ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದ್ದಂತೆ ಆ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್, ಹಿರಿಯ ನಾಯಕರ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಿದ್ದ ಎಚ್.ಕೆ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಪಕ್ಷ ಸಂಘಟನೆ ಮಾಡಲು ಸಿದ್ಧನಿದ್ದು ನಿಮ್ಮ ಸಹಕಾರ-ಬೆಂಬಲವೂ ಇರಲಿ ಎಂದು ಮನವಿ ಮಾಡಿದರು ಎಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆ.ಎಚ್.ಮುನಿಯಪ್ಪ ಅವರ ಜತೆಯೂ ಎಚ್.ಕೆ.ಪಾಟೀಲ್ ಮಾತುಕತೆ ನಡೆಸಿದ್ದಾರೆ.
ದಕ್ಷಿಣ ಭಾಗಕ್ಕೆ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದರೆ ನನಗೆ ಬೆಂಬಲ ನೀಡಿ, ಉತ್ತರ ಭಾಗಕ್ಕೆ ನೀಡಲು ತೀರ್ಮಾನಿಸಿದರೆ ನನ್ನ ಬೆಂಬಲ ನಿಮಗೆ ಇರುತ್ತದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಲೋಕಸಭೆ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಎಚ್.ಕೆ.ಪಾಟೀಲ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಹುದೆಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಸಮೀಪ ಇರುವುದರಿಂದ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರದ ಜತೆ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಹಿರಿಯರನ್ನೇ ನೇಮಿಸುವುದು ಸೂಕ್ತವೆಂಬ ಅಭಿಪ್ರಾಯವನ್ನು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮೂಲ ಕಾಂಗ್ರೆಸ್, ಅದರಲ್ಲೂ ಹಿರಿಯರಿಗೆ ನೀಡಬೇಕು ಎಂಬುದು ಅವರ ಅನಿಸಿಕೆ ಎಂದು ಹೇಳಲಾಗಿದೆ.
ಮತ್ತೂಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ಖುದ್ದು ರಾಹುಲ್ ಗಾಂಧಿಯವರೂ ಸಹಮತ ವ್ಯಕ್ತಪಡಿಸಿದ್ದರು. ಯುವಕರಿಗೆ ಅವಕಾಶ ಕೊಡಬೇಕೆಂದು ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ವಿಧಾನಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ಹೈಕಮಾಂಡ್‌ಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಆದರೆ, ಸಚಿವ ಸ್ಥಾನ ಸಿಗದೆ ತೀರಾ ಅಸಮಾಧಾನಗೊಂಡಿದ್ದ ಎಚ್.ಕೆ.ಪಾಟೀಲ್ ಅವರನ್ನು ದೆಹಲಿಗೆ ಕರೆಸಿಕೊಂಡ ರಾಹುಲ್‌ಗಾಂಧಿ, ನೀವು ಒಪ್ಪುವುದಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಬಹುದು. ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ದೆಹಲಿಗೆ ಕರೆಸಿಕೊಂಡು ಮಾತನಾಡುವ ಸಾಧ್ಯತೆಗಳಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಬಿ.ಕೆ.ಹರಿಪ್ರಸಾದ್ ಸಹ ಕಣ್ಣಿಟ್ಟಿದ್ದಾರೆ. ಈ ಪೈಕಿ ಎಂ.ಬಿ.ಪಾಟೀಲ್ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವ ಸಾಧ್ಯತೆಯಿದೆ. ಎಸ್.ಆರ್.ಪಾಟೀಲ್ ಅವರಿಗೆ ಯಾವ ರೀತಿ ಸಮಾಧಾನ ಮಾಡಲಾಗುವುದು ಎಂಬುದನ್ನು ಕಾದು ನೋಡಬೇಕಾಗಿದೆ.
ಕೆಪಿಸಿಸಿ ಅಧ್ಯಕ್ಷಗಿರಿಗೆ ಪೈಪೋಟಿ ಹೆಚ್ಚಾದರೆ ಲೋಕಸಭೆ ಚುನಾವಣೆವರೆಗೂ ಡಾ.ಜಿ.ಪರಮೇಶ್ವರ್ ಅವರನ್ನೇ ಮುಂದುವರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಪರಮೇಶ್ವರ್, ಗೃಹ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿರುವುದರಿಂದ ಕಾರ್ಯದ ಒತ್ತಡ ಹೆಚ್ಚಾಗಿದ್ದು, ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಸಕ್ರಿಯ ಹಾಗೂ ಕ್ರಿಯಾಶೀಲ ಅಧ್ಯಕ್ಷರ ನೇಮಕ ತಕ್ಷಣ ಆಗಬೇಕೆಂದು ಈಗಾಗಲೇ ಬಹುತೇಕ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.