Advertisement
ಇದುವರೆಗೂ ಕನ್ನಡ ಚಲನಚಿತ್ರಗಳಲ್ಲಿ ನಟಿಸುವ ಅನ್ಯಭಾಷೆಯ ನಟ, ನಟಿಯರ ಹಾಗೂ ಕನ್ನಡದ ಕೆಲವು ನಟ, ನಟಿಯರ ನಟನೆಗೆ ಧ್ವನಿಯಾಗುವ ಕೆಲವೇ ಕೆಲವು ಕಂಠದಾನ ಕಲಾವಿದರಿಗೆ ಈಗ ಅನ್ಯ ಭಾಷೆಯ ಚಿತ್ರಗಳು ಕನ್ನಡದ ಅವತರಣಿಕೆಯಲ್ಲಿ ಬರಲು ಆರಂಭಿಸಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕಂಠದಾನ ಕಲಾವಿದರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವಷ್ಟು ಬೇಡಿಕೆ ಸೃಷ್ಠಿಯಾಗಿದೆ.
Related Articles
Advertisement
ಕಳೆದ ಎರಡು ವರ್ಷದಲ್ಲಿ ತಮಿಳು, ತೆಲಗು, ಹಿಂದಿ, ಮಲಯಾಳಿ ಭಾಷೆಗಳಿಂದ ಹನ್ನೆರಡು ಚಿತ್ರಗಳು ಕನ್ನಡಕ್ಕೆ ಡಬ್ ಆಗಿವೆ. ಮೊದಲು 2016ರಲ್ಲಿ ಹಿಂದಿಯ “ಮೈ ಹಜ್‌ಬಂಡ್ಸ್ ವೈಫ್’ ಚಿತ್ರವನ್ನು “ನಾನು ನನ್ನ ಪ್ರೀತಿ’ ಹೆಸರಿನಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸಲಾಯಿತು. ನಂತರ ತಮಿಳು ಸ್ಟಾರ್ ನಟ ಅಜಿತ್ ಅವರ ಸತ್ಯದೇವ್ ಐಪಿಎಸ್ ಹಾಗೂ ಧೀರಾ, ಕಮಾಂಡೊ ಎಂಬ ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆದವು.
ಮಲಯಾಳಂನ ಕಿರಿಕ್ ಲವ್ ಸ್ಟೋರಿ, ತಮಿಳಿನ ವಿಶ್ವಾಸಂನ ಕನ್ನಡ ಅವತರಣಿಕೆ ಜಗಮಲ್ಲ. ಕಾಂಚನಾ 3, ತೆಲಗಿನ ಡೀಯರ್ ಕಾಮ್ರೆಡ್, ರಂಗಸ್ಥಳ ನಂತರ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಗೊಂಡಿವೆ. ಈಗ ಹಿಂದಿಯ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ಅಭಿನಯದ “ದಬಾಂಗ್ 3′ ಚಿತ್ರವೂ ಕನ್ನಡ ದಲ್ಲಿ ಡಬ್ ಆಗುತ್ತಿದೆ.
ಆರಂಭದಲ್ಲಿ ಅನ್ಯ ಭಾಷೆಯ ಡಬ್ಬಿಂಗ್ ಚಿತ್ರಗಳನ್ನು ಜನರು ಆತಂಕದಿಂದಲೇ ನೋಡಿದ್ದರು. ಚಿರಂಜಿವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸುಮಾರು 200 ಚಿತ್ರಮಂದಿರಗಳಲ್ಲಿ ಕನ್ನಡ ಅವತರಣಿಕೆಯಲ್ಲಿ ಬಿಡುಗಡೆಗೊಂಡಿದೆ. ಅಲ್ಲದೆ, ತೆಲಗು ಅವತರಣಿಕೆ ಪ್ರದರ್ಶನ ಮಾಡುತ್ತಿದ್ದ ಚಿತ್ರ ಮಂದಿರಗಳು ಈಗ ಕನ್ನಡ ಅವತರಣಿಕೆಯಲ್ಲಿ ಪ್ರದರ್ಶನ ಮಾಡುತ್ತಿದ್ದು, ಚಿತ್ರಮಂದಿರಗಳೂ ಉಸಿರಾಡುವಂತೆ ಮಾಡಿದೆ.
“ಸಿ’ ಸೆಂಟರ್ ಚಿತ್ರಮಂದಿರಗಳಿಗೆ ಜೀವದಾನ: ಅನ್ಯ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗುತ್ತಿರು ವುದರಿಂದ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ರುವ “ಸಿ’ ಸೆಂಟರ್‌ಗಳಲ್ಲಿನ ಚಿತ್ರಮಂದಿರಗಳಿಗೆ ಹೆಚ್ಚಿನ ಚಿತ್ರಗಳು ದೊರೆಯುವಂತಾಗಿದೆ. ಅನ್ಯ ಭಾಷೆಯ ಚಿತ್ರಗಳೂ ಸೇರಿದಂತೆ ಪ್ರತಿ ವಾರ 5 ರಿಂದ 8 ಚಿತ್ರಗಳು ರಾಜ್ಯದಲ್ಲಿ ಬಿಡುಗಡೆಗೊಳ್ಳುತ್ತವೆ. ಎಲ್ಲವೂ ಏಕಕಾಲಕ್ಕೆ “ಸಿ’ ಕೇಂದ್ರಗಳಲ್ಲಿ ಬಿಡುಗಡೆಯಾಗುವುದಿಲ್ಲ. ಅಲ್ಲದೇ ಬಿಡುಗಡೆಯಾದ ಎಲ್ಲ ಚಿತ್ರಗಳೂ ಒಂದು ವಾರ ಪೂರ್ತಿ ಓಡುವುದೂ ಕಷ್ಟವಾಗುತ್ತದೆ.
ಈಗ ಅನ್ಯ ಭಾಷೆಯ ಸ್ಟಾರ್ ನಟರ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದರಿಂದ, ಅನ್ಯ ಭಾಷೆ ಬಾರದ ಜನರು ಕನ್ನಡದ ಅವತರಣಿಕೆಯಲ್ಲಿ ನೋಡುತ್ತಿರುವುದರಿಂದ ಕನ್ನಡದ ಮನಸ್ಸುಗಳಿಗೆ ಕನ್ನಡದ ಧ್ವನಿ ಕೇಳುವಂತಾಗಿದೆ. ಚಿತ್ರಮಂದಿರಗಳಿಗಿಂತ ಒಟಿಟಿ ಪ್ಲಾಟ್ ಫಾರಂ ಅಮೇಜಾನ್ ಪ್ರೈಮ್, ಝಿ5, ನಿಕ್ ಫಿಕ್ಸ್, ಯು ಟ್ಯೂಬ್‌ಗಳಲ್ಲಿ ಅನ್ಯ ಭಾಷೆಯ ಚಿತ್ರ ಗಳನ್ನು ಡಬ್ ಮಾಡುವ ಉದ್ಯಮ ವೇಗವಾಗಿ ಬೆಳೆಯುತ್ತಿದೆ.
ಟಿವಿಗಳಲ್ಲಿ ಹೆಚ್ಚು ಬೇಡಿಕೆ: ಇಂಗ್ಲಿಷ್, ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಕಾರ್ಯಕ್ರಮಗಳು ಕನ್ನಡದಲ್ಲಿ ಪ್ರಸಾರವಾ ಗುತ್ತಿ ರುವುದು ಕಂಠದಾನ ಕಲಾವಿದರು ಹಾಗೂ ಭಾಷಾಂತರ ಮಾಡುವವರಿಗೆ ನಿರಂತರ ಉದ್ಯೋಗ ಸೃಷ್ಠಿಸಲು ಕಾರಣವಾಗಿದೆ. ಡಿಸ್ಕವರಿ ಕಿಡ್ಸ್, ಕಾಟೂನ್ ನೆಟವರ್ಕ್, ನಿಕ್ ಫಿಕ್ಸ್‌ಗಳಲ್ಲಿ ಪ್ರಸಾರವಾಗುವ ಮಕ್ಕಳ ಕಾರ್ಯಕ್ರಮಗಳು ಕನ್ನಡದ ಅವತರಣಿಕೆಯಲ್ಲಿ ಪ್ರಸಾರವಾಗುತ್ತಿರುವುದು, ಕನ್ನಡದ ಧ್ವನಿಗಳಿಗೆ ಉದ್ಯೋಗ ಸೃಷ್ಠಿಸುವುದಷ್ಟೇ ಅಲ್ಲದೇ, ಮನೆಯಲ್ಲಿ ಮಕ್ಕಳು ಕನ್ನಡದಲ್ಲಿಯೇ ಕಾರ್ಯಕ್ರಮ ನೋಡುವುದರಿಂದ ಕನ್ನಡದ ಬಗ್ಗೆ ಅಭಿಮಾನ ಬೆಳೆಯಲು ಕಾರಣ ವಾಗಬಹುದು. ಇದರಿಂದ ಮನೆಯಲ್ಲಿಯೂ ಕನ್ನಡದ ವಾತಾವರಣ ಜೀವಂತವಾಗಿರಲು ಕಾರಣವಾಗುತ್ತದೆ.
ಕನ್ನಡದಲ್ಲಿ ವರ್ಷಕ್ಕೆ 150 ರಿಂದ 200 ಚಿತ್ರಗಳು ಬಿಡುಗಡೆಯಾಗುತ್ತಿವೆ. ಅನ್ಯ ಭಾಷೆಗಳಲ್ಲಿ ಬಿಡುಗಡೆಯಾಗುವ ಎಲ್ಲ ಚಿತ್ರಗಳೂ ಕನ್ನಡಕ್ಕೆ ಡಬ್ ಆಗುವುದಿಲ್ಲ. ಅನ್ಯ ಭಾಷೆಯ ಸ್ಟಾರ್ ನಟರು ಹಾಗೂ ಹಿಟ್ ಚಿತ್ರಗಳನ್ನು ಮಾತ್ರ ನಿರ್ಮಾಪಕರು ಡಬ್ ಮಾಡುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಬಂಡ ವಾಳ ಹಾಕುವ ನಿರ್ಮಾಪಕರಿಗೂ ಆರ್ಥಿಕವಾಗಿ ನಷ್ಟವಾಗುವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ವಿರೋಧದ ವಾದ: ಅನ್ಯ ಭಾಷೆಯ ಚಿತ್ರಗಳಿಗೆ ನಮ್ಮ ಸಂಸ್ಕೃತಿ ಮತ್ತು ಪರಿಸರದ ಸಂಬಂಧ ಇಲ್ಲದಿರುವುದರಿಂದ ಅನ್ಯ ಭಾಷೆಯ ಚಿತ್ರಗಳಲ್ಲಿ ನಮ್ಮತನ ಇರುವುದಿಲ್ಲ. ಇದರಿಂದ ಕನ್ನಡದ ಸಂಸ್ಕೃತಿ ಮತ್ತು ಸೃಜನಶೀಲ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎನ್ನುವುದು ಡಬ್ಬಿಂಗ್ ವಿರೋಧಿಸುವವರ ವಾದ.
ಕನ್ನಡಕ್ಕೆ ಡಬ್ಬಿಂಗ್ ಬಂದಿರುವುದರಿಂದ ಕನ್ನಡದಲ್ಲಿ ಹೊಸ ಮಾರುಕಟ್ಟೆ ಹುಟ್ಟು ಹಾಕಿರುವುದಲ್ಲದೇ ಕನ್ನಡಿಗರಿಗೆ ಅಪಾರವಾದ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಕನ್ನಡದ ಪ್ರತಿಭೆಗಳು, ಬರಹಗಾರರು, ಉದ್ದಿಮೆದಾರರಿಗೆ ಬೇಡಿಕೆ ಹೆಚ್ಚುವುದರ ಜೊತೆಗೆ ಕರ್ನಾಟಕದ ಚಿತ್ರಮಂದಿರಗಳನ್ನು ಉಳಿಸಿಕೊಂಡು, ಬೆಳೆಸುವುದಕ್ಕೂ ನಾಂದಿ ಹಾಡಿದೆ. -ರತೀಶ್ ರತ್ನಾಕರ, ಸಹ ಸಂಸ್ಥಾಪಕರು, ಹರಿವು ಕ್ರಿಯೇಷನ್ಸ್ * ಶಂಕರ ಪಾಗೋಜಿ