Advertisement
ಸಾಂಕ್ರಾಮಿಕ ರೋಗದ ಭೀತಿನೆರೆ ನೀರು ಕಸ-ಕಡ್ಡಿಗಳೊಂದಿಗೆ ಜನವಸತಿ ಪ್ರದೇಶಗಳಿಗೆ ನುಗ್ಗಿದರ ಪರಿಣಾಮ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ನೀರು ಕೆಲವೊಂದು ಮನೆಗಳಿಗೆ ನುಗ್ಗಿದರ ಪರಿಣಾಮ ಮನೆ ಕೆಸರುಮಯವಾಗಿದ್ದು, ವಾಸಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ನೆರೆ ನೀರಿನಲ್ಲಿ ವಿಷಕಾರಿ ಹಾವು, ಜಂತುಗಳು ನಾಡನ್ನು ಪ್ರವೇಶಿಸಿದ್ದು, ಇವುಗಳಿಂದ ತಮ್ಮ ಪ್ರಾಣ ಕಾಪಾಡಿಕೊಳ್ಳುವ ಹೊಸ ಸವಾಲೂ ಗ್ರಾಮಸ್ಥರಿಗೆ ಎದುರಾಗಿದೆ. ನೆರೆಪೀಡಿತ ಪ್ರದೇಶದಲ್ಲಿ ಫಾಗಿಂಗ್ ಮಾಡಬೇಕು, ಸ್ವಚ್ಛತೆಗಾಗಿ ಆಂದೋಲನ ಹಮ್ಮಿಕೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಮೇ 27ರಂದು ಪ್ರಾರಂಭವಾದ ಮಳೆ ಬರೋಬ್ಬರಿ ಎರಡು ತಿಂಗಳು ಬಿಡುವಿಲ್ಲದೆ ಸುರಿದಿದ್ದು, ರೈತರು ಆರ್ಥಿಕವಾಗಿ ಮೇಲೇಳದಂತೆ ಮಾಡಿಬಿಟ್ಟಿದೆ. ಬೇಸಗೆಯಲ್ಲಿ ತಾನು ಬೆಳೆದ ಕೃಷಿಯಲ್ಲಿ ನೀರಿನ ಅಭಾವದಿಂದ ಭಾರೀ ನಷ್ಟ ಅನುಭವಿಸಿದ್ದರೆ, ಇದೀಗ ನೆರೆ ನೀರಿನ ಮೂಲಕ ಮತ್ತೆ ಗಾಯದ ಮೇಲೆ ಬರೆ ಎಳೆದಿದೆ. ನದಿ ಪಾತ್ರದ ರೈತರು ಬೇಸಾಯದ ನೇಜಿ ನಾಟಿ ಮಾಡಿದಲ್ಲಿಂದ ಆಗಾಗ ನೆರೆ ನೀರು ಗದ್ದೆಗಳಿಗೆ ನುಗ್ಗಿದರ ಪರಿಣಾಮ ನಾಟಿ ಮಾಡಿದ ನೇಜಿ ಇನ್ನೂ ಸರಿಯಾಗಿ ಜೀವ ಹಿಡಿದಿಲ್ಲ. ಹತ್ತು ದಿನಗಳಿಂದ ನಿರಂತರವಾಗಿ ನೆರೆ ನೀರು ಗದ್ದೆಯಲ್ಲಿ ನಿಂತಿರುವುದರಿಂದ ನಾಟಿ ಮಾಡಿದ ನೇಜಿಯೆಲ್ಲ ಕೊಳೆಯುವ ಭೀತಿ ಎದುರಾಗಿದೆ. ನೆರೆ ನೀರು ನುಗ್ಗಿದ ಪರಿಣಾಮ ಅಡಿಕೆ ತೋಟವೂ ಕೊಳೆ ರೋಗದಿಂದ ತತ್ತರಿಸಿದೆ. ನೆರೆ ನೀರು ತೋಟದಲ್ಲೇ ನಿಂತಿದ್ದ ಕಾರಣ ತೋಟಕ್ಕೆ ತೆರಳಿ, ಅಡಿಕೆ ಸ್ಥಿತಿ ಗತಿ ವೀಕ್ಷಿಸಲು ಅಥವಾ ಔಷಧ ಸಿಂಪಡಣೆಗೂ ಅವಕಾಶ ನೀಡಿಲ್ಲ. ನಿರಂತರ ಮಳೆಯ ಕಾರಣ ಔಷಧ ಸಿಂಪಡಣೆ ಸಾಧ್ಯವಾಗದೆ ಬೇಸಗೆಯಲ್ಲಿ ಕಷ್ಟಪಟ್ಟು ಉಳಿಸಿ ಬೆಳೆಸಿದ ಅಡಿಕೆ ಈಗ ನೆಲ ಕಾಣುತ್ತಿದೆ.
Related Articles
ಶುಕ್ರವಾರದಿಂದ ಮಳೆ ಸ್ವಲ್ಪ ವಿರಾಮವನ್ನು ನೀಡಿರುವುದು ಅಡಿಕೆ ಬೆಳೆಗಾರರಲ್ಲಿ ತುಸು ಸಮಾಧಾನ ಮೂಡಿಸಿದೆ. ಕೊಳೆ ರೋಗದ ನಡುವೆ ಉಳಿದ ಅಡಿಕೆ ರಕ್ಷಿಸಿಕೊಳ್ಳಲು ತಮ್ಮ ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆಗೆ ತರಾತುರಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬೋರ್ಡೋ ದ್ರಾವಣ ಸಿಂಪಡಿಸುವವರ ಮನೆ ಬಾಗಿಲಿಗೆ ತೆರಳಿ, ಬೇಗನೆ ಬರುವಂತೆ ಹೇಳುತ್ತಿದ್ದಾರೆ. ಹೆಚ್ಚು ವೇತನದ ಆಮಿಷವನ್ನೂ ಒಡ್ಡುತ್ತಿದ್ದಾರೆ. ಅಡಿಕೆಗೆ ಔಷಧ ಸಿಂಪಡಿಸುವವರೂ ಒಂದು ದಿನವೂ ವಿಶ್ರಾಂತಿಯಿಲ್ಲದೆ ಕೆಲಸ ಮಾಡಬೇಕಾದ ಸ್ಥಿತಿ ಇದೆ.
Advertisement
ಫಾಗಿಂಗ್‌ಗೆ ಕ್ರಮನೆರೆ ಪ್ರವೇಶಿಸಿದ ಸ್ಥಳಗಳಲ್ಲಿ ಇದೀಗ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಜಿ.ಪಂ. ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ, ನೆರೆಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ಮಾಡಿಸುವ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಪ್ರಮೀಳಾ ಜನಾರ್ದನ್
ಜಿ.ಪಂ. ಸದಸ್ಯೆ ಸದಾನಂದ ಆಲಂಕಾರು