ನವದೆಹಲಿ: ನೀವು ಖಾಸಗಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದೀರಾ? ಹಾಗಿದ್ದರೆ, ಈ ಸುದ್ದಿಯನ್ನು ಓದಲೇಬೇಕು. ಬಹುತೇಕ ಕಂಪನಿಗಳು ತಮ್ಮೆಲ್ಲಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದು ಸೂಚಿಸಲಾರಂಭಿಸಿದ್ದು, ಲಸಿಕೆ ಪಡೆಯದವರ ವೇತನ ಪರಿಷ್ಕರಣೆ, ಪ್ರೋತ್ಸಾಹಧನ ಹಾಗೂ ಇನ್ನಿತರ ಭತ್ಯೆಗಳನ್ನು ತಡೆಹಿಡಿಯಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ಪತ್ರ ಕಡ್ಡಾಯ?: ನೌಕರರಿಗೆ ನೀಡಲಾಗಿರುವ “ವರ್ಕ್ ಫ್ರಂ ಹೋಂ’ ಸೌಲಭ್ಯವನ್ನು ಹಿಂಪಡೆದು, ಇನ್ನು ಮೂರು- ನಾಲ್ಕು ತಿಂಗಳೊಳಗೆ ಪುನಃ ಕಚೇರಿಗಳನ್ನು ಹಿಂದಿನಂತೆ ಆರಂಭಿಸಲು ಕಂಪನಿಗಳು ನಿರ್ಧರಿಸಿವೆ. ಎಲ್ಲಾ ಉದ್ಯೋಗಿಗಳು ಲಸಿಕೆ ಹಾಕಿಸಿಕೊಳ್ಳಬೇಕೆಂಬ ಉದ್ದೇಶ ಎಲ್ಲಾ ಕಂಪನಿಗಳಿಗಿದೆ.
ಹಾಗಾಗಿ, ಉದ್ಯೋಗಿಗಳಿಗೆ ಲಸಿಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳುವ ಸಾಧ್ಯತೆ ದಟ್ಟವಾಗಿದೆ. ಪ್ರಮಾಣ ಪತ್ರ ಸಲ್ಲಿಸದವರ ಆರ್ಥಿಕ ಸವಲತ್ತುಗಳಿಗೆ ಕತ್ತರಿ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಿರುಕುಳ ನೀಡದಿದ್ದರೆ ಜೀವಾವಧಿ ಬೇಡ
ಅಪಹೃತ ವ್ಯಕ್ತಿಗೆ ಬೆದರಿಕೆಹಾಕದೇ, ಹಲ್ಲೆ ಮಾಡದೇ,ಕಿರುಕುಳ ನೀಡದೇ ಚೆನ್ನಾಗಿ ನೋಡಿಕೊಂಡರೆ, ಅಂಥ ಅಪಹರಣಕಾರನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ತೆಲಂಗಾಣದ ಪ್ರಕರಣ ವೊಂದಕ್ಕೆ ಸಂಬಂಧಿಸಿ ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ.ಆರ್.ಸುಭಾಶ್ ರೆಡ್ಡಿ ನೇತೃತ್ವದ ನ್ಯಾಯಪೀಠವು ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ತೆಲಂಗಾಣ ದಲ್ಲಿ ಅಟೋ ರಿಕ್ಷಾ ಚಾಲಕನೊಬ್ಬ ಮಗುವನ್ನು ಅಪಹರಿಸಿ,2ಲಕ್ಷ ರೂ. ನೀಡುವಂತೆ ತಂದೆಯನ್ನು ಒತ್ತಾಯಿಸಿದ್ದ. ಹೈಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅಟೋ ಚಾಲಕ ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದ.