ನರಗುಂದ: ಒಂದನೆ ವರ್ಗದಿಂದಲೇ ಆಂಗ್ಲ ಮಾಧ್ಯಮ ಬೋಧನೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆಯ್ದ ಸರಕಾರಿ ಶಾಲೆಗಳಲ್ಲಿ ತರಗತಿ ಆರಂಭಿಸಿದೆ. ಈ ಮಧ್ಯೆ ಆಂಗ್ಲ ಮಾಧ್ಯಮ ಪ್ರವೇಶಾತಿಗೆ ಪಾಲಕರಿಂದ ಹೆಚ್ಚುವರಿ ಬೇಡಿಕೆ ಬರುತ್ತಿದೆ.
1ನೇ ವರ್ಗದಿಂದ ಆಂಗ್ಲ ಮಾಧ್ಯಮ ವಿಭಾಗಕ್ಕೆ ಒಳಪಟ್ಟ ತಾಲೂಕಿನ ನಾಲ್ಕು ಶಾಲೆಗಳಲ್ಲೊಂದಾದ ಪಟ್ಟಣದ ನಂ. 1 ಶಾಸಕರ ಮಾದರಿ ಕೇಂದ್ರ ಶಾಲೆಯಲ್ಲಿ ಪ್ರವೇಶಾತಿಗೆ ಹೆಚ್ಚುವರಿ ಬೇಡಿಕೆ ಬಂದಿದೆ. ಈ ಶಾಲೆಯಲ್ಲಿ ನಿಗದಿತ 30 ಮಕ್ಕಳ ಪ್ರವೇಶಾತಿ ಮೀರಿ ಇನ್ನೂ 5 ಅರ್ಜಿ ಬಂದಿದೆ.
ಕನ್ನಡ ಮಾಧ್ಯಮಕ್ಕೆ 4 ಮಕ್ಕಳು ಪ್ರವೇಶಾತಿ ಪಡೆದಿದ್ದು, ಆಂಗ್ಲ ಮಾಧ್ಯಮದಲ್ಲಿ 18 ಬಾಲಕಿಯರು, 12 ಬಾಲಕರು ಪ್ರವೇಶ ಪಡೆದಿದ್ದಾರೆ.
ಮೇಲಧಿಕಾರಿ ಗಮನಕ್ಕೆ: ನಿಗದಿತ 30 ಮಕ್ಕಳ ಪ್ರವೇಶಾತಿ ಮುಗಿದು ಹೆಚ್ಚುವರಿ 5 ಅರ್ಜಿ ಬಂದಿವೆ. ಬಿಇಒ ಅವರ ಗಮನಕ್ಕೂ ತಂದಿದ್ದೇವೆ. ಜಿಲ್ಲೆಯ ಆಂಗ್ಲ ಮಾಧ್ಯಮ ಶಾಲೆಗಳ ಉಸ್ತುವಾರಿ ಹೊತ್ತಿರುವ ಡಯಟ್‌ನ ಶಂಕರ ಹೂಗಾರ ಅವರ ಗಮನಕ್ಕೂ ತರಲಾಗಿದೆ. ಹೆಚ್ಚುವರಿ ಅರ್ಜಿ ಕಾಯ್ದಿಟ್ಟುಕೊಂಡಿದ್ದೇವೆ. ಮೇಲಾಧಿಕಾರಿಗಳ ನಿರ್ದೇಶನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯ ಶಿಕ್ಷಕ ಎಸ್.ಐ. ಅಂಕಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಎಲ್ಕೆಜಿಗೂ ಬೇಡಿಕೆ: ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಕ್ಕೂ ಪಾಲಕರಿಂದ ಬೇಡಿಕೆ ಬಂದಿದೆ. ಬಿಇಒ ಗಮನಕ್ಕೆ ತರಲಾಗಿದೆ ಎಂದು ಎಸ್.ಐ. ಅಂಕಲಿ ತಿಳಿಸಿದ್ದಾರೆ.
ನಾಲ್ಕು ಶಾಲೆಗಳು: ತಾಲೂಕಿನಲ್ಲಿ ನಂ. 1 ಶಾಸಕರ ಮಾದರಿ ಕೇಂದ್ರ ಶಾಲೆ, ಚಿಕ್ಕನರಗುಂದ ಸರಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ, ಹುಣಸೀಕಟ್ಟಿ ಸರಕಾರಿ ಪ್ರಾಥಮಿಕ ಶಾಲೆ, ಬನಹಟ್ಟಿ ಕೆಪಿಎಸ್ ಶಾಲೆ ಸೇರಿ 4 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭಿಸಲಾಗಿದೆ. ಚಿಕ್ಕನರಗುಂದ, ಬನಹಟ್ಟಿ ಕೆಪಿಎಸ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಮಂಜೂರಾಗಿದೆ.