ಧಾರವಾಡ: ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಉಂಟಾಗಿದ್ದ ನೆರೆ ತಣ್ಣಗಾಗಿದ್ದರೆ, ಸಾಂಕ್ರಾಮಿಕ ರೋಗಗಳ ಹಾವಳಿ ಮಾತ್ರ ಹೆಚ್ಚಳವಾಗುತ್ತಲೇ ಇದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕಿಂತ ಅವಳಿನಗರದಲ್ಲಿಯೇ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಹೆಚ್ಚಾಯ್ತು ಡೆಂಘೀ ಹಾವಳಿ: 2017ರಲ್ಲಿ 172 ಜನರಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಡೆಂಘೀ ಆಗ 3 ಜನರನ್ನು ಬಲಿ ಪಡೆದಿತ್ತು. ಈ ಪೈಕಿ ಧಾರವಾಡ ನಗರದಲ್ಲಿ ಇಬ್ಬರು ಹಾಗೂ ಕುಂದಗೋಳದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. 2018ರಲ್ಲಿ ಹುಬ್ಬಳ್ಳಿ ನಗರದಲ್ಲಿ 55 ಹಾಗೂ ಧಾರವಾಡ ನಗರದಲ್ಲಿ 21 ಜನರಲ್ಲಿ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 112 ಜನರಲ್ಲಿ ಕಾಣಿಸಿಕೊಂಡಿತ್ತು.
ಇನ್ನೂ ಈ ವರ್ಷದ 9 ತಿಂಗಳೊಳಗೆ 152 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಧಾರವಾಡ ತಾಲೂಕಿನಲ್ಲಿ 14, ಹುಬ್ಬಳ್ಳಿ ತಾಲೂಕಿನಲ್ಲಿ 8, ಕಲಘಟಗಿಯಲ್ಲಿ 6, ಕುಂದಗೋಳದಲ್ಲಿ 4, ನವಲಗುಂದದಲ್ಲಿ 6 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಇನ್ನು ಹುಬ್ಬಳ್ಳಿ ಶಹರದಲ್ಲಿಯೇ 104 ಹಾಗೂ ಧಾರವಾಡ ಶಹರದಲ್ಲಿ 10 ಜನರಲ್ಲಿ ಡೆಂಘೀ ದೃಢಪಟ್ಟಿದೆ.
ಚಿಕೂನ್‌ಗುನ್ಯಾ ಗುನ್ನ: 2009ರಲ್ಲಿ ಜಿಲ್ಲೆಯಲ್ಲಿ 308 ಜನರಲ್ಲಿ ಕಾಣಿಸಿಕೊಂಡು ಆರ್ಭಟಿಸಿದ್ದ ಚಿಕೂನಗುನ್ಯಾ 2017ರಲ್ಲಿ 11 ಜನರಲ್ಲಿ ಕಾಣಿಸಿಕೊಂಡು ತಣ್ಣಗಾಗಿತ್ತು. 2018ರಲ್ಲಿ ಮತ್ತೆ 85 ಜನರಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ 2019ರ ಜನವರಿಯಿಂದ ಸೆ. 11ರ ವರೆಗೆ 61 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿದ್ದು, ಧಾರವಾಡ-11, ಹುಬ್ಬಳ್ಳಿ-5, ಕಲಘಟಗಿ-4, ಕುಂದಗೋಳ-3, ನವಲಗುಂದ-10, ಧಾರವಾಡ ಶಹರ-9, ಹುಬ್ಬಳ್ಳಿ ಶಹರ-19 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿವೆ. ಚಿಕೂನ್‌ಗುನ್ಯಾ ಪ್ರಭಾವ ಸಹ ಅವಳಿನಗರದಲ್ಲಿಯೇ ಹೆಚ್ಚಾಗಿದೆ.
Advertisement
ಜನವರಿಯಿಂದ ಜೂ. 7ರ ವರೆಗೆ ಮಲೇರಿಯಾ ರೋಗ 4, ಡೆಂಘೀ 7, ಚಿಕೂನ್‌ಗುನ್ಯಾ 8 ಜನರಲ್ಲಿ ಪತ್ತೆ ಆಗಿತ್ತು. ಇದಾದ ಬಳಿಕ ಬರೀ ಎರಡೇ ತಿಂಗಳಲ್ಲಿ ಮಳೆಗಾಲದ ಹೊಡೆತಕ್ಕೆ ಜು.30ರ ವರೆಗೆ 38 ಜನರಲ್ಲಿ ಡೆಂಘೀ, 31 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ 5 ಜನರಲ್ಲಿ ಮಲೇರಿಯಾ ದೃಢಪಟ್ಟಿತ್ತು. ಆದರೆ ಇದೀಗ ಸೆ. 11ರ ವರೆಗೆ ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಬರೋಬ್ಬರಿ 152 ಜನರಲ್ಲಿ ಡೆಂಘೀ, 61 ಜನರಲ್ಲಿ ಚಿಕೂನ್‌ಗುನ್ಯಾ, 9 ಜನರಲ್ಲಿ ಮಲೇರಿಯಾ ದೃಢಪಟ್ಟಿದೆ!
Related Articles
Advertisement
ಗ್ರಾಮೀಣದಲ್ಲಿ ಮಲೇರಿಯಾ: 2010ರಲ್ಲಿ 309 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗ 2018ರಲ್ಲಿ 25ರಲ್ಲಿ ಕಾಣಿಸಿಕೊಂಡಿತ್ತು. ಇನ್ನೂ ಈ ವರ್ಷದ ಆಗಸ್ಟ್ ಅಂತ್ಯದಲ್ಲಿ ಧಾರವಾಡ ಗ್ರಾಮೀಣದಲ್ಲಿ 1, ನವಲಗುಂದದಲ್ಲಿ 4, ಕಲಘಟಗಿಯಲ್ಲಿ 2, ಹುಬ್ಬಳ್ಳಿ ಶಹರದಲ್ಲಿ 1 ಜನರಲ್ಲಿ ಪತ್ತೆ ಆಗಿದೆ. ಇನ್ನೂ ಮೆದುಳು ಜ್ವರಕ್ಕೆ 2018ರಲ್ಲಿ ಓರ್ವ ವ್ಯಕ್ತಿ ಬಲಿ ಆಗಿದ್ದು, ಈ ವರ್ಷದಲ್ಲಿ ಇದರ ಲಕ್ಷಣಗಳು ಕಂಡುಬಂದಿದ್ದರೂ ದೃಢಪಟ್ಟಿಲ್ಲ.
ತುಂಬಿ ತುಳುಕುತ್ತಿರುವ ಜಿಲ್ಲೆಯ ಆಸ್ಪತ್ರೆಗಳು:
ಜಿಲ್ಲೆಯಲ್ಲಿ ಸುರಿದ ಮಹಾಮಳೆಯ ಬಳಿಕ ಒಂದೆಡೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದರೆ, ಇನ್ನೊಂದೆಡೆ ವಯೋಮಿತಿಯ ಬೇಧವಿಲ್ಲದೇ ಚಿಕ್ಕ ಮಕ್ಕಳಿಂದ ವಯೋವೃದ್ಧರ ವರೆಗೆ ಜ್ವರ, ನೆಗಡಿ, ಕಫದಂತಹ ರೋಗಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ತೀವ್ರ ಜ್ವರ ಹೆಚ್ಚಾಗಿ ಕಂಡುಬರುತ್ತಿದ್ದು, ಇದರೊಂದಿಗೆ ವಾಂತಿ-ಭೇದಿ ಸಹ ಕಂಡು ಬರುತ್ತಲಿದೆ. ಹೀಗಾಗಿ ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುವಂತಾಗಿದೆ. ಇದಲ್ಲದೇ ಕೆಲವೊಂದು ಮಕ್ಕಳಲ್ಲಿ ಜ್ವರ ತೀವ್ರಗೊಂಡು ಅಸುನೀಗಿದ ಘಟನೆಗಳು ಜಿಲ್ಲೆಯಲ್ಲಿ ವರದಿ ಆಗುತ್ತಿದೆ. ಜಿಲ್ಲಾಸ್ಪತ್ರೆ, ಕಿಮ್ಸ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಬೆಡ್ ಸಿಗದೆ ಪರದಾಡುವಂತಾಗಿದೆ.
ಅಸ್ತಮಾ-ಅಲರ್ಜಿ:
ಕುಡಿಯುವ ನೀರಿಗೆ ಕೆಲವೆಡೆ ಚರಂಡಿ ನೀರು ಸಹ ಸೇರುತ್ತಲಿದೆ. ಇದಲ್ಲದೇ ಸೊಳ್ಳೆಗಳ ಪ್ರಮಾಣ ಹೆಚ್ಚಾದ ಕಾರಣ ಸಹಜವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವಂತಾಗಿದೆ. ಇದಲ್ಲದೇ ಹದಗೆಟ್ಟು ಹೋಗಿರುವ ರಸ್ತೆಗಳಲ್ಲಿ ಉಂಟಾಗಿರುವ ಧೂಳಿನಿಂದ ಅಸ್ತಮಾ ರೋಗಿಗಳು ಹೆಚ್ಚು ಬಳಲುವಂತಾಗಿದೆ. ಧೂಳಿನಿಂದ ಅಲರ್ಜಿ ಉಂಟಾಗಿ ಜ್ವರ ಹಾಗೂ ಅತಿ ಕಫ ಉಂಟಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.
•ಶಶಿಧರ್ ಬುದ್ನಿ