ಬಳ್ಳಾರಿ: ಮೇಲ ಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸಂಪೂರ್ಣ ನಿಯಂತ್ರಣವಾಗದಿದ್ದರೂ ಕೆಲ ವರ್ಷಗಳ ಕಾಲ ಮರೆಗೆ ಸರಿದಿದ್ದ ಮಟ್ಕಾ ಅಡ್ಡೆಗಳು ಇದೀಗ ಪುನಃ ನಗರದ ವಿವಿಧೆಡೆ ತಲೆಯೆತ್ತಿವೆ.
ಗಣಿನಗರಿ ಬಳ್ಳಾರಿಯಲ್ಲಿ ಮಟ್ಕಾ ಅಡ್ಡೆಗಳಿಗೆ ಕೆಲ ವರ್ಷಗಳ ಕಾಲ ಸಂಪೂರ್ಣ ಬ್ರೇಕ್ ಬಿದ್ದಿತ್ತು ಎನ್ನಲಾಗದಿದ್ದರೂ ಮೇಲಧಿಕಾರಿಗಳ ಕಠಿಣ ಕ್ರಮಗಳಿಂದ ಒಂದಷ್ಟು ನಿಯಂತ್ರಣಕ್ಕೆ ಬಂದಿತ್ತು. ಪರಿಣಾಮ ಬಹಿರಂಗವಾಗಿ ಮಟ್ಕಾ ಬರೆಯುತ್ತಿದ್ದ ಬುಕ್ಕಿಗಳು ಮರೆಗೆ ಸರಿದು, ಮೊಬೈಲ್‌ಗಳನ್ನು ಬಳಸಿ ಬರೆಯುತ್ತಿದ್ದರು.
ಅವಿದ್ಯಾ ವಂತರು, ಕೂಲಿ ಕಾರ್ಮಿಕರು ಇದರಿಂದ ಮುಕ್ತರಾಗಿದ್ದಾರೆ ಎನ್ನಲಾಗದಿದ್ದರೂ, ಕದ್ದು ಮುಚ್ಚಿ ಬುಕ್ಕಿಗಳು ಇರುವೆಡೆಗೆ ತೆರಳಿ ಚೀಟಿಗಳನ್ನು ಬರೆಸಿಕೊಂಡು ಬರುತ್ತಿದ್ದರು. ಆದರೆ, ಕಳೆದ ಕೆಲ ತಿಂಗಳಿಂದ ಮಟ್ಕಾ ಅಬ್ಬರ ಎಲ್ಲೆಡೆ ಹೆಚ್ಚಾಗಿದೆ. ಪೊಲೀಸರ ಭಯವಿಲ್ಲದೇ ಬಹಿರಂಗವಾಗಿಯೇ ಮಟ್ಕಾ ಬರೆಯುತ್ತಿರುವುದು ಕಂಡು ಬರುತ್ತಿದೆ.
ಈಗ ನಾಲ್ಕು ಆಟಗಳು:ಈ ಮೊದಲು ಮಟಕಾ ಆಡುವವರು ರಾತ್ರಿ ವೇಳೆ ಆಟ ಆಡುತ್ತಿದ್ದರು. ಆದರೆ ಇದೀಗ ದಿನಕ್ಕೆ ನಾಲ್ಕು ಆಟಗಳು ಬಂದಿವೆ ಎನ್ನಲಾಗುತ್ತಿದೆ. ಬೆಳಗ್ಗೆ 10-11 ಗಂಟೆಯಿಂದಲೇ ಮಟ್ಕಾ ಬರೆಯಲಾಗುತ್ತಿದೆ. ಬೆಳಗ್ಗೆ ಡೇ ಮುಂಬೈ, ಮಧ್ಯಾಹ್ನ ಡಬರಾ, ಸಂಜೆ ಕಲ್ಯಾಣಿ, ರಾತ್ರಿ ನೈಟ್ ಮುಂಬೈ ಹೀಗೆ ನಾಲ್ಕು ಆಟಗಳಿಗೂ ಬುಕ್ಕಿಗಳು ಮಟ್ಕಾ ಬರೆಯುತ್ತಿದ್ದಾರೆ. ಕೆಲ ಸ್ಲಂ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು ಮಟ್ಕಾಕ್ಕೆ ಜೋತು ಬಿದ್ದಿದ್ದಾರೆ. ಒಂದರಲ್ಲಿ ಸೋತರೂ ಮತ್ತೂಂದು ಆಟದಲ್ಲಿ ಗೆಲ್ಲಬಹುದೆಂಬ ಆಶಾಭಾವನೆಯಿಂದ ಮಟ್ಕಾ ಆಡಿ, ಮಟ್ಕಾ ನಂಬರ್‌ಗಳು ಬರುವಿಕೆಯನ್ನೇ ಕಾದು ಕುಳಿತಿರುತ್ತಾರೆ ಎಂದು ಹೇಳಲಾಗುತ್ತಿದೆ.
ಮಟ್ಕಾದಲ್ಲಿ ಪ್ರತಿದಿನ ಗೆದ್ದವರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದರೆ ಸೋತವರು ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಬಾಡಿಗೆ ಮನೆಗಳಲ್ಲಿ ಮಟ್ಕಾ:ಮಟ್ಕಾವನ್ನು ಬಹಿರಂಗವಾಗಿಯೇ ಬರೆಯಲು ಮುಂದಾಗಿರುವ ಬುಕ್ಕಿಗಳು ಸ್ಲಂ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಮಟ್ಕಾ ಬರೆಯುತ್ತಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲೇ ಬಹಿರಂಗವಾಗಿ ಬರೆಯುತ್ತಿದ್ದಾರೆ.
ಹೀಗೆ ನಗರದ ಏಳನೇ ವಾರ್ಡ್, ಕೊಲಿಮಿಬಜಾರ್, ಮಿಲ್ಲರ್‌ಪೇಟೆ, ಸಣ್ಣ ಮಾರುಕಟ್ಟೆ, ಬೆಂಕಿ ಮಾರೆಮ್ಮ ದೇವಸ್ಥಾನ, ಬಂಡಿಮೋಟ್, ಕಪ್ಪಗಲ್ಲು ರಸ್ತೆ, ಕೌಲ್ ಬಜಾರ್ ಸೇರಿ ನಗರದ ಹಲವೆಡೆ ಹಾಗೂ ಗ್ರಾಮೀಣ ಭಾಗದ ವಿವಿಧ ಹಳ್ಳಿಗಳಲ್ಲೂ ಬುಕ್ಕಿಗಳು ಬಹಿರಂಗವಾಗಿಯೇ ಮಟ್ಕಾ ಬರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ಈ ಅಡ್ಡೆಗಳು ಪೊಲೀಸರಿಗೆ ಗೊತ್ತಿಲ್ಲ ಅಂತ ಅಲ್ಲ ಎಲ್ಲವೂ ಗೊತ್ತು. ಆದರೆ ಪೊಲೀಸ್ ಅಧಿ ಕಾರಿಗಳಂತೂ ಮೌನ ವಹಿಸಿದ್ದಾರೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.