ದಾವಣಗೆರೆ: ವಿಜ್ಞಾನ, ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರು ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಜಿಲ್ಲಾ ಉಪ ಪರಿಸರ ಅಧಿಕಾರಿ ರಾಜಶ್ರೀ ಕುಳ್ಳಿ ಹೇಳಿದ್ದಾರೆ.
ಶುಕ್ರವಾರ, ಬಿಐಇಟಿ ಕಾಲೇಜಿನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ಹಮ್ಮಿಕೊಂಡ ಕೆಮೆಕ್ಸಲ್- 2018 ಉದ್ಘಾಟಿಸಿ, ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ತಂತ್ರಜ್ಞಾನ ಶಿಕ್ಷಣದಲ್ಲಿ ಹೆಚ್ಚಾಗಿ ಮಹಿಳೆಯರು ಆಸಕ್ತಿ ತೋರುತ್ತಿರುವುದು ಮಹತ್ತರ ಬೆಳವಣಿಗೆ ಎಂದರು.
ಪ್ರಸ್ತುತ ತಂತ್ರಜ್ಞರಿಗೆ ಹೇರಳ ಅವಕಾಶಗಳಿದ್ದು, ತಂತ್ರಜ್ಞಾನ ವಿದ್ಯಾರ್ಥಿಗಳು ಓದುವಾಗಲೇ ಮುಂದಿನ ಗುರಿ ನಿಗದಿಪಡಿಸಿಕೊಂಡರೆ ಉನ್ನತ ಅವಕಾಶ ಪಡೆಯಲು ಸಾಧ್ಯ. ದಿನೇ ದಿನೇ ಬದಲಾಗುವ ಜಗತ್ತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಗಳಿಸಿಕೊಂಡ ವಿದ್ಯಾರ್ಥಿ ಬಹುಬೇಗ ಎತ್ತರಕ್ಕೆ ಬೆಳೆಯಲಿದ್ದಾನೆ ಎಂದು ಅವರು ತಿಳಿಸಿದರು.
ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ|ವೈ. ವೃಷಭೇಂದ್ರಪ್ಪ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲಿ ಅಂಕ ಗಳಿಕೆಗಿಂತ ಸಂಶೋಧನೆ ಕೈಗೊಳ್ಳುವ ಮನಸ್ಸು ಹೊಂದುವುದು ಅವಶ್ಯವಾಗಿದೆ. ಕೇವಲ ಶೈಕ್ಷಣಿಕ ಸಾಧನೆ ತೋರಿ, ಉದ್ಯೋಗ ಅರಸಿಕೊಂಡು ಹೋಗುವವರು ಮುಂದೆ ಯಾವುದೇ ಸಾಧನೆ ಮಾಡಲಾರರು. ಹಾಗಾಗಿ ಎಲ್ಲರೂ ಜೀವನ ನಿರ್ವಹಣೆಯ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಿ ಎಂದು ಸಲಹೆ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ| ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿ, ಕೆಮಿಕಲ್ ಇಂಜಿನಿಯರಿಂಗ್ ಎಲ್ಲೆಡೆ ತನ್ನ ಕಾರ್ಯಕ್ಷೇತ್ರ ಹೊಂದಿದೆ. ಈ ಇಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಹೇರಳ ಅವಕಾಶ ಇವೆ
ಎಂದರು.
ಕಾಲೇಜು ಅಧ್ಯಕ್ಷ ಎ.ಸಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕೆಮಿಕಲ್ ವಿಭಾಗದ ಮುಖ್ಯಸ್ಥ ಡಾ| ಜಿ.ಪಿ. ದೇಸಾಯಿ, ಆಯೋಜಕ ಪ್ರವೀಣ ಕುಮಾರ, ವಿದ್ಯಾರ್ಥಿ ಸಂಚಾಲಕ ರಘುನಾಥ್ ರೆಡ್ಡಿ ವೇದಿಕೆಯಲ್ಲಿದ್ದರು. ದೇಶದ ವಿವಿಧ ತಂತ್ರಜ್ಞಾನ ಕಾಲೇಜುಗಳಿಂದ ಸುಮಾರು 150 ವಿದ್ಯಾರ್ಥಿಗಳು ವಿಚಾರ ಸಂಕೀರಣದಲ್ಲಿ ಭಾಗವಹಿಸಿದ್ದು, 21 ತಂತ್ರಜ್ಞಾನ ಪ್ರಬಂಧಗಳು ಮೌಖೀಕ ರೂಪದಲ್ಲಿ ಮತ್ತು 20 ಪ್ರಬಂಧಗಳು ಸ್ಥಿರ ಚಿತ್ರ ರೂಪದಲ್ಲಿ ಮಂಡಿಸಲ್ಪಟ್ಟವು.