Advertisement

ಶುಲ್ಕ ಕಟ್ಟಿ “ಅಂತಸ್ತು’ ಹೆಚ್ಚಿಸಿಕೊಳ್ಳಿ;ಮಂಗಳೂರು ಮಾದರಿ ಈಗ ರಾಜ್ಯವ್ಯಾಪಿ, ಏನಿದು ಮಸೂದೆ

10:56 AM Feb 23, 2024 | Team Udayavani |

ಬೆಂಗಳೂರು: ಮಹಡಿ ಎತ್ತರಿಸಲು ಪೂರಕವಾದ ಮಸೂದೆಗೆ ವಿಧಾನ ಪರಿಷತ್ತು ಒಪ್ಪಿಗೆ ನೀಡಿದೆ. ಈ ಮೂಲಕ ಮಂಗಳೂರಿನಲ್ಲಿ ಜಾರಿಯಲ್ಲಿರುವಂತೆ ಯೋಜನಾ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಯಮಾನುಸಾರ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ ಅವರಿಗೆ ಹೆಚ್ಚುವರಿ ಮಹಡಿಗಳನ್ನು ಕಟ್ಟಿಕೊಳ್ಳಲು ರಾಜಧಾನಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಅವಕಾಶ ಮಾಡಿಕೊಡುವ ತಿದ್ದುಪಡಿ ಮಸೂದೆಗೆ ಗುರುವಾರ ವಿಧಾನಪರಿಷತ್ತಿನಲ್ಲಿ ಅನುಮೋದನೆ ಸಿಕ್ಕಿತು.

Advertisement

ಬಿಜೆಪಿ ಸಭಾತ್ಯಾಗದ ನಡುವೆಯೂ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ “ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ’ (ಎಫ್ ಎಆರ್‌) ಖರೀದಿಸಿ ಬಳಸಲು ಅವಕಾಶ ಕಲ್ಪಿಸುವ “ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ-2024’ಕ್ಕೆ ಮೇಲ್ಮನೆಯಲ್ಲಿ ಧ್ವನಿಮತದ ಅಂಗೀಕಾರ ದೊರಕಿತು.

ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ತಿದ್ದುಪಡಿ ಮಸೂದೆಯನ್ನು ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ಈಗಾಗಲೇ ಎಫ್ಎಆರ್‌ ನೀಡುವ ವ್ಯವಸ್ಥೆ ಮಂಗಳೂರಿನಲ್ಲಿದೆ.

ಇದೇ ವ್ಯವಸ್ಥೆಯನ್ನೂ ಬೆಂಗಳೂರು ಸಹಿತ ರಾಜ್ಯದ ಬೇರೆ ಕಡೆಗೂ ತರಬೇಕು. ಈಗಾಗಲೇ ಕಾಯ್ದೆ ಇದ್ದು, ಅದನ್ನು ಸರಳಗೊಳಿಸಿ
ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ. ಹುಬ್ಬಳ್ಳಿ, ಕಲಬುರಗಿ, ಮೈಸೂರು ಸಹಿತ ರಾಜ್ಯದ ಬೇರೆ ಕಡೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬಹುಮಹಡಿ ಕಟ್ಟಡಗಳು ಬರಬೇಕು. ಸರಕಾರಕ್ಕೆ ಆದಾಯ ಬರುತ್ತದೆ. ಇದೊಂದು ಪ್ರಗತಿದಾಯಕ ಕ್ರಮ ಎಂದರು.

ಬಿಜೆಪಿ ಸಭಾತ್ಯಾಗ
ಮಸೂದೆ ಮೇಲಿನ ಚರ್ಚೆಯಲ್ಲಿ ಬಿಜೆಪಿ-ಜೆಡಿಎಸ್‌ ಸದಸ್ಯರು ಮಾತನಾಡಿದರು. ಬಿಜೆಪಿಯ ತೇಜಸ್ವಿನಿ ಗೌಡ, ಜೆಡಿಎಸ್‌ನ ಟಿ.ಎ ಶರವಣ, ಕಾಂಗ್ರೆಸ್‌ನ ನಾಗರಾಜ ಯಾದವ್‌, ಎಂ.ಆರ್‌. ಸೀತಾರಾಂ ಮಸೂದೆಯನ್ನು ಸ್ವಾಗತಿಸಿದರು. ಬಿಜೆಪಿಯ ರವಿಕುಮಾರ್‌, ಕೆ.ಎಸ್‌. ನವೀನ್‌, ಕೇಶವಪ್ರಸಾದ್‌, ಜೆಡಿಎಸ್‌ ನ ಕೆ.ಎ. ತಿಪ್ಪೇಸ್ವಾಮಿ, ಗೋವಿಂದರಾಜು ಅವರು ತರಾತುರಿ ಬೇಡ. ಮರುಪರಿಶೀಲಿಸಿ ಮತ್ತೊಮ್ಮೆ ತನ್ನಿ, ಅಥವಾ ಪರಿಶೀಲನೆ ಸಮಿತಿಗೆ ಒಪ್ಪಿಸಿ ಎಂದು ಆಗ್ರಹಿಸಿದರು.

Advertisement

ಇದಕ್ಕೆ ಸರಕಾರ ಒಪ್ಪಲಿಲ್ಲ. ಪ್ರತಿಯೊಬ್ಬರಿಗೂ ಅನುಮಾನಗಳಿವೆ, ಹಾಗಾಗಿ ಮಸೂದೆಯನ್ನು ತಡೆ ಹಿಡಿದು ಇನ್ನಷ್ಟು ಚರ್ಚಿಸಬೇಕು. ಆದರೆ ಸರಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಭಾತ್ಯಾಗ ನಡೆಸಿದರು. ಬಿಜೆಪಿ ಸದಸ್ಯರು ಹೊರನಡೆದರು. ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಲಿಲ್ಲ.

ಏನಿದು ಎಫ್ಎಆರ್‌?
ನಿವೇಶನದ ಅಳತೆ ಆಧರಿಸಿ ನಿರ್ಮಿಸಬಹುದಾದ ಕಟ್ಟಡದ ವಿಸ್ತೀರ್ಣ ಮತ್ತು ಅಂತಸ್ತುಗಳ ಪ್ರಮಾಣವೇ ಎಫ್ಎಆರ್‌. ನಿವೇಶನದ ವಿಸ್ತೀರ್ಣ ಮತ್ತು ಅದರ ಪಕ್ಕದ ಅಥವಾ ಸಮೀಪದ ರಸ್ತೆ ಅಗಲವನ್ನು ಆಧರಿಸಿ ಎಷ್ಟು ಮಹಡಿಗಳ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ಅನುಮತಿ ನೀಡಲಾಗುತ್ತದೆ. ಪ್ರೀಮಿಯಂ ಎಫ್ಎಆರ್‌ ಅನ್ನು ಸರಕಾರವೇ ನಗರ ವಾಸಿಗಳು, ಬಿಲ್ಡರ್‌ ಗಳಿಗೆ ಮಾರಾಟ ಮಾಡಲಿದೆ.

ಮಸೂದೆಯಲ್ಲಿ ಏನಿದೆ?
ಕಟ್ಟಡ ನಿರ್ಮಿಸುವವರು ಪ್ರೀಮಿಯಂ ಎಫ್ಎಆರ್‌ಗಳನ್ನು ಖರೀದಿಸಿ ಕಟ್ಟಡದಲ್ಲಿ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್
ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು ಸಕ್ಷಮ ಪ್ರಾಧಿಕಾರದ ಅನುಮೋದಿತ ಮಾಸ್ಟರ್‌ ಪ್ಲಾನ್‌ ವಲಯ ನಿಯಮಗಳ ಅನುಸಾರ ಪ್ರೀಮಿಯಂ ಎಫ್ಎಆರ್‌ ಮಂಜೂರು ಮಾಡಬೇಕು. ಪ್ರೀಮಿಯಂ ಎಫ್ಎಆರ್‌ ಮಾರಾಟದಿಂದ ಸಂಗ್ರಹವಾಗುವ ಶುಲ್ಕವನ್ನು ಭೂಸ್ವಾಧೀನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅವಕಾಶ ಪ್ರೀಮಿಯಂ ಎಫ್ಎಆರ್‌ ಮಿತಿ ಮಾರ್ಗಸೂಚಿ ದರದ ಶೇ. 0.4ರಷ್ಟು ನಿಗದಿ.

Advertisement

Udayavani is now on Telegram. Click here to join our channel and stay updated with the latest news.

Next