇಕಿದೆ. ಯೋಜನೆ ನಿಟ್ಟಿನಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಒಟ್ಟಾರೆಯಾಗಿ ಯೋಜನೆ ವೇಗ ತೃಪ್ತಿ ತಂದಿಲ್ಲ.
-ಜಗದೀಶ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ಸ್ಮಾರ್ಟ್‌ ಸಿಟಿ ಯೋಜನೆಯ ಸ್ಥಿತಿ ನೋಡಿದರೆ ಹುಬ್ಬಳ್ಳಿ-ಧಾರವಾಡ ಯೋಜನೆಗೆ ಆಯ್ಕೆಯಾಗಿದೆಯೇ ಎಂಬ ಸಂಶಯ ಬರುವಂತಿದೆ. ಯೋಜನೆ ಕೆಲಸಗಳು ಆರಂಭವಾದ ಬಗ್ಗೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸವಾಗಿಲ್ಲ. ಈಗಾಗಲೇ ಅವಳಿನಗರ ಸ್ಮಾರ್ಟ್‌ ಸಿಟಿ ನಿರ್ದೇಶಕ ಮಂಡಳಿ ಚೇರ¾ನ್‌ ಮಣಿವಣ್ಣನ್‌ ಅವರೊಂದಿಗೆ ಚರ್ಚಿಸಿದ್ದು, ವೇಗ ಹೆಚ್ಚಿಸಲು ಹೇಳಲಿದ್ದೇನೆ. ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ಹಾಗೂ ಸಲಹೆ ಸ್ವೀಕಾರ ನಿಟ್ಟಿನಲ್ಲಿ ನನ್ನನ್ನಂತೂ ಕರೆದಿಲ್ಲ, ಮಾಹಿತಿ ಕೇಳಿಲ್ಲ.
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next