ಮಂಡ್ಯ: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಪಠ್ಯಕ್ರಮಕ್ಕೆ ಚಾಲನೆ ದೊರಕುತ್ತಿದ್ದಂತೆ ಮಕ್ಕಳ ದಾಖಲಾತಿಗೆ ಬೇಡಿಕೆ ಸೃಷ್ಠಿಯಾಗಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಆಸಕ್ತಿ ತೋರುತ್ತಿದ್ದಾರೆ.
ದಾಖಲಾತಿ ಹೆಚ್ಚಾಗುವ ನಿರೀಕ್ಷೆ: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಇಂಗ್ಲಿಷ್ ಪಠ್ಯಕ್ರಮವನ್ನು ಜಾರಿಗೊಳಿಸಿದೆ. ಶಾಲೆಗಳನ್ನು ಆಯ್ಕೆ ಮಾಡುವುದರ ಜೊತೆಗೆ ಮಕ್ಕಳಿಗೆ ಯಾವ ರೀತಿ ಇಂಗ್ಲಿಷ್ ಪಠ್ಯಕ್ರಮ ಬೋಧಿಸಬೇಕು ಎಂಬ ಬಗ್ಗೆ ಶಿಕ್ಷಕರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಲಾಗಿದೆ. ಇದು ಪ್ರಾಯೋಗಿಕ ಹಂತವಾಗಿರುವುದರಿಂದ ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಪೋಷಕರು ಕೂಡ ನಿರೀಕ್ಷೆಯಂತೆ ಸರ್ಕಾರಿ ಶಾಲೆಗಳತ್ತ ಗಮನಹರಿಸುತ್ತಿದ್ದಾರೆ. ಕೆಲವರು ಬೇರೆಡೆಯಿಂದ ಶಾಲೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರೆ, ಹಲವರು ಈಗಾಗಲೇ ದಾಖಲಾತಿಗೆ ಅರ್ಜಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಎನ್‌ಸಿಆರ್‌ಟಿ ಪಠ್ಯಕ್ರಮ: ಗಣಿತ ಮತ್ತು ಪರಿಸರ ವಿಜ್ಞಾನ ವಿಷಯ ಎನ್‌ಸಿಆರ್‌ಟಿ ಪಠ್ಯಕ್ರಮ ಹೊಂದಿರಲಿದೆ. ಕೆಲವೇ ದಿನಗಳಲ್ಲಿ ತರಗತಿ ಪ್ರಾರಂಭವಾಗಲಿದ್ದು, ಪಾಠ ಮಾಡಲು ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಇವರಿಗೆ ಈಗಾಗಲೇ ಡಯಟ್‌ನಲ್ಲಿ ಕೊನೆ ಹಂತದ ತರಬೇತಿ ನೀಡಲಾಗಿದೆ. ಮಕ್ಕಳಿಲ್ಲದೆ ಅವನತಿಯ ಅಂಚಿಗೆ ಬಂದು ನಿಂತಿರುವ ಸರ್ಕಾರಿ ಶಾಲೆಗಳು ಇದೀಗ ಆಂಗ್ಲಭಾಷಾ ಪಠ್ಯಕ್ರಮ ಅಳವಡಿಕೆಯಿಂದ ಹೊಸತನದೊಂದಿಗೆ ಕಂಗೊಳಿಸಲು ಸಜ್ಜುಗೊಂಡಿವೆ.
ಸರ್ಕಾರಿ ಶಾಲೆಗಳಿಗೆ ಮರುಜೀವ: ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಅವರು ಹೇಳುವ ಪ್ರಕಾರ, ಇಂಗ್ಲಿಷ್ ಪಠ್ಯಕ್ರಮ ಅಳವಡಿಕೆಯಿಂದ ಸರ್ಕಾರಿ ಶಾಲೆಗಳಿಗೆ ಹೊಸ ಜೀವ ಬಂದಂತಾಗಿದೆ. ಕಳೆದ ವರ್ಷ ಶಾಲೆಯಲ್ಲಿ 293 ಮಕ್ಕಳು ದಾಖಲಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಮಕ್ಕಳ ಸಂಖ್ಯೆ 320ಕ್ಕೂ ಹೆಚ್ಚಾಗುವ ನಿರೀಕ್ಷೆ ಇದೆ. ಪೋಷಕರು ಆಂಗ್ಲ ಮಾಧ್ಯಮವಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸಂತೋಷದಿಂದ ಸೇರಿಸುತ್ತಿದ್ದಾರೆ ಎನ್ನುತ್ತಾರೆ.
Advertisement
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ ಏಳು ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ಒಟ್ಟು 28 ಶಾಲೆಯಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಪಠ್ಯಕ್ರಮ ಬೋಧನೆ ಮಾಡಲಾಗುತ್ತಿದೆ. ಈ ಶಾಲೆಗಳಲ್ಲಿ ಮಕ್ಕಳನ್ನು ದಾಖಲಾತಿ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪೋಷಕರು ಈ ಶಾಲೆಗಳಲ್ಲಿ ಪಠ್ಯಕ್ರಮದ ಮಾಹಿತಿ ಪಡೆದುಕೊಂಡು ಮಕ್ಕಳನ್ನು ದಾಖಲಿಸಲು ಒಲವು ತೋರುತ್ತಿದ್ದಾರೆ. ಈಗಾಗಲೇ ದಾಖಲಾತಿಗೆ ಅರ್ಜಿ ತೆಗೆದುಕೊಂಡು ಹೋಗುತ್ತಿರುವ ಪೋಷಕರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.
Related Articles
Advertisement
ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಿರುವ ಬಗ್ಗೆ ಈಗಾಗಲೇ ಎಲ್ಲೆಡೆ ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿದೆ. ಗ್ರಾಮದ ಜನರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಸರ್ಕಾರಿ ಶಾಲೆಗೆ ತಂದು ಸೇರಿಸುತ್ತಿದ್ದಾರೆ. ದೂರದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದ ಮಕ್ಕಳನ್ನು ವಾಪಸ್ ಕರೆತಂದು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನುವುದು ಅವರು ಹೇಳುವ ಮಾತಾಗಿದೆ.
8 ಲಕ್ಷ ರೂ. ಬಿಡುಗಡೆ: ನಮ್ಮ ಶಾಲೆಗೆ ಈಗಾಗಲೇ ಮಕ್ಕಳ ಕಲಿಕಾ ಸಾಮಗ್ರಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ 8 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕಿಟಕಿ, ಬಾಗಿಲು ದುರಸ್ತಿ, ಕಾಂಪೌಂಡ್, ಬೋರ್ಡ್, ಶಾಲೆಗೆ ಬಣ್ಣ ಹೊಡೆಸುವುದು, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉದಯವಾಣಿಗೆ ತಿಳಿಸಿದರು.
ಮಕ್ಕಳ ಮನೆಗೂ ಬೇಡಿಕೆ: ಜಿಲ್ಲೆಯ ಶೈಕ್ಷಣಿಕ ವಿಷಯದಲ್ಲಿ ಕೆಲ ವರ್ಷದಿಂದ ಸಾಕಷ್ಟು ಸದ್ದು ಮಾಡಿರುವ ವಿಷಯ ಮಕ್ಕಳ ಮನೆ. ಸರ್ಕಾರಿ ಶಾಲೆಯಲ್ಲಿಯೇ ‘ಮಕ್ಕಳ ಮನೆ’ ಎಂದು ತೆರೆದು ಎಲ್ಕೆಜಿ, ಯುಕೆಜಿಗೆ ದಾಖಲಾತಿ ಮಾಡಿಕೊಳ್ಳಲಾಯಿತು. ಪ್ರಾರಂಭದ ದಿನಗಳಲ್ಲಿ ವಿರೋಧ ವ್ಯಕ್ತವಾದರೂ ಬಳಿಕ ಬೇಡಿಕೆ ಹೆಚ್ಚಾಯಿತು. ಪರಿಣಾಮ, ಪ್ರಸ್ತುತ 104 ಶಾಲೆಯಲ್ಲಿ ‘ಮಕ್ಕಳ ಮನೆ’ ತೆರೆಯಲಾಗಿದೆ. ಎಸ್‌ಡಿಎಂಸಿ ಮತ್ತು ಪೋಷಕರೇ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ವರ್ಷವೂ ಇನ್ನಷ್ಟು ಶಾಲೆಯಲ್ಲಿ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ 9 ಕರ್ನಾಟಕ ಪಬ್ಲಿಕ್ ಶಾಲೆಗಳು:
ಮಂಡ್ಯ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 9 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯ ಲಾಗಿದೆ. ಕೃಷ್ಣರಾಜಪೇಟೆಗೆ 2, ಮದ್ದೂರು, ಮಳವಳ್ಳಿ, ಮಂಡ್ಯ ಉತ್ತರ ವಲಯ, ಮಂಡ್ಯ ದಕ್ಷಿಣ ವಲಯ, ನಾಗಮಂಗಲ, ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕಿಗೆ ತಲಾ ಒಂದೊಂದು ಶಾಲೆಯನ್ನು ಗುರುತಿಸಿದೆ. ಈ ಶಾಲೆಗಳಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಮಕ್ಕಳ ಹಾಜರಾತಿ ಹೆಚ್ಚಾಗಿರುವ ಶಾಲೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.
.ಮಂಡ್ಯ ಮಂಜುನಾಥ್