ಮುಂಡಾಜೆ: ಕೆಲವು ದಿನಗಳಿಂದ ಕರಾವಳಿ ಮತ್ತು ಒಳನಾಡುಗಳಲ್ಲಿ ಸುರಿದಿರುವ ಅಪರೂಪದ ಬೇಸಗೆ ಮಳೆ ತೊರೆಗಳು ಮತ್ತು ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚುವಂತೆ ಮಾಡಿದೆ. ಪಶ್ಚಿಮ ಘಟ್ಟದ ತಪ್ಪಲು ಭಾಗದಲ್ಲಿ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಹೊಳೆಗಳಲ್ಲಿ ಹರಿವಿನ ಮಟ್ಟ ಏರಿದೆ. ಒರತೆ ಇನ್ನೂ ಆರುವ ಮೊದಲೇ ಈ ಮಳೆ ಸುರಿದಿರುವುದು ಹರಿವು ಬಲವಾಗಲು ಪೂರಕವಾಗಿದೆ.
ಕೆಲವು ದಿನಗಳಿಂದ ನದಿಗಳಲ್ಲಿ ನೀರಿನ ಪ್ರಮಾಣ ಇಳಿದಿದ್ದರಿಂದ ಕೃಷಿಗೆ ನೀರುಣಿಸಲು ಆತಂಕ ಎದುರಾಗಿತ್ತು. ಆದರೆ ಸೋಮವಾರ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು, ತೋಟತ್ತಾಡಿ, ನೆರಿಯ, ಚಿಬಿದ್ರೆ ಪರಿಸರಗಳಲ್ಲಿ ಉತ್ತಮ ಮಳೆಯಾಗಿದ್ದು, ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ಹರಿವನ್ನು ಹೆಚ್ಚಿಸಿಕೊಂಡಿವೆ. ಮೃತ್ಯುಂಜಯ ಹೊಳೆಯಲ್ಲಿ ಅಂದಾಜು ಎರಡು ಅಡಿಗಳಷ್ಟು ನೀರು ಹೆಚ್ಚಿದೆ ಎಂಬು
ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮುಂದಿನ ಇನ್ನೂ ಒಂದೆರಡು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು ನಿಜವಾದರೆ ಹರಿವು ಇನ್ನಷ್ಟು ಹೆಚ್ಚಿ ನೇತ್ರಾವತಿಯೂ ಸ್ವಲ್ಪ ಮೈದುಂಬಿಕೊಳ್ಳಬಹುದು. ಇದರಿಂದ ತುಂಬೆ ಕಿಂಡಿ ಅಣೆಕಟ್ಟಿಗೂ ಹೆಚ್ಚು ನೀರು ಹರಿದು ಬಂದು ಮಂಗಳೂರು ನಗರದಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕ ಸ್ವಲ್ಪ ಮಟ್ಟಿಗಾದರೂ ದೂರವಾಗಬಹುದು.