ಮಂಡ್ಯ: ಪರಿಸರ ಕಲುಷಿತಗೊಳ್ಳುತ್ತಿರುವುದರಿಂದ ಮನುಷ್ಯ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಕೃಷಿಕ ಲಯನ್ಸ್ ಸಂಸ್ಥೆಯ ಮಹಾಪೋಷಕ ಕೆ.ಟಿ.ಹನುಮಂತು ಹೇಳಿದರು.
ನಗರದ ಹಾಲಹಳ್ಳಿಯ ಸ್ಮಶಾನದಲ್ಲಿ ಹಸಿರು ಮಂಡ್ಯ- 2019ರ ಅಂಗವಾಗಿ ಕೃಷಿಕ ಲಯನ್ಸ್ ಸಂಸ್ಥೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರು ಮಂಡ್ಯ- 2019 ಕಾರ್ಯಕ್ರಮದಡಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಜೂನ್ ತಿಂಗಳಿನಾದ್ಯಂತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯದ ಹಲವೆಡೆ ಮಳೆ ಬೀಳುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿದೆ. ಇದರಿಂದ ಪರಿಸರ ಸಂರಕ್ಷಣೆಗೆ ಮುಂದಾಗಿದ್ದೇವೆ ಎಂದು ಹೇಳಿದರು.
ವಿಷಪೂರಿತ ಮಿಶ್ರಣ: ಭೂಮಿಯ ಮೇಲಿನ ಪದರಗಳಲ್ಲಿ ಪ್ರಾಣವಾಯು ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಸಾರಜನಕ, ಗಂಧಕಗಳು, ಆಕ್ಸೈಡ್‌ಗಳ ವಿಷಪೂರಿತ ಮಿಶ್ರಣ ಅಧಿಕಗೊಳ್ಳುತ್ತಿರು ವುದರಿಂದ ಪ್ರಸ್ತುತವಾಗಿ ಗಣನೀಯ ಸಂಖ್ಯೆಯ ಜನರು ಶ್ವಾಸಕೋಶದ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ರೋಗ-ರುಜಿನಗಳ ಪ್ರಮಾಣ ಹಾಗೂ ತೀವ್ರತೆ ಏರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವೇ ನಿರ್ಮಿಸಿದ ವಿಷದ ಜಾಲದಲ್ಲಿ ಸಿಕ್ಕಿ ಪರಿಪರಿಯಾಗಿ ಪರಿತಾಪ ಪಡುತ್ತಿದ್ದೇವೆ. ನಾಗರೀಕತೆ ಬೆಳೆದಂತೆಲ್ಲಾ ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದೇ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳ ಬದುಕು ದುಸ್ತರವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ವಾಸಿಸುವ ಸ್ಥಳ ಹಾಗೂ ಸುತ್ತ ಮುತ್ತಲಿನ ಜಾಗಗಳಲ್ಲಿ ಉತ್ತಮ ವಾತಾವರಣ ಹಾಗೂ ನೈರ್ಮಲ್ಯ ತುರ್ತಾಗಿ ಮಾಡಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಜವಾಬ್ದಾರಿ ಹಾಗೂ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಪರಿಸರ ಸಂರಕ್ಷಿಸಿ: ಯುವಕ-ಯುವತಿಯರ ಹೊಣೆಗಾರಿಕೆ ಬಹಳಷ್ಟಿದೆ. ಅಪಾಯದ ಗಂಟೆ ಇನ್ನೂ ಹೆಚ್ಚಿನ ರೀತಿ ಮೊಳಗುವ ಮುನ್ನ ಎಚ್ಚರಗೊಳ್ಳಬೇಕಾದೆ. ಹಸಿರೇ ಉಸಿರು, ಪರಿಸರ ಸಂರಕ್ಷಣೆ ಜೀವಕ್ಕೆ ರಕ್ಷಣೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ ಎಂಬ ಮೂಲ ಮಂತ್ರವನ್ನು ಪ್ರತಿಯೊಬ್ಬರು ಕಾಯಾ-ವಾಚಾ-ಮನಸಾ ಜಪಿಸುತ್ತಾ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರವಿ, ವಲಯ ಅರಣ್ಯಾಧಿಕಾರಿಗಳಾದ ಹರೀಶ್, ಎಚ್.ಆರ್.ಸುರೇಶ್, ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ, ಲಯನ್ಸ್ ವಲಯಾಧ್ಯಕ್ಷ ಬಿ.ಲಿಂಗೇಗೌಡ, ಖಜಾಂಚಿ ಸುರೇಶ್, ವಿಜಯಕುಮಾರ್, ಮಂಗಳಗೌಡ, ಸತೀಶ್ ಭಾಗವಹಿಸಿದ್ದರು.