Advertisement

ಹೆಚ್ಚಳಗೊಂಡ ಬ್ರೋಕರ್ ವ್ಯವಸ್ಥೆ: ವರ್ಗಾವಣೆ ಸ್ಥಗಿತಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ

01:38 PM Jan 06, 2023 | Team Udayavani |

ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ಬ್ರೋಕರ್ ( ಮಧ್ಯವರ್ತಿ) ಸರ್ಕಾರವಾಗಿದ್ದು, ಮಧ್ಯವರ್ತಿಗಳ ಹಾವಳಿ ಹೆಚ್ಚಳವಾಗಿದ್ದರಿಂದ ಸರ್ಕಾರ ಈ ಕೂಡಲೇ ಎಲ್ಲ ಹಂತದ ವರ್ಗಾವಣೆ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

Advertisement

ಒಬ್ಬ ರೌಡಿಗೆ ಹಿರಿಯ ಪೊಲೀಸ್ ಅಧಿಕಾರಿ ಫೋನ್ ಕರೆ ಮಾಡಿ ವರ್ಗಾವಣೆಗೆ ಮೊರೆ ಹೋಗುತ್ತಾರೆಂದರೆ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ನಿರೂಪಿಸುತ್ತದೆ ಎಂದು ಪಕ್ಷದ ಕಚೇರಿಯಲ್ಲಿಂದು ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಹುದ್ದೆಗಳ ಮಾರಾಟ ಜತೆಗೆ ಈಗ ವರ್ಗಾವಣೆ ದಂಧೆ ಸೇರಿಕೊಂಡಿದೆ. ಇದಕ್ಕೆ ರೌಡಿ ಸ್ಯಾಂಟ್ರೋ ರವಿ ಜತೆ ಮಾತನಾಡಿರುವ ವಿಡಿಯೋ ವೈರಲ್ ಆಗಿರುವುದೇ ಸಾಕ್ಷಿ. ಕರ್ನಾಟಕ ತನ್ನ ಪ್ರಗತಿಪರತೆಗೆ ಹೆಸರಾಗಿತ್ತು ಆದರೆ ಬ್ರೋಕರ್ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದಿಂದಾಗಿ ಈಗ ಹೆಸರು ಪಡೆಯುತ್ತಿದೆ. ವಿಧಾನಸೌಧ ವನ್ನು ಬಿಗ್ಗೆಸ್ಟ್ ಮಾಲ್ ಆಗಿ ಪರಿವರ್ತನೆ ಮಾಡಲಾಗಿದೆ. ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ಸೇರಿದಂತೆ ಪ್ರಮುಖ ವ್ಯವಹಾರಗಳು‌ ನಡೆಯುತ್ತಿವೆ ಇದನ್ನು ನಡೆಸಲು ಬೆಸ್ಟ್ ಸೇಲ್ಸ್ ಮೆನ್ ಗಳು ಕೂಡಾ ಇದ್ದಾರೆ ಎಂದು ಆರೋಪಿಸಿದರು.

ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೆಲ್ಸಮೆಲ್ ಆಗಿದ್ದಾರೆ. ಒಬ್ಬ ಎಂ ಎಲ್‌ಎ‌ ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ರೋಲ್ ಕಾಲ್ ಮಾಡಿದ್ದಾರೆ. ಇತ್ತೀಚಿಗೆ ಒಬ್ಬ ಜೆಇ ಹತ್ತು ಲಕ್ಷ ಹಣದ ಬ್ಯಾಗ್ ನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಅದೇಗೆ ಧೈರ್ಯ ಬಂತು ? ಹಣ ಯಾರಿಗೆ ಕೊಡಲು ತೆಗೆದುಕೊಂಡು‌ಹೋಗುತ್ತಿದ್ದ‌ರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಿಎಂ ಹೈಕಮಾಂಡ್ ಗೆ ಮಧ್ಯಮರ್ತಿ,‌ ಎಂಎಲ್ ಎ ಗಳು ಸಚಿವರಿಗೆ ಮಧ್ಯವರ್ತಿಗಳು. ಅಧಿಕಾರಿಗಳು ಎಂಎಲ್‌ಎ ಗಳಿಗೆ ಮಧ್ಯವರ್ತಿಗಳಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ರೌಡಿಗಳು ಕೂಡಾ ಮಧ್ಯವರ್ತಿಗಳಾಗಿದ್ದಾರೆ. ಇದನ್ನು ನೋಡಿದರೆ ಸಿಎಂ ಸರ್ಕಾರ ನಡೆಸುತ್ತಿದ್ದಾರೆ ಎನಿಸುತ್ತಿಲ್ಲ. ಸರ್ಕಾರದಲ್ಲೂ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎನ್ನುವವನು ಸಿಎಂ ಗೆ ಹತ್ತಿರದವನಾಗಿದ್ದಾನೆ. ಈತ ಆಡಿಯೋ ಒಂದರಲ್ಲಿ ತಾನು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ ಎಂದಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು.

Advertisement

ಯಾರು ಕಂಬಿ ಎಣಿಸಬೇಕಿತ್ತೋ ಅವರು ಕುಮಾರಕೃಪಾದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ‌‌. ಕೆಲ ಪ್ರಶ್ನೆಗಳಿಗೆ ಸಿಎಂ ಅಥವಾ ಹೋಂ ಮಿನಿಸ್ಟರ್ ಉತ್ತರ ಕೊಡಬೇಕು. ಮಾಜಿ ಸಿಎಂ ಒಬ್ಬರು ಹೇಳುತ್ತಾರೆ ರವಿ ಮೂಲಕ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದಿದ್ದಾರೆ. ಈ ಹಿಂದಿನ ಸತ್ಯಾಂಶ ಜನರಿಗೆ ಬಿಜೆಪಿ ತಿಳಿಸಲಿ ಎಂದು ಅವರು ಆಗ್ರಹಿಸಿದರು.

ವರ್ಗಾವಣೆ ದಂಧೆ ಬಗ್ಗೆ ತುರ್ತಾಗಿ ಮಾತನಾಡಬೇಕಿದ್ದ ಬಿಜೆಪಿ ಅಧ್ಯಕ್ಷ ಕಟೀಲ್ ಯಾಕೆ ಮಾತನಾಡುತ್ತಿಲ್ಲ. ಭ್ರಷ್ಟಚಾರ ಹಗರಣ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ರವಿಗೆ ಕುಮಾರ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು ? ಈ ಬಗ್ಗೆ ಸತ್ಯಾಂಶ ಹೊರಬರಲಿ. ಪೊಲೀಸ್ ಅಧಿಕಾರಿಗಳು ರವಿಗೆ ಫೋನ್ ಮಾಡಿ ವರ್ಗಾವಣೆಗೆ ಕೇಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಯಾಕೆ ಸುಮ್ಮನಿವೆ. ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರ ವಿರುದ್ದ ಮಾತ್ರವೇ? ಈ ಬಗ್ಗೆ ಸ್ವಯಂ ಪ್ರೇರಿತ ದೂರು ಯಾಕೆ ದಾಖಲಿಸಿಕೊಳ್ಳುತ್ತಿಲ್ಲ.? ಗೃಹ ಸಚಿವರಿಗೆ ಯಾರು ತಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ರಾಜ್ಯವನ್ನೇ ತಲ್ಲಣಗೊಳಿಸಿದ ಪಿಎಸ್ಐ ಹಗರಣದ ಕಿಂಗ್ ಪಿನ್ ಗಳಿಗೆ ಬೇಲ್ ಸಿಕ್ಕಿರುವುದರ ಬಗ್ಗೆ ಕಿಡಿ ಕಾರಿದ ಖರ್ಗೆ ಎಂತ ಸರ್ಕಾರಿ ವಕೀಲರನ್ನು ನೇಮಿಸಿದ್ದೀರಿ? ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದವರಿಗೆ ಬೇಲ್ ಸಿಗುತ್ತಿದೆ ಎಂದರೆ ಹೇಗೆ? ಯುವಕರಿಗೆ ಏನು ಸಂದೇಶ ನೀಡಲಾಗುತ್ತದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ರಾಜ್ಯದಲ್ಲಿ ತಿರುಗುತ್ತಿದ್ದಾರೆ ಈ ಬಗ್ಗೆಯೂ ಗಮನ ಹರಿಸಲಿ ಎಂದರು.

ಹಲವಾರು ದಿನಗಳಿಂದ ನಡೆಯದಿರುವ ಕೆಡಿಪಿ ಮುಂದೂಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾಡಳಿತಕ್ಕೆ ಕೆಡಿಪಿ ಹೇಗೆ ನಡೆಸಬೇಕು ಎನ್ನುವುದು ತಿಳಿದಿದೆಯೋ ಹೇಗೆ ಗೊತ್ತಿಲ್ಲ. ಆರು ದಿನಗಳ ಹಿಂದೆ ಕೆಡಿಪಿ ನಡೆಸುವುದಾಗಿ ಹೇಳಿ‌ ನೋಟಿಸು ಕೊಟ್ಟು ಇಂದು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ನಾಳೆಗೆ ಮುಂದೂಡಲಾಗಿದೆ. ಇದನ್ನು ಗಮನಸಿದರೆ ಕಾಟಾಚಾರದ ಸಭೆ ಕರೆಯುತ್ತಿದ್ದಾರೆ ಎನಿಸುತ್ತದೆ. ಈ ಕೆಡಿಪಿಗೆ ನಾವು ಹೋಗಬೇಕಾ ಅಥವಾ ಬೇಡವಾ ಗೊತ್ತಾಗುತ್ತಿಲ್ಲ. ಕೇವಲ ಬಿಜೆಪಿಗರಿಗೆ ಅಥವಾ ಸಚಿವರಿಗೆ ಮಾತ್ರ ಕೆಲಸವಿದೆ ನಮಗೆ ಇಲ್ಲವಾ? ಎಂದು ಪ್ರಿಯಾಂಕ್ ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡಿ ಎಂದರೆ ವಿದೇಶಿ ಪ್ರವಾಸಕ್ಕೆ ಹೋಗಲು ರೆಡಿಯಾಗಿದ್ದಾರೆ. ಅದರಂತೆ ಟ್ರಾವೆಲಿಂಗ್ ಏಜೆನ್ಸಿಯರಿಗೆ ಈಗಾಗಲೇ ಕೆಕೆಆರ್ಡಿಬಿ ಯಿಂದ ಒಂದು ಕೋಟಿ ಹಣ ಜಮಾ ಆಗಿದೆ. ತೊಗರಿ ನೆಟೆರೋಗದ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಲಿದೆ ನಾವು ಜನರ ಮುಂದೆ ವಿವರ ಹೇಳಲಿದ್ದೇವೆ ಎಂದರು.

ನಾನು ಸಿಎಂ ಅವರಿಗೆ ಭೇಟಿಯಾಗಿ ನೆಟೆರೋಗದ‌ ಪರಿಹಾರ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದೇನೆ. ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜನವರಿ 17 ರಂದು ಕರೆ ನೀಡಲಾಗಿರುವ ಕಲಬುರಗಿ ಬಂದ್ ಗೆ ನಮ್ಮ ಬೆಂಬಲವಿದೆ. ರೈತರ ಪರ ಹೋರಾಟ ಮಾಡುವ ಯಾರೇ ಆಗಲಿ ಅವರ ಪರ ನಾವಿರುತ್ತೇವೆ ಎಂದು ಘೋಷಿಸಿದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಒಂದೇ ಒಂದು ಬಾರಿ ವಿಚಾರಣೆಗೆ ಕರೆಯದೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ‌. ಈಗ ಅರವಿಂದ ಲಿಂಬಾವಳಿ ಕೇಸಲ್ಲಿ ಕೂಡಾ ಅದೇ ಆಗುತ್ತಿದೆ. ನಾವು ಈಗಾಗಲೇ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನೇ ಹೇಳಿದ್ದೇವೆ ಎಂದರು.

ಮಣಿಕಂಠ ರಾಠೋಡ್ ಮಾಡುತ್ತಿರುವ ಆಪಾದನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನನ್ನ ಮೇಲೆ ಆರೋಪ ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಜವಾಬ್ದಾರಿಯೂ ಕೂಡ ಅವರಿಗೆ ಸೇರಿದೆ. ನಾವು ಐವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇವೆ.‌ ಅವರದ್ದು ಐದು ತಿಂಗಳದ್ದು, ಜನರೇ ಉತ್ತರ ಕೊಡುತ್ತಾರೆ ಎಂದರು. ಮಾಜಿ‌ ಸಚಿವ ರೇವು ನಾಯಕ ಬೆಳಮಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಶಿವಾನಂದ ಪಾಟೀಲ್, ಸುಭಾಷ ರಾಠೋಡ, ಸಂತೋಷ ಬಿಲಗುಂದಿ, ಡಾ. ಕಿರಣ ದೇಶಮುಖ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next