Advertisement

ಪ್ರಕೃತಿ ವಿಕೋಪ ಪರಿಹಾರ ನಿಧಿ ಮೊತ್ತ ಹೆಚ್ಚಿಸಿ

06:30 AM Jun 19, 2018 | Team Udayavani |

ಬೆಂಗಳೂರು: ವಿಕೋಪ ಪರಿಹಾರ ನಿಧಿಯಡಿ ಕರ್ನಾಟಕಕ್ಕೆ ಕಡಿಮೆ ಅನುದಾನ ಮಂಜೂರು ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಎಚ್‌.ಡಿ.ಕುಮಾರಸ್ವಾಮಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಾಜ್ಯ ಎದುರಿಸುವ ಅಪಾಯ ಆಧರಿಸಿ ಅನುದಾನ ನಿಗದಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

ದೆಹಲಿಯಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾದ ಅವರು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಾಜ್ಯ ಎದುರಿಸುವ ಸಮಸ್ಯೆ, ಆಗಿರುವ ಹಾನಿ, ಪರಿಸ್ಥಿತಿ ಆಧರಿಸಿ ವಿಕೋಪ ಪರಿಹಾರ ನಿಧಿ ನಿಗದಿಪಡಿಸಲು ಹಣಕಾಸು ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ. ಮನವಿಗೆ ಸ್ಪಂದಿಸಿದ ಕೇಂದ್ರ
ಸಚಿವರು, ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ ಪರಿಸ್ಥಿತಿ ಕುರಿತಂತೆ ಲಿಖೀತವಾಗಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಿದ್ದು, ಕಳೆದ 17 ವರ್ಷದಲ್ಲಿ 13 ವರ್ಷ ಬರಗಾಲ ಪರಿಸ್ಥಿತಿ ಉದ್ಭವಿಸಿತ್ತು. ಆದರೆ, ರಾಜ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರದಿಂದ ನೆರವು ಸಿಕ್ಕಿಲ್ಲ.

ಅಲ್ಲದೆ, ಪ್ರಸಕ್ತ ಪಂಚವಾರ್ಷಿಕ ಯೋಜನೆಯಲ್ಲೂ 2015-16-2019-20ರ ಅವಧಿಗೆ ತೀರಾ ಕಡಿಮೆ ಅನುದಾನ ನಿಗದಿಯಾಗಿದೆ ಎಂದರು.

2015-16ರಿಂದ 2019-20ರ ಅವಧಿಗೆ ಕರ್ನಾಟಕಕ್ಕೆ ಕೇವಲ 1,527 ಕೋಟಿ ರೂ.ಮಾತ್ರ ನಿಗದಿಯಾಗಿದೆ. ಇದೇ ಅವಧಿಗೆ ಮಹಾರಾಷ್ಟ್ರಕ್ಕೆ 8,195 ಕೋಟಿ ರೂ., ರಾಜ ಸ್ಥಾನಕ್ಕೆ 6094 ಕೋಟಿ ರೂ., ಮಧ್ಯಪ್ರದೇಶಕ್ಕೆ
4,847 ಕೋಟಿ ರೂ., ಗುಜರಾತ್‌ಗೆ 3,394 ಕೋಟಿ ರೂ.ನಿಗದಿಪಡಿಸಲಾಗಿದೆ. ಆದ್ದರಿಂದ ರಾಜ್ಯ ವಿಕೋಪ ಪರಿಹಾರ ನಿಧಿಯ ಮೊತ್ತವನ್ನು 3,050.72 ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

Advertisement

ಇದಲ್ಲದೆ, ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ರೂಪಿಸಲು 12,272.21 ಕೋಟಿ ರೂ. ಒದಗಿಸುವಂತೆ 2016ರ ಮೇ 7ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ಆ ಮೊತ್ತ  ಬಿಡುಗಡೆಯಾಗಿಲ್ಲ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಇದೇ ವೇಳೆ, ಪೊಲೀಸ್‌ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೆರವನ್ನೂ ಮುಖ್ಯಮಂತ್ರಿಗಳು ಕೋರಿದ್ದಾರೆ.

ಕಡಿಮೆ ಅನುದಾನ: ರಾಜನಾಥ್‌ ಅಚ್ಚರಿ ರಾಜ್ಯಗಳಿಗೆ ನೀಡುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ರಾಜ್ಯಕ್ಕೆ ಅತಿ ಕಡಿಮೆ ಅನುದಾನ ನಿಗದಿಪಡಿಸಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅಚ್ಚರಿಗೊಂಡರಂತೆ. ಈ ವಿಷಯವನ್ನು ಕುಮಾರಸ್ವಾಮಿ ಅವರೇ ಬಹಿರಂಗಪಡಿಸಿದ್ದಾರೆ.

ರಾಜ್ಯಗಳಿಗೆ ನೀಡುವ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ರಾಜ್ಯಕ್ಕೆ ನಿಗದಿಪಡಿಸಿದ ಅನುದಾನ ಹಾಗೂ ಇತರೆ ರಾಜ್ಯಗಳಿಗೆ ನಿಗದಿಪಡಿಸಿರುವ ಅನುದಾನದ ಬಗ್ಗೆ ಗೃಹ ಸಚಿವರಿಗೆ ತಿಳಿಸಿದಾಗ, ಗೃಹ ಸಚಿವರಿಗೆ ಅಚ್ಚರಿಯಾಯಿತು. ಕರ್ನಾಟಕಕ್ಕೆ ಇಷ್ಟೊಂದು ಕಡಿಮೆ ಹಣ ನೀಡಿರುವುದು ಸರಿಯಾದ ಕ್ರಮವಲ್ಲ. ತಕ್ಷಣ ಈ ಬಗ್ಗೆ ಗಮನಹರಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಮುಖ್ಯಮಂತ್ರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next