ಕಲಬುರಗಿ: ಓದುವ ಮಕ್ಕಳಲ್ಲಿ ಆಸಕ್ತಿ ಬರಬೇಕು. ಮುಖ್ಯವಾಗಿ ಶಿಕ್ಷಕರಲ್ಲೂ ಮಕ್ಕಳ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಭೋದನೆ ಅಳವಡಿಸಿಕೊಂಡಲ್ಲಿ ಫಲಿತಾಂಶ ಸುಧಾರಣೆಗೆ ಪೂರಕವಾಗುವುದು ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತ ಕಚೇರಿಯ ನಿರ್ದೇಶಕ ಬಸವರಾಜ ಗೌನಳ್ಳಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಹಿರಿಯ ವಿದ್ಯಾರ್ಥಿಗಳ ಸಂಘ ಭೈರಾಮಡಗಿ ವತಿಯಿಂದ ಅಫಜಲಪುರ ತಾಲೂಕಿನ ಭೈರಾಮಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರ ಈ ಭಾಗದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ನೇಮಕ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೊಸ ಶಿಕ್ಷಕರು ಬಂದ ನಂತರ ಶೈಕ್ಷಣಿಕ ಸುಧಾರಣೆಗೆ ಪೂರಕವಾಗುತ್ತದೆ ಎಂದರು.
ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ| ಚೆನ್ನಾರೆಡ್ಡಿ ಪಾಟೀಲ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದವರೇ ಉನ್ನತ ಸ್ಥಾನ ಪಡೆದಿದ್ದಾರೆ. ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದರು.ಕುಡಾ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಮಾತನಾಡಿ, ಬರೀ ಅಂಕ ಗಳಿಕೆ ಶಿಕ್ಷಣ ಮಾನದಂಡವಲ್ಲ. ಸರ್ಕಾರಿ ಶಾಲೆ, ದೊಡ್ಡ ಶಾಲೆ ಎಂಬ ಬೇಧ-ಭಾವ ಬೇಡ. ಬಡವರೇ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ರಮೇಶ್ ಜಾನಕರ್ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳದ 15 ಅಂಶಗಳ ಕುರಿತು ಮಾಹಿತಿ ನೀಡಿದರು. ಸರ್. ಸಿ.ವಿ. ರಾಮನ್ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ| ಎಂ.ಎಸ್. ಜೋಗದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದಿಗೆ ಬಡತನ ಕಾರಣವಾಗಬಾರದು. ಶಿಕ್ಷಕರು ಬದಲಾಗಬೇಕು. ಪರಿವರ್ತನೆ ಹೊಂದಬೇಕು. ಹೊಸ ಶಿಕ್ಷಣ ನೀತಿ ಬದಲಾವಣೆ ಪರಿಣಾಮ ಕಾದು ನೋಡಬೇಕಿದೆ ಎಂದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.ಶಾಲೆ ಮುಖ್ಯ ಗುರುಗಳಾದ ಜುಬ್ರಾಯಿಲ್ ಮುಲ್ಲಾ, ಎಸ್‌ಡಿಎಂಸಿ ಅಧ್ಯಕ್ಷ ತುಕಾರಾಂ ಯಳಸಂಗಿ, ಮುಖಂಡರಾದ ಈರಣ್ಣಗೌಡ ಪಾಟೀಲ್, ಲಕ್ಷ್ಮೀಪುತ್ರ ಜವಳಿ, ಹುಸೇನಿ ಜಮಾದಾರ, ಅಶೋಕ ಗುತ್ತೇದಾರ, ಶಂಕರ ಪಾಟೀಲ್ ಸೇರಿದಂತೆ ಇತರರಿದ್ದರು. ಕಾರ್ಯಕ್ರಮ ಸಂಯೋಜಕ, ಶಿಕ್ಷಕ ಸಂತೋಷ ಕುಮಾರ ಖಾನಾಪುರೆ ಅತಿಥಿಗಳ ಪರಿಚಯ ಮಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ ನಿರೂಪಿಸಿದರು. ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಹಣಮಂತರಾವ್ ಹಿರೇಗೌಡ
ವಂದಿಸಿದರು.
ಸಾಧಕರಿಗೆ ಬಹುಮಾನ
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಗ್ರಾಪಂ ವತಿಯಿಂದ ತಲಾ ಐದು ಸಾವಿರ ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅದೇ ರೀತಿ ಸರ್ವಜ್ಞ ಸಮೂಹ ಶಿಕ್ಷಣ ಸಂಸ್ಥೆಯಿಂದ ಹೊರ ತರಲಾದ ಎಸ್ಸೆಸ್ಸೆಲ್ಸಿ ಸ್ಕೋರ್ ಬೂಸ್ಟರ್ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.