Advertisement
ಹೌದು, ಅಕ್ಟೋಬರ್‌ನಿಂದೀಚೆಗೆ ಕೋವಿಡ್ ಸೋಂಕು ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಾಯಿತು. ಇದರಿಂದ ಆರಂಭದಲ್ಲಿ ಸೋಂಕು ಪ್ರಕರಣಗಳು ನಿರಂತರ ಹತ್ತು ಸಾವಿರ ಗಡಿದಾಟಿದವು. ಈ ಮೂಲಕ ರಾಜ್ಯದಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು ಎಂದು ಸರ್ಕಾರ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೆ, ಪರೀಕ್ಷೆಗಳು ಈಗ ಫಲ ನೀಡುತ್ತಿದ್ದು, ಪ್ರಕರಣಗಳ ಸಂಖ್ಯೆ ಅರ್ಧಕ್ಕರ್ಧ ಇಳಿಕೆಯಾಗಿದೆ!
Related Articles
Advertisement
ಆರಂಭದಲ್ಲಿ ಆತಂಕ ಮನೆಮಾಡಿತ್ತು
ಈ ತಿಂಗಳ ಆರಂಭದಲ್ಲಿ ಸತತವಾಗಿ ಐದು ದಿನ ಹತ್ತು ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾದವು. ಈ ವೇಳೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಯಿತು. ಆದರೆ, ತಜ್ಞರು ಮಾತ್ರ ಹೆಚ್ಚು ಪರೀಕ್ಷೆ ನಡೆಸಿ ಹೆಚ್ಚು ಸೋಂಕಿತರು ಪತ್ತೆಯಾದರೆ ಮುಂದೆ ಸೋಂಕು ಕಡಿಮೆಯಾಗುತ್ತದೆ. ಪರೀಕ್ಷೆ ಪ್ರತಿಫಲ ಮುಂದೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಅದರಂತೆ ಸದ್ಯ ಪ್ರಕರಣಗಳು, ಸೋಂಕಿತರ ಸಾವು ಇಳಿಕೆಯಾಗುತ್ತಿವೆ.
ಪಾಸಿಟಿವಿಟಿ ದರವೂ ಅರ್ಧಕ್ಕರ್ಧ ಕುಸಿತ
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ಪ್ರಮಾಣ ಶೇ.13 ರಷ್ಟು ಇತ್ತು. ಅಂದರೆ ನಿತ್ಯ ಪರೀಕ್ಷೆಗೊಳಗಾಗುವ ನೂರು ಮಂದಿಯಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ, ಅಕ್ಟೋಬರ್‌ನಿಂದ ಪಾಸಿಟಿವಿಟಿ ದರ ಶೇ.9ಕ್ಕೆ ಇಳಿಕೆಯಾಗಿದೆ. ಅದರಲ್ಲೂ ಕಳೆದ ಒಂದು ವಾರದಲ್ಲಿ (ಅ.13-19) ಶೇ.7ಕ್ಕೆ ಇಳಿಕೆಯಾಗಿದೆ.
ಸಾವು ಇಳಿಕೆ
ಜುಲೈ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ 10ರವರೆಗೂ ನಿತ್ಯ ಸರಾಸರಿ 100ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ (ಅ.13-19ರವರೆಗೂ) 506 ಮಂದಿ ಸಾವಿಗೀಡಾಗಿದ್ದು, ನಿತ್ಯ ಸರಾಸರಿ ಸಾವಿನ ಸಂಖ್ಯೆ 72ಕ್ಕೆ ತಗ್ಗಿದೆ.
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಶೀಘ್ರವಾಗಿ ಕೋವಿಡ್-19 ಸೋಂಕು ಪರೀಕ್ಷೆಗಳು ನಡೆಸಲಾಗುತ್ತಿದೆ. ಇದರಿಂದ ಹಂತ ಹಂತವಾಗಿ ನಿತ್ಯ ವರದಿಯಾಗುವ ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವು ಇಳಿಕೆಯಾಗುತ್ತಿದೆ. ಒಂದು ವಾರದಿಂದ ಸಾವಿನ ಪ್ರಮಾಣ ಶೇ.1ಕ್ಕೂ ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಹಾಗೂ ಪ್ರಕರಣಗಳು ಇಳಿಕೆಯಾಗಿವೆ. ಮುಂದಿನ ದಿನಗಳಲ್ಲಿ ಪರೀಕ್ಷೆ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು.
-ಡಾ.ಸುಧಾಕರ್, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಜಯಪ್ರಕಾಶ್ ಬಿರಾದಾರ್