Advertisement

ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿ

11:01 AM Jan 14, 2019 | |

ವಿಜಯಪುರ: ಕರ್ನಾಟಕದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆದು ಬಳಸುತ್ತಿರುವ ರಾಗಿ ಕೂಡ ದಕ್ಷಿಣ ಆಫ್ರಿಕಾ ಮೂಲದ್ದು. ಆಫ್ರಿಕಾ ದೇಶದಲ್ಲಿ ಇಂದಿಗೂ ರಾಗಿ ಸೇರಿದಂತೆ ಇತರೆ ಸಿರಿಧಾನ್ಯಗಳನ್ನು ಯಥೇಚ್ಛವಾಗಿ ಬೆಳೆಯುವ ಜೊತೆಗೆ, ಬಳಕೆಯನ್ನೂ ಮಾಡುತ್ತಿದ್ದಾರೆ ಎಂದು ಶಿವಮೊಗ್ಗ ಮೂಲದ ಸಿರಿಧಾನ್ಯ ಹಾಗೂ ದೇಶಿ ಬೀಜ ಸಂರಕ್ಷಕ ಈಶ್ವರನ್‌ ಹೇಳಿದರು.

Advertisement

ರವಿವಾರ ನಗರದ ಎಸ್‌.ಎಸ್‌. ಮೈದಾನದಲ್ಲಿ ಹಮ್ಮಿಕೊಂಡಿರುವ ಸಾವಯವ ಕೃಷಿ ಮತ್ತು ಸಿರಿಧಾನ್ಯ ಮೇಳದಲ್ಲಿ ರೈತರ ಸಂವಾದದಲ್ಲಿ ಅವರು ಮಾತನಾಡಿದರು.

ಸಿರಿಧಾನ್ಯಗಳಿಗೆ ಪ್ರಾಚೀನ‌ ಇತಿಹಾಸವಿದ್ದು, ಚೀನಿ ಯಾತ್ರಿಕ ಹ್ಯೂಯಾನ್ಸ್‌ ತ್ಸಾಂಗ್‌ ಭೇಟಿ ನೀಡಿದ ಸಂದರ್ಭದಲ್ಲಿ ಸಿರಿಧಾನ್ಯಗಳ ಸಂಗ್ರಹಣೆಗೆ ದೊಡ್ಡ ಉಗ್ರಾಣಗಳಿರುವ ಬಗ್ಗೆ ಉಲ್ಲೇಖೀಸಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದೆ ಅಲೆಕ್ಸಾಂಡರ್‌ ಭಾರತಕ್ಕೆ ಬಂದಿದ್ದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಬಾರ್ಲಿ ಅಕ್ಕಿ, ದಕ್ಷಿಣ ಭಾರತದಲ್ಲಿ ರಾಗಿ, ನವಣೆ ಬಳಕೆಯಲ್ಲಿದ್ದ ಮಾಹಿತಿ ಸಂಗ್ರಹಿಸಿ ಇದರಲ್ಲೇ ಭಾರತೀಯರ ಆರೋಗ್ಯದ ಗುಟ್ಟು ಅಡಗಿದೆ ಎಂದು ಮನಗಂಡಿದ್ದ. ಬಸವಾದಿ ಶರಣರ ಕಾಲದಲ್ಲಿ ಕೂಡ ಸಿರಿಧಾನ್ಯ ಸಮೃದ್ಧ ಬಳಕೆಯಲ್ಲಿತ್ತು ಎಂಬುದು ಸೊನ್ನಲಿಗೆ ಸಿದ್ದರಾಮ ಸೇರಿದಂತೆ ಇತರೆ ಶರಣರ ವಚನಗಳಲ್ಲಿ ಉಲ್ಲೇಖವಿದೆ. ಸರ್ವಜ್ಞನ ವಚನಗಳಲ್ಲಿ ಕೂಡ ಸಿರಿಧಾನ್ಯಗಳ ಕುರಿತು ಉಲ್ಲೇಖ ಮಾಡಿರುವುದು ಸಿರಿಧಾನ್ಯಗಳ ಮಹತ್ವವನ್ನು ಸಾರುತ್ತದೆ ಎಂದರು.

ಸಿರಿಧಾನ್ಯ ಆಹಾರೋತ್ಪನ್ನಗಳ ಉದ್ಯಮಿ ಮಲ್ಲಿಕಾರ್ಜುನ ಹಟ್ಟಿ ಮಾತನಾಡಿ, ರೈತರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಶ್ರೀಮಂತರಾಗುವ ದಿನಗಳು ದೂರವಿಲ್ಲ. ಸಿರಿಧಾನ್ಯಗಳನ್ನು ಬೆಳೆಯುವುದನ್ನು ಕೈ ಬಿಟ್ಟ ಪರಿಣಾಮವಾಗಿಯೇ ಸಿರಿಧಾನ್ಯಗಳ ಬೆಲೆ ಏರಿಕೆಯಾಗಿದೆ. ಸಿರಿಧಾನ್ಯಗಳನ್ನೇ ಬಳಸಿದ ನಮ್ಮ ಪೂರ್ವಜರು ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂಥ ರೋಗಗಳಿಂದ ಮುಕ್ತರಾಗಿದ್ದರು. ನಮ್ಮ ಹಿರಿಯರ ದೀರ್ಘಾಯುಷ್ಯದ ಗುಟ್ಟು ಕೂಡ ಸಿರಿಧಾನ್ಯಗಳ ಬಳಕೆಯಲ್ಲೇ ಅಡಗಿತ್ತು. ಆದರೆ ಸಿರಿಧಾನ್ಯಗಳ ಹೊರತಾದ ವಿಷಯುಕ್ತ ಆಹಾರ ಸೇವಿಸಿ ನಮ್ಮ ಬಾಧಿಸುವ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದನ್ನು ಅಭಿವೃದ್ಧಿ ಎನ್ನುತ್ತಿದ್ದೇನೆ ವಿಶ್ಲೇಷಣೆ ಮಾಡುತ್ತಿರುವುದು ವ್ಯವಸ್ಥೆಯ ವಿಪರ್ಯಾಸ ಎಂದರು.

ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ರೈತರಿಗೆ ಒಂದು-ಎರಡು ಎಕರೆ ಜಮೀನು ಸಹ ಇಲ್ಲ, ಅಲ್ಲಿ ಕೇವಲ ಹಿಮ, ಇಲ್ಲವೇ ಬರಡು. ನೀರಿನ ಸಂಪನ್ಮೂಲ ಸಹ ಕಡಿಮೆ. ಆದರೆ ನಮ್ಮಲ್ಲಿ ಯಥೇಚ್ಛವಾದ ಭೂಮಿ, ಜಲ, ಬಿಸಿಲು ಸೇರದಂತೆ ಹಲವು ನೈಸರ್ಗಿಕ ಸಂಪನ್ಮೂಲಗಳಿದ್ದರೂ ಸದ್ಭಳಕೆಯಲ್ಲಿ ವಿಫಲರಾಗಿದ್ದೇವೆ. ಪರಿಣಾಮ ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಂದರ್ಭದಲ್ಲಿ ಹೆಚ್ಚಿನ ಸವಾಲು ಎದುರಿಸುವಂತಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿದಾಗ ಮಾತ್ರ ಕೃಷಿಯಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದರು.

Advertisement

ಸಿರಿಧಾನ್ಯಗಳು ನರದೌರ್ಬಲ್ಯ ನಿವಾರಣೆ, ಶ್ವಾಸಕೋಶ ತೊಂದರೆ, ಮಧುಮೇಹ, ಸಂಧಿವಾತ, ಮುಷ್ಠಿರೋಗ, ಕಾಮಾಲೆ ಸೇರಿದಂತೆ ನೂರಾರು ರೋಗಗಳಿಗೆ ರಾಮಬಾಣವಾಗಿವೆ, ಸಿರಿಧಾನ್ಯಗಳಲ್ಲಿ ನಾರಿನಾಂಶವೇ ಅಧಿಕವಾಗಿರುವುದರಿಂದ ದೇಹಕ್ಕೆ ಅತ್ಯಂತ ಅನುಕೂಲ ಎಂದು ಪಿಪಿಪಿ ಮೂಲಕ ವಿವರಣೆ ನೀಡಿದರು.

ಪ್ರಗತಿಪರ ರೈತ ಬಸನಗೌಡ ಕನಕರೆಡ್ಡಿ ಮಾತನಾಡಿ, ಸಾವಯವ ಕೃಷಿಯ ತಮ್ಮ ಅನುಭವವನ್ನು ಹಂಚಿಕೊಂಡರು. ಮುಂದಿನ ಪೀಳಿಗೆಗೆ ಸತ್ವಯುತ ಭೂಮಿಯನ್ನು ಬಿಟ್ಟು ಕೊಡಬೇಕಾಗಿರುವುದು ಅನಿವಾರ್ಯವಾಗಿದೆ. ಜಮೀನಿನ ಅರ್ಧ ಭಾಗದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ, ಆರೋಗ್ಯವನ್ನು ಕಾಪಾಡಿಕೊಂಡು ಅಂಗೈಯಲ್ಲಿ ಆರೋಗ್ಯ ಎಂಬ ಸೂತ್ರವನ್ನು ಅನುಷ್ಠಾನಕ್ಕೆ ತರಬೇಕು ಎಂದು ಕರೆ ನೀಡಿದರು.

ಪ್ರಗತಿಪರ ರೈತರಾದ ಸಿದ್ದಣ್ಣ ಬಾಲಗೊಂಡ, ರಾಜಶೇಖರ ನಿಂಬರಗಿ, ಮಲ್ಲಿಕಾರ್ಜುನ ಹಟ್ಟಿ, ಭೂಸಗೊಂಡ ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಶಿವಕುಮಾರ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next