– ಗಡುವು ಹೆಚ್ಚಳ ಪ್ರಸ್ತಾವನೆಗೆ ರಕ್ಷಣಾ ಸಚಿವರ ಅಂಕಿತ
– ವಾಸ್ತವ್ಯದ ಕಾಲಮಿತಿಯನ್ನು 3 ತಿಂಗಳಿಂದ 1 ವರ್ಷದವರೆಗೆ ಏರಿಕೆ
– ಹೊಸ ಸೌಕರ್ಯ ಭೂಸೇನೆ, ನೌಕೆ, ವಾಯುಪಡೆಗಳ ಯೋಧರಿಗೂ ಅನ್ವಯ
ನವದೆಹಲಿ: ಯುದ್ಧ ಅಥವಾ ಇನ್ನಿತರ ಸೇನಾ ಕಾರ್ಯಾಚರಣೆಗಳಲ್ಲಿ ಗಾಯಗೊಂಡ ಯೋಧರ ಆರೈಕೆಗಾಗಿ ಆತನ ಕುಟುಂಬ ಸದಸ್ಯರು ಸರ್ಕಾರಿ ವಸತಿಗಳಲ್ಲಿ ತಂಗಬಹುದಾದ ಗರಿಷ್ಠ ಅವಧಿಯನ್ನು 3 ತಿಂಗಳುಗಳಿಂದ 1 ವರ್ಷದವರೆಗೆ ಹೆಚ್ಚಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಸಹಿ ಹಾಕಿದ್ದಾರೆ.
ಜೊತೆಗೆ, ಕಾರ್ಯಾಚರಣೆಗಳಲ್ಲಿ ಮೃತಪಟ್ಟ ಯೋಧರ ಪತ್ನಿ ಹಾಗೂ ಕುಟುಂಬವು ಸರ್ಕಾರಿ ವಸತಿಯನ್ನು ತೊರೆಯಲು ಇದ್ದ ಗರಿಷ್ಠ ಗಡುವನ್ನು ಎರಡು ವರ್ಷಗಳಿಂದ ಮೂರೂವರೆ ವರ್ಷಗಳವರೆಗೆ ವಿಸ್ತರಿಸುವ ಪ್ರಸ್ತಾವನೆಗೂ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಕ್ಷಣಾ ಇಲಾಖೆ, “”ಹೊಸ ನಿಯಮಗಳು ಭೂ ಸೇನೆ ಮಾತ್ರವಲ್ಲದೆ ನೌಕಾಪಡೆ ಹಾಗೂ ವಾಯುಪಡೆಗಳ ಯೋಧರಿಗೂ ಅನ್ವಯವಾಗಲಿದೆ. ಯೋಧರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಈ ಅನುಕೂಲ ಕಲ್ಪಿಸಲಾಗಿದೆ” ಎಂದು ಹೇಳಿದೆ.