ಗಂಗಾವತಿ: ಕಳೆದ ಎರಡು ದಿನಗಳಿಂದ ತುಂಗಭದ್ರಾ ಡ್ಯಾಂ ಒಳ ಹರಿವು ಹೆಚ್ಚಾಗಿದ್ದರಿಂದ ನದಿಗೆ ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಹರಿಸಲಾಗುತ್ತಿದ್ದು ನದಿ ಪಾತ್ರದ ಗ್ರಾಮಗಳ ಜನರು ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ವಿರೂಪಾಪೂರಗಡ್ಡಿ, ಋಷಿಮುಖ ಪರ್ವತ, ನವ ವೃಂದಾವನ ಗಡ್ಡಿ ಶ್ರೀ ಕೃಷ್ಣದೇವರಾಯ ಸಮಾಧಿ 60 ಕಾಲಿನ ಮಂಟಪ ಸಂಪೂರ್ಣ ಜಲಾವೃತವಾಗಿವೆ. ವಿರೂಪಾಪೂರಗಡ್ಡಿ ರೆಸಾರ್ಟ್ ಗಳಲ್ಲಿ ಇನ್ನೂ ಉಳಿದು ಕೊಂಡಿದ್ದ 180ಕ್ಕೂ ಹೆಚ್ಚು ಜನ ಪ್ರವಾಸಿಗರನ್ನು ಸೋಮವಾರ ಬೆಳ್ಳಿಗ್ಗೆ ಹರಿಗೋಲಿನ ಮೂಲಕ ನದಿ ದಾಟಿಸಲಾಗಿದೆ.
ವೀಕ್ ಎಂಡ್ ಮಾಡಲು ವಿರೂಪಾಪೂರಗಡ್ಡಿ ರೆಸಾರ್ಟ್ ಗಳಿಗೆ ಆಗಮಿಸಿದ್ದ 350 ಕ್ಕೂ ಹೆಚ್ಚು ಜನ ಶನಿವಾರ ಬೆಳ್ಳಿಗ್ಗೆ ರೆಸಾರ್ಟ್ ಮಾಲೀಕರು ಹರಿಗೋಲಿನ ಸಹಾಯದಿಂದ ನದಿ ದಾಟಿಸಿದ್ದರು. ಸೋಮವಾರ ಉಳಿದ ಜನ ಪ್ರವಾಸಿಗರನ್ನು ದಾಟಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜನರಿಗೆ ಸಂಕಷ್ಟ ಉಂಟಾಗಿದೆ. ಶನಿವಾರ ತಾಲೂಕು ಆಡಳಿತದ ಅಧಿಕಾರಿಗಳು ಟೆಕ್ಕಿಗಳನ್ನು ದಾಟಿಸಲು ಬಳಸಿದ್ದ ಹರಿಗೋಲು ವಶಪಡಿಸಿಕೊಂಡಿದ್ದರು.
ಕಂಪ್ಲಿ ಸೇತುವೆ ಮುಳುಗಲು ನಾಲ್ಕೆ ಅಡಿ ಬಾಕಿ
ನದಿಯಲ್ಲಿ ಒಂದು ಲಕ್ಷಕ್ಕೂ ಕ್ಯೂಸೆಕ್ಸ್ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಕಂಪ್ಲಿ- ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಲು ನಾಲ್ಕು ಅಡಿ ಬಾಕಿ ಇದ್ದು ಇನ್ನೂ ಜನ ವಾಹನಗಳು ಓಡಾಡುತ್ತಿರುವುದು ಕಂಡು ಬಂದಿದೆ. ನದಿ ದಡದಲ್ಲಿ ಇದ್ದ ರೈತರ ಪಂಪ್ ಸೆಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ.