Advertisement

ಚುನಾವಣೆಯ ಹೊತ್ತಲ್ಲಿ ಹೆಚ್ಚಿದ ನಿರೀಕ್ಷೆ

06:00 AM Apr 04, 2018 | |

ಪ್ರತಿಯೊಂದು ಪಕ್ಷದಲ್ಲೂ ಯುವಜನ ವಿಭಾಗಗಳಿವೆ, ಆಯಾ ಪಕ್ಷದ ವಿದ್ಯಾರ್ಥಿ ಘಟಕಗಳಿವೆ. ಈ ಎಲ್ಲಾ ಘಟಕಗಳಿಗೆ ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳಿದ್ದಾರೆ. ಅವರು ಯುವಜನ ಪರವಾಗಿ ಏನು ಮಾಡುತ್ತಿದ್ದಾರೆ? ಕರ್ನಾಟಕದಲ್ಲಿ 1.80 ಕೋಟಿ ಯುವ ಜನರಿದ್ದಾರೆ. ಈ ಬಹು ದೊಡ್ಡ ಯುವ ಸಮುದಾಯದ ಕುರಿತು ಯಾವ ರಾಜಕಿಯ ಪಕ್ಷಗಳಲ್ಲಾದರೂ ಗಂಭೀರ ಚರ್ಚೆಗಳಾಗುತ್ತಿವೆಯೇ? 

Advertisement

ಕರ್ನಾಟಕದ ಮತದಾರರು 2018ರ ಮಹಾಚುನಾವಣಾ ಜಾತ್ರೆಯನ್ನು ಎದುರು ನೋಡುತ್ತಿದ್ದಾರೆ. ರಾಜಕಿಯ ಪಕ್ಷಗಳು ಜಾತ್ರೆಯ ಯಾತ್ರೆಗಳನ್ನು ಮೂರು ತಿಂಗಳಿಗೆ ಮುಂಚೆಯೇ ಪ್ರಾರಂಭಿಸಿವೆ. ಮತದಾರರ ಕಣ್ಣು-ಕಿವಿಗಳಿಗೆ (ಬಾಯಿಗೆ ಕೂಡ) ಚುನಾವಣೆಯ ಹಬ್ಬ ಈಗಿನಿಂದಲೇ ಪ್ರಾರಂಭವಾಗಿದೆ. ರಾಜಕಿಯದ ಅತಿರಥ, ಮಹಾರಥರ ಹೇಳಿಕೆಗಳೂ, ಭರಪೂರ ಆಶ್ವಾಸನೆಗಳೂ ಹೊರಬೀಳುತ್ತಿವೆ.  

ಇತ್ತೀಚೆಗೆ ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ ತಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದು? ಎಂದು ಕೇಳಿದ್ದಕ್ಕೆ, ಆರೋಗ್ಯ, ನೀರು ಮತ್ತು ಕೃಷಿಯನ್ನು ತಮ್ಮ ಆದ್ಯತೆಗಳೆಂದಿರುವುದು ವರದಿಯಾಗಿದೆ. ಒಳ್ಳೆಯದೆ, ಆದರೆ ಈ ಎಲ್ಲಾ ಆಶ್ವಾಸನೆಗಳನ್ನು ಬಿತ್ತಿ ಅಧಿಕಾರದ ಬೆಳೆ ಬೆಳೆಯುವ ಪ್ರಕ್ರಿಯೆಯಲ್ಲಿ ಯುವಜನರು ನೀರು, ಗೊಬ್ಬರದಂತೆ ಬಳಸಲ್ಪಡುತ್ತಾರೆ. ಎಲ್ಲಾ ಪಕ್ಷಗಳೂ ಯುವ ಜನರನ್ನು ತಮ್ಮ ರಾಜಕೀಯ ಕಾರ್ಯತಂತ್ರದಲ್ಲಿ ಮುಖ್ಯ ಬಿಂದು ವಾಗಿಟ್ಟುಕೊಂಡೇ ತಮ್ಮ ಚುನಾವಣಾ ರಣತಂತ್ರಗಳನ್ನು ಹೆಣೆ ಯುತ್ತಾರೆ. ಅದಕ್ಕೆ ಪೂರಕವಾಗಿ ಅವರನ್ನು ಬಳಸಿಕೊಳ್ಳುತ್ತಾರೆ. 

ಆದರೆ ಯಾರು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ಕೊಡಬಲ್ಲರೋ, ಯಾರು ಇಂದು ದೇಶದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವರೋ, ಅಂತಹ ಯುವಜನರು ಮತ್ತು ಅವರ ವಿಷಯಗಳು ನಮ್ಮ ರಾಜಕಿಯ ಪಕ್ಷಗಳಿಗೆ ಆದ್ಯತೆ ಅಲ್ಲದಿರುವುದು ವಿಷಾದನೀಯ. ಪ್ರತಿಯೊಂದು ಪಕ್ಷದಲ್ಲೂ ಯುವಜನ ವಿಭಾಗಗಳಿವೆ, ಆಯಾ ಪಕ್ಷದ ವಿದ್ಯಾರ್ಥಿ ಘಟಕಗಳಿವೆ. ಈ ಎಲ್ಲಾ ಘಟಕಗಳಿಗೆ ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳಿದ್ದಾರೆ. ಅವರು ಯುವಜನರ ಪರವಾಗಿ ಏನು ಮಾಡುತ್ತಿದ್ದಾರೆ? ಯುವಜನ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದಂತೆ ಅವರಲ್ಲಿ ಏನು ಕಾರ್ಯ ಯೋಜನೆಗಳಿವೆ? ಯುವಜನರು ಕೇವಲ ಹೋರಾಟ ಹಾಗೂ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಲಾಳುಗಳಂತೆ ದುಡಿಯ ಲಿಕ್ಕಷ್ಟೇ ಸೀಮಿತವೆ? ಇವರಾರೂ ಏಕೆ ತಮ್ಮ ಪಕ್ಷದಲ್ಲಿ ಯುವ ಜನರ ಪರವಾಗಿ ಚಕಾರವೆತ್ತದೆ “ಹೌದಪ್ಪ’ಗಳಾಗಿದ್ದಾರೆ?.

ಕರ್ನಾಟಕದಲ್ಲಿ 1.80 ಕೋಟಿ ಯುವ ಜನರಿದ್ದಾರೆ. ಈ ಬಹು ದೊಡª ಯುವ ಸಮುದಾಯದ ಕುರಿತು ಯಾವ ರಾಜಕಿಯ ಪಕ್ಷಗಳಲ್ಲಾದರೂ ಗಂಭೀರ ಚರ್ಚೆಗಳಾಗುತ್ತಿವೆಯೇ? ದುಡಿ ಯುವ ಕೈಗಳಿಗೆ ಉದ್ಯೋಗವಿಲ್ಲದೆ ನಿರುದ್ಯೋಗ ತಾಂಡವ ವಾಡುತ್ತಿದೆ, ವಿವಿಧ ಭಾಗ್ಯಗಳನ್ನು ಕರುಣಿಸುವ ಜನ ಉದ್ಯೋಗ ಭಾಗ್ಯ ಕೊಡುವ ಬಗ್ಗೆ ಏಕೆ ಮಾತನಾಡುವುದಿಲ್ಲ? ಕೆಲಸವಿಲ್ಲದ ಯುವಜನರ ಕೈಗಳಿಗೆ ಕೆಲಸ ಕೊಟ್ಟರೆ ಈ ಭಾಗ್ಯಗಳ ಹಂಗೇಕೆ? ರಾಜ್ಯಕ್ಕೆ ಸಾಲದ ಹೊರೆಯೇಕೆ? ಚುನಾವಣೆಯ ಈ ಹೊತ್ತಿನಲ್ಲಿ ರಾಜ್ಯದಲ್ಲಿನ ಬೃಹತ್‌ ಪ್ರಮಾಣದ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗ ನೀಡುವ ಬಗ್ಗೆ ರಾಜಕೀಯ ಪಕ್ಷಗಳು ಯಾವ ರೀತಿಯ ಕಾರ್ಯ ಯೋಜನೆ ರೂಪಿಸಿಕೊಳ್ಳುತ್ತಿವೆ ಎಂಬುದನ್ನು ಕರ್ನಾಟಕದ ಯುವಜನರು ಎದುರು ನೋಡುತ್ತಿದ್ದಾರೆ. ಅಲ್ಲಲ್ಲಿ ಉದ್ಯೋಗಕ್ಕಾಗಿ ಯುವಜನರು ಧ್ವನಿ ಎತ್ತುತ್ತಿರುವುದು ಕೂಡ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. 

Advertisement

ಯುವಜನರು ಮಾದಕ ವ್ಯಸನ, ಅಪರಾಧ ಮತ್ತು ಆತ್ಮಹತ್ಯೆಯಂತಹ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಬೊಬ್ಬೆ ಇಡುವ ರಾಜಕೀಯ ಮುತ್ಸದ್ದಿಗಳು, ನೀತಿ ನಿರೂಪಕರು, ಹಿರಿಯರು ಇದಕ್ಕೆಲ್ಲಾ ಕಾರಣಗಳೇನು ಎಂಬ ಬಗ್ಗೆ ಚಿಂತನೆ ನಡೆಸಿದ್ದಾರೆಯೇ? ವಿದ್ಯಾರ್ಥಿಗಳಿಗೆ ತಮ್ಮ ಸಾಮಾರ್ಥ್ಯ ಗಳೇನು? ಕೌಶಲ್ಯಗಳೇನು? ತಾವು ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ಮಾರ್ಗದರ್ಶನವಿಲ್ಲದೆ, ತಂದೆತಾಯಿಗಳ ಒತ್ತಡಕ್ಕೋ, ಶಿಕ್ಷಕರ ಸಲಹೆಯ ಮೇರೆಗೂ ಯಾವುದೋ ಒಂದು ಕೋರ್ಸ್‌ ಆಯ್ಕೆಮಾಡಿಕೊಂಡು, ನಂತರ ಅದು ತಮ್ಮ ಕ್ಷೇತ್ರವಲ್ಲವೆಂದು ಅದರಲ್ಲಿ ಆಸಕ್ತಿಕಳೆದುಕೊಳ್ಳುವ ಎಷ್ಟೋ ಘಟನೆಗಳು ನಮ್ಮ ನಡುವೆ ಕಾಣಸಿಗುತ್ತವೆ. ಇದರಿಂದ ಬೇಸತ್ತು ಪೋಷಕರಿಗೆ ಉತ್ತರವನ್ನು ಕೊಡಲಾಗದೆ, ಅತ್ತ ದುಡಿದು ತಿನ್ನಲು ಕೆಲಸವೂ ಇಲ್ಲದೆ ಖನ್ನತೆ ಮತ್ತು ಆತ್ಮಹತ್ಯೆಗೊಳಗಾದ ಸಾವಿರಾರು ಉದಾಹರಣೆಗಳಿವೆ. 

ದೇಶದ ಶೇ.37ರಷ್ಟು ಯುವಜನರು ಸಾಧಾರಣಮಟ್ಟದ ಖನ್ನತೆಯನ್ನು ಅನುಭವಿಸುತ್ತಿದ್ದಾರೆ, ದೇಶದ ಒಟ್ಟು ಆತ್ಮಹತ್ಯೆಗಳ ಪೈಕಿ ಯುವಜನರ ಪಾಲು ಶೇ 35ರಷ್ಟು, ಶೇ.51ರಷ್ಟು ಯುವ ಜನರನ್ನು ಅಪೌಷ್ಟಿಕತೆ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ದೇಶದ ಭವಿಷ್ಯ ಯುವಜನರ ಮೇಲೆ ಅವಲಂಬಿಸಿದೆ ಎಂದು ಭಾಷಣ ಬಿಗಿಯುವ ರಾಜಕಾರಣಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಈ ವಿಷಯಗಳೆಲ್ಲಾ ಏಕೆ ಆದ್ಯತೆ ಆಗುವುದಿಲ್ಲ?.

ಯುವಜನರಿಂದ ಅಭಿವೃದ್ಧಿ ನಿರೀಕ್ಷಿಸಬೇಕಾದಲ್ಲಿ ಮೊದಲು ಅವರನ್ನು ಸಬಲೀಕರಣ ಮಾಡ‌ಬೇಕು. ಸಬಲೀಕರಣದ ಮೊದಲ ಹೆಜ್ಜೆಯೇ ಅವರನ್ನು ಅರ್ಥಮಾಡಿಕೊಳ್ಳುವುದು. ಯುವಜನರ ಮಾನಸಿಕ ತುಮುಲಗಳನ್ನು ಅರ್ಥಮಾಡಿಕೊಳ್ಳುವ, ಅವರು ಎದುರಿಸುವ ಮಾನಸಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಆಲಿಸಿಕೊಳ್ಳುವ, ಅದಕ್ಕೆ ಅಗತ್ಯ ಮಾರ್ಗದರ್ಶನ ಮಾಡುವ, ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಆಯ್ಕೆಮಾಡಿಕೊಳ್ಳುವಲ್ಲಿ ಅವರ ಗೊಂದಲವನ್ನು ದೂರಮಾಡುವ, ಅವರು ತಮ್ಮ ಸಂಪೂರ್ಣ ಸಾಮರ್ಥ್ಯಗಳನ್ನು ಗುರುತಿಸಿ ವಿಕಾಸ ಹೊಂದಲು ಜೀವನ ಕೌಶಲ್ಯಗಳಂತಹ ತರಬೇತಿ ನೀಡಲು ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸು  ವುದು ಇಂದಿನ ತುರ್ತು ಆಗಿದೆ. 

ಯುವಜನರು ಎದುರಿಸುತ್ತಿರುವ ಅತಿದೊಡ್ಡ ಸವಾಲು ನಿರುದ್ಯೋಗ. 18 ವರ್ಷ ಮೇಲ್ಪಟ್ಟ, ಉದ್ಯೋಗ ಮಾಡಬ
ಯಸುವ ಎಲ್ಲರಿಗೂ ಉದ್ಯೋಗ ನೀಡುವುದು. ಸೂಕ್ತ ಉದ್ಯೋಗ ನೀಡಲು ಸಾಧ್ಯವಾಗದಿದ್ದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡುವ ಬಗ್ಗೆ ಪಕ್ಷಗಳು ಭರವಸೆ ನೀಡಬೇಕಿದೆ. ಅಲ್ಲದೆ ಖಾಸಗಿ ಮತ್ತು ಸರಕಾರಿ ವಲಯದಲ್ಲಿ ಯಾವುದೇ ರೀತಿಯಲ್ಲಿ ಇರುವ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸುವುದು ಮತ್ತು ಎಲ್ಲಾ ಉದ್ಯೋಗಿಗಳನ್ನು ಖಾಯಂಗೊಳಿಸುವುದು ಕೂಡ ಅತ್ಯಗತ್ಯವಾಗಿದೆ. ಇದು ಕ್ರಾಂತಿಕಾರಕ ಹೆಜ್ಜೆಯಾದರೂ ಪ್ರಾರಂಭಿಸಲೇಬೇಕಿದೆ. ಆ ಮೂಲಕ ಕರ್ನಾಟಕ ಯುವ ಸಬಲೀಕರಣ ಕ್ಷೇತ್ರದಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಲಿ. 

ಇತ್ತೀಚೆಗೆ ನಿವೃತ್ತಿಯ ವಯಸ್ಸನ್ನು ಮತ್ತಷ್ಟು ಹೆಚ್ಚಿಸುವ ಯುವಜನ ವಿರೋಧಿ ಚಿಂತನೆಗಳು ನಡೆಯುತ್ತಿವೆ. ಅದರ ಬದಲಿಗೆ ನಿವೃತ್ತಿ ವಯಸ್ಸನ್ನು 55 ವರ್ಷಕ್ಕೆ ಇಳಿಸುವುದು ಸೂಕ್ತ. ಕೆಲಸದ ಅವಧಿಯನ್ನು 8 ರಿಂದ 6 ಗಂಟೆಗೆ ಅಥವಾ 6 ರಿಂದ 5 ದಿನಗಳಿಗೆ ಇಳಿಸುವುದು ಆ ಮೂಲಕ ಉದ್ಯೋಗ ಅವಕಾಶಗಳ ಮರು ಹಂಚಿಕೆ ಮಾಡಿ ಎಲ್ಲರಿಗೂ ಉದ್ಯೋಗ ಸಿಗುವಂತೆ ಮಾಡಬಹುದು. ಎಲ್ಲಾ ಕ್ಷೇತ್ರಗಳಲ್ಲಿ ಕನಿಷ್ಟ ಕೂಲಿಯನ್ನು 18,000 ರೂಪಾಯಿ ಮಾಡುವುದು ಕೂಡ ಸಮಾನತೆಯನ್ನು ಎತ್ತಿ ಹಿಡಿ ಯುತ್ತದೆ. ಇದೆಲ್ಲವನ್ನು ಸಾಕಾರಗೊಳಿಸಲು ಪ್ರತಿ ಗ್ರಾಮ ಪಂಚಾ ಯತ್‌ಗೆ ಒಬ್ಬ ಯುವಜನ ಸಬಲೀಕರಣ ಮತ್ತು ಉದ್ಯೋಗ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಪಕ್ಷಗಳು ಯೋಚಿಸಲಿ. 

ಸ್ಥಳೀಯಾಡಳಿತದಲ್ಲಿ ಯುವಜನರು ಸಕ್ರಿಯವಾಗಿ ಭಾಗವಹಿ ಸುವುದನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಯುವಜನರು ಕೊಡುಗೆ ಕೊಡಲು ರಾಜ್ಯದ ಪ್ರತೀ ಗ್ರಾಮ ಪಂಚಾಯತಿಯೂ ಪ್ರತಿ ವರ್ಷ ಜನವರಿ 12ರ ರಾಷ್ಟ್ರೀಯ 
ಯುವ ದಿನದಂದು ಯುವಜನ ಗ್ರಾಮ ಸಭೆಗಳನ್ನು ಆಯೋ ಜಿಸುವ ಬಗ್ಗೆ ಯೋಜನೆ ರೂಪಿಸಲಿ. 

ಯುವಜನರ ಮಾನಸಿಕ ಆರೋಗ್ಯ ರಕ್ಷಣೆಗೆ ಯುವ ಸಬಲೀ ಕರಣ ಇಲಾಖೆಯು ನಿಮ್ಹಾನ್ಸ್‌ ಸಹಯೋಗದಲ್ಲಿ ಅನುಷ್ಠಾನ ಗೊಳಿಸಿರುವ ಯುವಸ್ಪಂದನ ಯೋಜನೆಯನ್ನು ತಾಲೂಕು ಹಂತಕ್ಕೆ ವಿಸ್ತರಿಸಲಿ. 15ರಿಂದ 30 ವರ್ಷ ವಯೋಮಾನದವರಿಗಾಗಿ ಕರ್ನಾಟಕದ ಹಲವಾರು ಇಲಾಖೆ, ನಿಗಮ ಮಂಡಳಿಗಳಲ್ಲಿ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಅ ಬಗ್ಗೆ ಯುವ ಸಬಲೀಕರಣ ಇಲಾಖೆ ಯಲ್ಲಿ ಮಾಹಿತಿಯೇ ಇಲ್ಲ. ಹಾಗಾಗಿ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಯುವ ಜನರಿಗಾಗಿ ಇರುವ ಯೋಜನೆಗಳನ್ನು ಸಮನ್ವಯಗೊಳಿಸಲು ರಾಜ್ಯ ಯುವಜನ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ. 

ಇನ್ನು ರಾಜ್ಯದಲ್ಲಿ ಯುವಜನರ ಸಬಲೀಕರಣಕ್ಕೆ ಪಣ ತೊಟ್ಟಿರುವ ಇಲಾಖೆಯೇ ಸಬಲವಾಗಿಲ್ಲದಿರುವುದು ವಿಪ ರ್ಯಾಸ. ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳ ಅಧಿಕಾರಿಗಳೇ ಇಲ್ಲ, ಬಹುಪಾಲು ಹುದ್ದೆಗಳು ದಶಕದಿಂದ ಖಾಲಿಯಾಗಿವೆ. ತಾಲೂಕು ಹಂತದಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿಲ್ಲ. 

ಇಂತಹ ಪರಿಸ್ಥಿತಿ ಯಲ್ಲಿರುವ ಈ ಇಲಾಖೆ ರಾಜ್ಯದ ಯುವಜನರನ್ನು ಹೇಗೆ ಸಬಲೀಕ ರಿಸಲು ಸಾಧ್ಯ? ಹಾಗಾಗಿ ಮೊದಲು ಇಲಾಖೆಯನ್ನು ಪುನರ್‌ ರಚನೆ ಮಾಡಿ ಹುದ್ದೆಗಳನ್ನು ತುಂಬಲಿ. ಅದರಲ್ಲಿ ಯುವಜನರಿಗೆ ಯುವಜನ ಅಭಿವೃದ್ಧಿಗಾಗಿ ದುಡಿದವರಿಗೆ ಅವಕಾಶ ನೀಡುವ ಮೂಲಕ ಇಲಾಖೆಯನ್ನು ಬಲ ಪಡಿಸಬೇಕಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕರ್ನಾ ಟಕದ ಯುವಜನರನ್ನು ಸಬಲೀಕ‌ರಿಸಲು, ಅವರಿಗೆ ಅಗತ್ಯ ವಾದ ಯೋಜನೆ ಮತ್ತು ಕಾರ್ಯ ಕ್ರಮ ರೂಪಿಸಲು, ಯುವಜನ ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಪೂರಕವಾಗಿ ಸಂಶೋಧನೆ ಕೈಗೊಳ್ಳಲು, ಯುವಜನರ ಹಕ್ಕುಬಾಧ್ಯತೆಗಳನ್ನು ರಕ್ಷಿಸಲು “ರಾಜ್ಯ ಯುವಜನ ಆಯೋಗ’ ರಚಿಸುವುದೂ ಕೂಡ ಕರ್ನಾಟಕ ರಾಜ್ಯದ ಯುವಜನ ಸಬಲೀಕರಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. 

ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ತಾವು ಜನಪರವಾದ ಮತ್ತು ಜನರ ಧ್ವನಿಯನ್ನು, ಅವರ ಬೇಕು ಬೇಡಗಳನ್ನು ಆಧರಿಸಿ ತಮ್ಮ ಪಕ್ಷಗಳ ಪ್ರಣಾಳಿಕೆ ರಚಿಸುತ್ತೇವೆ ಎಂದು ಘೋಷಿಸಿಕೊಂಡಿವೆ. ರಾಷ್ಟ್ರದ ವಿಕಾಸದಲ್ಲಿ ನಿರ್ಣಾಯಕ ಪಾತ್ರವಹಿಸುವ ಯುವಜನರ ಧ್ವನಿ ರಾಜಕೀಯ ಪಡಸಾಲೆಯಲ್ಲಿ ಪ್ರತಿಧ್ವನಿಸಲಿದೆಯೇ ಕಾದು ನೋಡೋಣ.

ತಿಪ್ಪೇಸ್ವಾಮಿ ಕೆ.ಟಿ

Advertisement

Udayavani is now on Telegram. Click here to join our channel and stay updated with the latest news.

Next