Advertisement

ದ.ಕ.ದಲ್ಲಿ  ಹೆಚ್ಚಿದ ಆಕಾಂಕ್ಷಿಗಳು!

12:30 AM Mar 15, 2019 | Team Udayavani |

ಮಂಗಳೂರು: ಚುನಾವಣೆ ಕಾವು ಜೋರಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹಾಗೂ ಟಿಕೆಟ್‌ಗಾಗಿ ಲಾಬಿ ಜೋರಾಗುತ್ತಿದೆ. ಉಡುಪಿ -ಚಿಕ್ಕಮಗಳೂರು ಕ್ಷೇತ್ರವು ಕಾಂಗ್ರೆಸ್‌ ಕೈತಪ್ಪಿದ್ದು, ಅದರ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ ನಾಯಕರೆಲ್ಲ ಈಗ ದಕ್ಷಿಣ ಕನ್ನಡದತ್ತ ಮುಖ ಮಾಡಿದ್ದಾರೆ. 

Advertisement

ಬಿಜೆಪಿಯಲ್ಲಿ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಮೂರನೇ ಬಾರಿಗೆ ಕಣಕ್ಕಿಳಿಯುವುದು ಬಹು ತೇಕ ಖಚಿತಗೊಂಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು, ಕುತೂಹಲಕ್ಕೆ ಎಡೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಹೆಸರು ಮಾ.18ರ ವೇಳೆಗೆ ಘೋಷಣೆಯಾಗುವ ಸಾಧ್ಯತೆ ಯಿದ್ದರೆ, ಕಾಂಗ್ರೆಸ್‌ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನಕ್ಕೆ ಮೊದಲು ಪ್ರಕಟಿಸುವ ನಿರೀಕ್ಷೆ ಇದೆ. 

ಘಟಾನುಘಟಿ ಆಕಾಂಕ್ಷಿಗಳು
ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ನ‌ ಪಾಲಿಗೆ ದೊಡ್ಡ ಸವಾಲಾಗಿದೆೆ. ಘಟಾನುಘಟಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ. ಮಾಜಿ ಸಚಿವ ರಮಾನಾಥ ರೈ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಯುವ ನಾಯಕ ಮಿಥುನ್‌ ರೈ ಹಾಗೂ ಉದ್ಯಮಿ ಯು.ಕೆ. ಮೋನು ಪ್ರಮುಖರು. ಇವರಲ್ಲದೆ ಸಹಕಾರಿ ಧುರೀಣ, ಎಸ್‌ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಉಡುಪಿ – ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆ ವಿಚಾರವನ್ನು ಜಟಿಲಗೊಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿರುವ ಬಿ.ಕೆ. ಹರಿಪ್ರಸಾದ್‌ ಒಂದೊಮ್ಮೆ ಇಲ್ಲಿ ಅವಕಾಶ ಕೈತಪ್ಪಿದರೆ ಉಡುಪಿ ಕ್ಷೇತ್ರವನ್ನು ಆಯ್ದುಕೊಳ್ಳಲು ಬಯಸಿದ್ದರು. ಆದರೆ ಈಗ ಉಡುಪಿ ಜೆಡಿಎಸ್‌ ಪಾಲಾಗಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೆಸರು ಕೂಡ ಮುಂಚೂಣಿ ಯಲ್ಲಿದೆ. ಕರಾವಳಿಯಲ್ಲಿ ಬಿಲ್ಲವ – ಬಂಟ ಸಮುದಾಯದ ಪ್ರಾಬಲ್ಯವಿದ್ದು, ಜಾತಿ ಸಮೀಕರಣದಲ್ಲೂ ಸಮಸ್ಯೆ ಎದುರಾಗಿದೆ.

ವಿನಯ ಕುಮಾರ್‌ ಸೊರಕೆ ಉಡುಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಈಗ ಅವರೂ ದ. ಕ.ದಲ್ಲೇ ಪ್ರಯತ್ನ ನಡೆಸಬೇಕಾಗಿದೆ. ಈ ನಡುವೆ ಈ ಬಾರಿ ಅಲ್ಪಸಂಖ್ಯಾಕ ಸಮು ದಾಯಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ಪ್ರಬಲವಾಗಿದ್ದು, ಐವನ್‌ ಮತ್ತು ಯು.ಕೆ. ಮೋನು ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.

Advertisement

ಆದರೆ ಬಿಜೆಪಿಯಲ್ಲಿ ಹಾಲಿ ಸಂಸದ ನಳಿನ್‌ ಹೆಸರು ಬಹುತೇಕ ಅಂತಿಮಗೊಂಡಿದೆ. ಮಾ.15ಕ್ಕೆ ಬೆಂಗಳೂರಿನಲ್ಲಿ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಮಾ.18ರಂದು ಹೊಸದಿಲ್ಲಿಯಲ್ಲಿ ನಡೆಯುವ ಬಿಜೆಪಿ ಚುನಾವಣಾ ಸಮಿತಿ ಸಭೆ ಯಲ್ಲಿ ಮಂಡನೆಯಾಗಿ ಅಧಿಕೃತ ವಾಗಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿಯೂ ಕೆಲವು ಆಕಾಂಕ್ಷಿಗಳಿದ್ದರೂ ಅವರೆಲ್ಲ ಹಿಂದೆ ಸರಿದಿದ್ದು, ನಳಿನ್‌ ಆಯ್ಕೆಯನ್ನು ಸುಗಮವಾಗಿಸಿದೆ. ಸಂಚಲನ ಮೂಡಿಸಿದ ಪೂಜಾರಿ ಹೇಳಿಕೆ ಕಾಂಗ್ರೆಸ್‌ ಪಕ್ಷದ ವರಿಷ್ಠ ಮಂಡಳಿ ಬಯಸಿದರೆ ತಾನು ಈ ಬಾರಿಯೂ ಸ್ಪರ್ಧಿಸಲು ಸಿದ್ಧ ಎಂದು ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿರುವುದು ಸಂಚಲನ ಮೂಡಿಸಿದೆ.

ಹೊಸ ಆಯ್ಕೆ ತಲೆನೋವು
ಇದೆಲ್ಲದರ  ನಡುವೆ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೆಸರು ಪ್ರಬಲವಾಗಿ ಕೇಳಿ ಬರತೊಡಗಿದೆ. ಡಾ|ರಾಜೇಂದ್ರ ಕುಮಾರ್‌ ಇತ್ತೀಚೆಗೆ ಮಂಗಳೂರಿನಲ್ಲಿ ಕಾಂಗ್ರೆಸ್‌ ಜಿಲ್ಲಾ ಸಮಾವೇಶದ ವೇದಿಕೆಯ ಮುಂದಿನ ಸಾಲಿನಲ್ಲಿ ಕಾಣಿಸಿಕೊಂಡಿದ್ದು, ಅಭ್ಯರ್ಥಿಗಳ ಆಯ್ಕೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಮೂರ್‍ನಾಲ್ಕು ಮಂದಿ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿದ್ದು, ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬೇಕೆ ನ್ನುವುದು ಕಾಂಗ್ರೆಸ್‌ ತಲೆನೋವು. 

-   ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next