Advertisement

ಕಳೆನಾಶಕದಿಂದ ಕಾದಿದೆ ಕಂಟಕ

05:03 PM Jul 21, 2018 | |

ಧಾರವಾಡ: ದಶಕಗಳೇ ಕಳೆದರೂ ತನ್ನ ಕ್ರೂರತೆಗೆ ಸಾಕ್ಷಿಯಾಗಿ ನಿಂತ ಎಂಡೋಸಲ್ಪಾನ್‌ ದುರಂತ ಮಾಸುವ ಮುನ್ನವೇ ಈಗ ಕಳೆನಾಶಕ ಬಳಕೆಯಿಂದ ಮತ್ತೂಂದು ಭಯಾನಕ ದುರಂತ ಕಾಲ ಬುಡದಲ್ಲಿ ಬಂದು ನಿಂತಿದೆ!

Advertisement

ಕ್ಯಾನ್ಸರ್‌, ಅಂಕವಿಲತೆ, ಬಂಜೆತನ, ಬುದ್ಧಿಮಾಂದ್ಯ ಮಕ್ಕಳ ಜನನಕ್ಕೆ ಕಾರಣವಾಗಿರುವ ಎಂಡೋಸಲ್ಪಾನ್‌ ಗಿಂತ ನೂರು ಪಟ್ಟು ಭಯಂಕರ ರಾಸಾಯನಿಕ ಒಳಗೊಂಡ ಕಳೆ ನಾಶಕಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಪರೀತ ಪ್ರಮಾಣದಲ್ಲಿ ಭೂಮಿಗೆ ಬೀಳುತ್ತಿವೆ. ಕಳೆನಾಶಕ ಬಳಕೆಯಿಂದ ಕಳೆದ ನಾಲ್ಕೇ ವರ್ಷದಲ್ಲಿ ರಾಜ್ಯದ ಒಟ್ಟು 12 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯ ಮಣ್ಣಿನಲ್ಲಿನ ಅಣುಜೀವಿಗಳ ಮಾರಣಹೋಮವಾಗಿದೆ. ಜೂನ್‌ ಮೊದಲ ವಾರದಲ್ಲಿ ಬಿತ್ತನೆಯಾದ ರಾಜ್ಯದ ಎಲ್ಲ ಜಿಲ್ಲೆಯ ಎಲ್ಲಾ ಬೆಳೆಗಳಿಗೂ ರೈತರು ವಿಪರೀತ ಕಳೆನಾಶಕದ ಬಳಕೆ ಮಾಡಲಾಗಿದೆ. 2018ರಲ್ಲಿ 17.3 ಲಕ್ಷ ಲೀಟರ್‌ ಅಥವಾ ಕೆಜಿಯಷ್ಟು ಕಳೆನಾಶಕವು ಕುಡಿಯುವ ನೀರು, ತಿನ್ನುವ ಅನ್ನ ಮತ್ತು ಜಾನುವಾರಗಳ ಹೊಟ್ಟೆ ಸೇರಿಕೊಳ್ಳಲಿದೆ ಎಂದು ಸಾವಯವ ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಹುಲ್ಲಿನ ಮೂಲಕ ಹಸು, ಎಮ್ಮೆ ಹೊಟ್ಟೆ ಸೇರಿ ಹಾಲಿನ ರೂಪದಲ್ಲಿ ಮನುಷ್ಯನ ಶರೀರ ಸೇರುತ್ತಿರುವ ಕಳೆನಾಶಕಗಳಲ್ಲಿನ ರಾಸಾಯನಿಕದ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದರೆ ರಾಜ್ಯದಲ್ಲಿ ಅಂಗವಿಕಲ ಮಕ್ಕಳು, ಕ್ಯಾನ್ಸರ್‌ ಪೀಡಿತ ಮಕ್ಕಳು ಮತ್ತು ಬುದ್ಧಿಮಾಂದ್ಯ ಮಕ್ಕಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಿಸಿಕೊಳ್ಳುವುದು ಖಚಿತ ಎನ್ನುತ್ತಿದ್ದಾರೆ ಕಳೆನಾಶಕದ ಕುರಿತು ಸಂಶೋಧನೆ ಮಾಡಿದ ವೈದ್ಯರು.

ಇದೀಗ ಕಳೆನಾಶಕವು ರಾಸಾಯನಿಕ ಗೊಬ್ಬರ, ಕೀಟ ನಾಶಕಗಳು 25 ವರ್ಷದಲ್ಲಿ ಭೂತಾಯಿಗೆ ಮಾಡಿದಷ್ಟು ಹಾನಿಯನ್ನು ಬರೀ ಐದು ವರ್ಷಗಳಲ್ಲಿ ಮಾಡಿಯಾಗಿದೆ. ಇದನ್ನು ಸ್ವತಃ ಕೃಷಿ ವಿಜ್ಞಾನಿಗಳೇ ಸಾಬೀತುಪಡಿಸುವ ಪ್ರಯತ್ನದಲ್ಲಿದ್ದು, ಧಾರವಾಡದ ಕೆಲವು ಪ್ರಗತಿಪರ ಕೃಷಿಕರು ಕಳೆನಾಶಕದ ವಿರುದ್ಧ ರೈತರಲ್ಲಿ ಜಾಗೃತಿ ಶುರು ಮಾಡಿದ್ದಾರೆ.

ಮಾರಕ ಕಳೆನಾಶಕ?
ಹೊಲದಲ್ಲಿನ ಬೆಳೆಗಳಲ್ಲಿ ಹುಟ್ಟಿ ಬೆಳೆಯುವ ಎಲ್ಲಾ ಬಗೆಯ ಹುಲ್ಲು, ಕಿರು ಕಸಗಳನ್ನು ನಾಶ ಮಾಡುವುದಕ್ಕೆ ಕಳೆನಾಶಕ ಬಳಸಲಾಗುತ್ತಿದೆ. ಇದರಲ್ಲಿ ಬಳಕೆಯಾಗುವ ಟಾಕ್‌ಸೈಡ್‌ ಅಣುಜೀವಿಗಳಿಂದ ಹಿಡಿದು ಇಡೀ ಜೀವ ಸಂಕುಲಕ್ಕೆ ಅಪಾಯಕಾರಿ. ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿಯೂ ಕಳೆನಾಶಕ ಬಳಕೆ ಆರಂಭಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಳೆನಾಶಕದ ಬಳಕೆ ಪ್ರಮಾಣ ಶೇ.690ರಷ್ಟು ಹೆಚ್ಚಾಗಿದೆ. ಭತ್ತ, ಕಬ್ಬು, ಹೆಸರು, ಗೋಧಿ, ಜೋಳ, ರಾಗಿ, ಶೇಂಗಾ, ತೊಗರಿ, ಉದ್ದು, ಗೋವಿನಜೋಳ, ಮೆಣಸಿನಕಾಯಿ, ಸೋಯಾ ಅವರೆ ಸೇರಿದಂತೆ ತರಕಾರಿ ಬೆಳೆಗಳಲ್ಲಿನ ಕಸ ನಿವಾರಣೆಗೆ ಈ ಕಳೆನಾಶಕ ಬಳಸಲಾಗುತ್ತಿದೆ. ಇದರಲ್ಲಿನ ಬೆಂಕಿ ಅಂಶ ಕಳೆಗಳೆಲ್ಲವನ್ನು ಸಂಪೂರ್ಣ ನಾಶ ಮಾಡುತ್ತದೆ. ಅಲ್ಲದೇ, ಆ ವಿಷಕಾರಿ ಅಂಶ ನೇರವಾಗಿ ಮಣ್ಣು, ನೀರು ಮತ್ತು ಆಹಾರದ ಬೆಳೆಯಲ್ಲಿಯೂ ಸೇರ್ಪಡೆಯಾಗುತ್ತಿದೆ.

Advertisement

ಆಗುವ ಹಾನಿ ಏನು?
ಕಳೆನಾಶಕಗಳಲ್ಲಿನ ರಾಸಾಯನಿಕಗಳು ನೀರು, ವಾಯು, ಮಣ್ಣು ಮತ್ತು ಆಹಾರದಲ್ಲಿ ಸೇರ್ಪಡೆಯಾಗುವುದರಿಂದ ಮನುಷ್ಯರ ಶರೀರ ಸೇರಿ ಕ್ಯಾನ್ಸರ್‌ ಸೇರಿ ಹಲವು ಭಯಾನಕ ರೋಗಗಳು ಬರಬಹುದು. ಸಣ್ಣ ಮಕ್ಕಳಲ್ಲಿ ಇದು ಮೈತುರಿಕೆ, ಬುದ್ಧಿಮಾಂದ್ಯತೆ, ಚರ್ಮದ ಕಾಯಿಲೆಯನ್ನುಂಟು ಮಾಡಿದರೆ, ದೊಡ್ಡವರಲ್ಲಿ ಬಂಜೆತನಕ್ಕೆ ಕಾರಣವಾಗಲಿದೆ ಎನ್ನುತ್ತಾರೆ ವೈದ್ಯರು. ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಈ ಮೂರು ಪ್ರದೇಶದಲ್ಲೂ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ವಿಭಿನ್ನ ರೀತಿಯ ಹುಲ್ಲಿನ ಜಾತಿಯ ಸಸ್ಯ ಸಂಕುಲವನ್ನು ಪಶುಪಕ್ಷಿಗಳು ಅವಲಂಬಿಸಿದ್ದು, ಕಳೆನಾಶಕ ನೇರವಾಗಿ ಅವುಗಳಿಗೂ ತೊಂದರೆ ಮಾಡಲಿವೆ. ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಯಲ್ಲಿ ಹುಟ್ಟಿಕೊಳ್ಳುವ ಮಾನಿ ಹುಲ್ಲಿನ ಬೀಜವನ್ನು ಬೆಳವ, ಪಾರಿವಾಳ, ಗುಬ್ಬಿಗಳು ತಿನ್ನುತ್ತವೆ. ಇದೀಗ ಈ ಜಿಲ್ಲೆಯಲ್ಲಿ ಅತೀ ಹೆಚ್ಚು ಕಳೆನಾಶಕ ಬಳಕೆಯಾಗುತ್ತಿರುವುದು ಈ ಹುಲ್ಲಿನ ನಾಶಕ್ಕಾಗಿಯೇ.

ಕೂಲಿಯಾಳಿನ ಕೊರತೆ
ಬೆಲೇ ಜತೆ ಬೆಳೆದ ಕಳೆ ತೆಗೆಸಲು ಕೂಲಿಯಾಳುಗಳ ಕೊರತೆಯಿಂದ ರೈತರು ಕ್ರಿಮಿನಾಶಕದ ಮೊರೆ ಹೋಗಿದ್ದಾರೆ. ಒಬ್ಬ ಕೂಲಿಯಾಳಿಗೆ ಪ್ರತಿದಿನ 200ರಿಂದ 250 ರೂ. ಕೊಡಬೇಕು. ಒಂದು ಎಕರೆ ಕಬ್ಬು,ಅಥವಾ ಭತ್ತ ಸೇರಿ ಇತರ ಬೆಳೆಯಲ್ಲಿನ ಕಳೆ ಕೀಳಲು ಸದ್ಯಕ್ಕೆ ರೈತರಿಗೆ ತಗಲುತ್ತಿರುವ ವೆಚ್ಚ 2400-2800 ರೂ. ಆದರೆ ಅದೇ ಒಂದು ಎಕರೆ ಕಳೆನಾಶಕದ ಬಳಕೆಗೆ 1200 ರೂ. ಮಾತ್ರ ಖರ್ಚಾಗುತ್ತಿದೆ. ಹೀಗಾಗಿ ರೈತರಿಗೂ ಕಳೆನಾಶಕದ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. 

ಕಳೆ ನಿಯಂತ್ರಣ ಬಳಕೆ ವಿಪರೀತ ಹೆಚ್ಚುತ್ತಿರುವುದನ್ನು ನೋಡಿದರೆ ಹತ್ತು ವರ್ಷದಲ್ಲಿ ಇದರ ದುಷ್ಪರಿಣಾಮ ಗೋಚರಿಸುತ್ತದೆ. 2030ಕ್ಕೆ ರಾಜ್ಯದಲ್ಲಿ ವಿಕಲಚೇತ ಮಕ್ಕಳ, ಕ್ಯಾನ್ಸರ್‌ ರೋಗಿಗಳ ಮತ್ತು ಬಂಜೆತನ ಇರುವವರ ಸಂಖ್ಯೆ ಶೇ.16ರಷ್ಟು ಹೆಚ್ಚುತ್ತದೆ.
 ಡಾ.ಸಂಜೀವ ಕುಲಕರ್ಣಿ,
ಹಿರಿಯ ವೈದ್ಯರು, ಕೃಷಿಕರು

ಕಳೆನಾಶಕಗಳಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗದು. ಅತಿಯಾದ ಬಳಕೆಯಿಂದ ತೊಂದರೆಯಾದ ಬಗ್ಗೆ ಹೊರದೇಶಗಳಲ್ಲಿ ಅಧ್ಯಯನ ನಡೆದಿವೆ. ಸದ್ಯಕ್ಕೆ ರಾಜ್ಯದ ರೈತರಿಗೆ ಕಳೆನಾಶಕ ಬಳಕೆ ಅನಿವಾರ್ಯವಾಗುತ್ತಿದೆ.
ರಮೇಶಬಾಬು,
ಕೃಷಿ ವಿವಿ ಕಳೆ ನಿಯಂತ್ರಣ ವಿಭಾಗ, ಧಾರವಾಡ

ಕಳೆನಾಶಕಗಳ ಬಳಕೆಯಿಂದ ರೈತರಿಗೆ ಹಾನಿ ತಪ್ಪಿದ್ದಲ್ಲ. ಅಲ್ಲದೆ ಭೂಮಿ ಆಶ್ರಯಿಸಿದ ಕಸೇರುಕಗಳು, ಅಣುಜೀವಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಿವೆ. ಜಾನುವಾರುಗಳಿಗೆ ಹೃದ್ರೋಗ, ಕರುಳುಬೇನೆ ಆರಂಭಗೊಂಡಿದೆ. ಕಳೆನಾಶಕದ ಕೆಟ್ಟ ಪರಿಣಾಮಗಳ ಬಗ್ಗೆ ರೈತರು ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ಪೀಳಿಗೆ ನಷ್ಟ ಅನುಭವಿಸುವುದು ಖಚಿತ.
ಶಂಕರ ಲಂಗಟಿ, ಪ್ರಗತಿಪರ ರೈತ, ಬೆಳಗಾವಿ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next