Advertisement

ರಾಜಧಾನಿಯಲ್ಲಿ ಹಾವುಗಳ ಸಂಚಾರ ಹೆಚ್ಚಳ; ಅಪಾಯಕ್ಕೆ ಸಿಲುಕಿದ ಪಕ್ಷಿಗಳು

01:39 PM Oct 28, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾವುಗಳ ಸಂಚಾರ ಹೆಚ್ಚಳ….ಹೌದು, ನಗರಗಳು ಬೆಳೆಯುತ್ತಿದ್ದಂತೆ ಹಸಿರು ಕಣ್ಮರೆಯಾಗಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಹೆಚ್ಚಾಗುವಂತಾಗಿದೆ. ಅದರಲ್ಲೂ ಹಾವುಗಳ ವಾಸಕ್ಕೆ ಸ್ಥಳವಿಲ್ಲದೆ ಪರದಾಡುವಂತಾಗಿ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

Advertisement

ಏಪ್ರಿಲ್‌ನಿಂದ ಈವರೆಗೆ ನಗರದಲ್ಲಿ 414 ಹಾವು ಗಳು ಪತ್ತೆಯಾಗಿದ್ದು, ಅವುಗಳನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಕರು ರಕ್ಷಿಸಿ ಸುರಕ್ಷಿತವಾಗಿ ನಗರದ ಹೊರವಲಯದಲ್ಲಿನ ಅರಣ್ಯ ಪ್ರದೇಶಗಳಿಗೆ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ 2011ರಲ್ಲಿ 80 ಲಕ್ಷದಷ್ಟಿದ್ದ ಜನಸಂಖ್ಯೆ ಈಗ 1.20 ಕೋಟಿಗೂ ಹೆಚ್ಚಿದೆ. 220 ಚದರ ಕಿ.ಮೀ. ವಿಸ್ತೀರ್ಣವಿದ್ದ ಬಿಬಿಎಂಪಿ ಆಡಳಿತದ ವ್ಯಾಪ್ತಿ ಈಗ 820 ಚದರ ಕಿ.ಮೀ.ಗೆ ವಿಸ್ತರಿಸಲಾಗಿದೆ.

ಹೀಗಾಗಿ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗಿದೆ. ಅದರಿಂದಾಗಿ ಕಟ್ಟಡ ನಿರ್ಮಾಣಕ್ಕೂ ಮುನ್ನ ಖಾಲಿ ಜಾಗದಲ್ಲಿ ವಾಸವಿದ್ದ ಸರಿಸೃಪಗಳಿಗೆ ಜಾಗವಿಲ್ಲದಂತಾಗಿದೆ. ಅದರ ಜತೆಗೆ ಎಲ್ಲೆಂದರಲ್ಲಿ ಒಎಫ್ಸಿ ಕೇಬಲ್‌ಗ‌ಳ ಅಳವಡಿಕೆ ಸೇರಿ ಇನ್ನಿತರ ಕಾರಣಗಳಿಂದ ಪಕ್ಷಿಗಳ ಹಾರಾಟಕ್ಕೂ ತಡೆಯುಂಟಾಗುತ್ತಿದೆ. ಹೀಗೆ ಒಂದಿಲ್ಲೊಂದು ಸಮಸ್ಯೆಗೆ ಸಿಲುಕುತ್ತಿರುವ ಸರಿಸೃಪ, ಪಕ್ಷಿ ಹಾಗೂ ಪ್ರಾಣಿಗಳನ್ನು ಬಿಬಿಎಂಪಿಯ ವನ್ಯಜೀವಿ ಸಂರಕ್ಷಕರು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಸೇರುವಂತೆ ಮಾಡುತ್ತಿದ್ದಾರೆ. ಅದರಂತೆ ಕಳೆದ 7 ತಿಂಗಳಲ್ಲಿ 454 ಸರಿಸೃಪ, ಪಕ್ಷಿ ಹಾಗೂ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ.

ಕಳೆದ ಏಪ್ರಿಲ್‌ನಿಂದ ಈವರೆಗೆ ಬಿಬಿಎಂಪಿಯ 7ಕ್ಕೂ ಹೆಚ್ಚಿನ ವನ್ಯಜೀವಿ ಸಂರಕ್ಷಕರಿಗೆ 522 ಕರೆಗಳು ಬಂದಿವೆ. ಅವುಗಳಲ್ಲಿ ಬಹುತೇಕ ಕರೆಗಳ ವಸತಿ ಪ್ರದೇಶದಲ್ಲಿ ಹಾವುಗಳು ಕಾಣಿಸಿಕೊಂಡಿ ರುವ ಬಗ್ಗೆ ವರದಿಯಾಗಿವೆ. ಅಲ್ಲದೆ, ಒಟ್ಟು 483 ಕರೆಗಳು ಹಾವುಗಳಿದ್ದು, ಅದನ್ನು ರಕ್ಷಿಸುವಂತಹದ್ದಾಗಿದೆ. ಹೀಗೆ ಕರೆ ಬಂದ ನಂತರ ಸ್ಥಳಕ್ಕೆ ತೆರಳಿದ್ದ ವನ್ಯಜೀವಿ ಸಂರಕ್ಷಕರು 415 ಹಾವುಗಳನ್ನು ರಕ್ಷಣೆ ಮಾಡಿ, ನಗರದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಉಳಿದಂತೆ 68 ಕರೆಗಳಿಗೆ ಸಂಬಂಧಿಸಿದಂತೆ ಹಾವುಗಳು ಪತ್ತೆಯಾಗದೆ ವನ್ಯಜೀವಿ ಸಂರಕ್ಷಕರು ವಾಪಸಾಗುವಂತಾಗಿ ದೆ. ಹೀಗೆ ರಕ್ಷಣೆ ಮಾಡಿದ ಹಾವುಗಳ ಪೈಕಿ 180ಕ್ಕೂ ಹೆಚ್ಚು ನಾಗರಹಾವಾಗಿವೆ. ಉಳಿದಂತೆ ವೈಪರ್‌, ಕೇರೆ ಹಾವು, ಕೊಳಕುಮಂಡಲ, ಗೆರೆ ಹಾವು, ಕುಕ್ರಿ ಹಾವು, ಮರದ ಹಾವು, ತೋಳ ಹಾವು ಹೀಗೆ ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಗಿದೆ.

ಅಪಾಯಕ್ಕೆ ಸಿಲುಕಿದ ಪಕ್ಷಿಗಳು:
ಹಾವುಗಳ ಜತೆಗೆ ಹಲವು ರೀತಿಯ ಪಕ್ಷಿಗಳನ್ನು ಕೂಡ ರಕ್ಷಿಸಲಾಗಿದೆ. ಹದ್ದು, ನವಿಲು, ಕಾಗೆ, ಕೆಂಬೂತ, ಗಿಳಿ, ಗೂಬೆ ಹೀಗೆ ಹಲವು ಪಕ್ಷಿಗಳು ಕೇಬಲ್‌ ಸೇರಿ ಇನ್ನಿತರ ವಸ್ತುಗೆ ಸಿಲುಕಿದ್ದರ ಬಗ್ಗೆ ಕರೆ ಬಂದಿದೆ. ಅವುಗಳಲ್ಲಿ 36ಕ್ಕೂ ಹೆಚ್ಚಿನ ಪಕ್ಷಗಳನ್ನು ರಕ್ಷಿಸಲಾಗಿದ್ದು, ಅದರಲ್ಲಿ 23 ಹದ್ದುಗಳಾಗಿವೆ. ಅದೇ ರೀತಿ 7 ತಿಂಗಳಲ್ಲಿ 3 ಕೋತಿಗಳನ್ನೂ ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಜತೆಗೆ ಗಾಯಗೊಂಡಿದ್ದ ಕೋತಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ಖಾಲಿ ಜಾಗದಲ್ಲಿ ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದಾಗ ದೊರೆತ ಒಂದು ಚೇಳನ್ನು ರಕ್ಷಿಸಿ ಕಲ್ಲಿನ ಗುಡ್ಡೆಯೊಳಗೆ ಬಿಡಲಾಗಿದೆ.

Advertisement

ಬೇಸಿಗೆಯಲ್ಲಿ ಹೆಚ್ಚು ಕರೆ
ಸರಿಸೃಪ, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗಾಗಿ ಬೇಸಿಗೆಯಲ್ಲಿ ಹೆಚ್ಚಿನ ಕರೆಗಳು ಬರುತ್ತವೆ. ಅದರಲ್ಲೂ ಹಾವುಗಳು ಪತ್ತೆಯಾದ ಕುರಿತು ಹೆಚ್ಚಾಗಿ ಜನರು ವನ್ಯಜೀವಿ ಸಂರಕ್ಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ 129 ಹಾಗೂ ಮೇ ತಿಂಗಳಲ್ಲಿ 198 ಕರೆಗಳು ಬಂದಿವೆ. ಉಳಿದಂತೆ ಜೂನ್‌ನಲ್ಲಿ 20, ಜುಲೈನಲ್ಲಿ 86, ಆಗಸ್ಟ್‌ನಲ್ಲಿ 34, ಸೆಪ್ಟೆಂಬರ್‌ನಲ್ಲಿ 38 ಹಾಗೂ ಅಕ್ಟೋಬರ್‌ನಲ್ಲಿ 17 ಕರೆಗಳನ್ನು ವನ್ಯಜೀವಿ ಸಂರಕ್ಷರು ಜನರಿಂದ ಸ್ವೀಕರಿಸಿದ್ದಾರೆ.

*ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next