ರಾಯಚೂರು: ವಿದ್ಯಾರ್ಥಿಗಳಿಗೆ ಶಿಕ್ಷಣದ ಹಸಿವು, ಆಸಕ್ತಿ ಹಾಗೂ ಮಾರ್ಗದರ್ಶನ ಇದ್ದಾಗ ಮಾತ್ರ ಜ್ಞಾನ ಹೆಚ್ಚಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಕನಸನ್ನು ತಾವೇ ಸಾಕಾರಗೊಳಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಬೆಂಗಳೂರಿನ ಹೆಡ್‌ಹೆಲ್ಡ್ ಹೈ ಸಂಸ್ಥೆಯ ನಿರ್ದೇಶಕ ರಮೇಶ ಬಲ್ಲಿದ್ ಸಲಹೆ ನೀಡಿದರು.
ತಾಲೂಕಿನ ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತಿಹಾಸ ವಿಭಾಗದಿಂದ ಗುರುವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತಹ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ. ಮೊಬೈಲ್ ಒಂದು ಕಲಿಕೆಗೆ ಅವಶ್ಯಕ ವಸ್ತು ಎಂದು ತಿಳಿದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿವಿಯ ಹಣಕಾಸು ಅಧಿಕಾರಿ ಪ್ರೊ | ಪಾರ್ವತಿ.ಸಿ.ಎಸ್ ಮಾತನಾಡಿ, ಇಂದಿನ ಯುವಕರು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಲು ರಮೇಶ ಬಲ್ಲಿದರಂತಹ ಜೀವನ ಮತ್ತು ಸಾಧನೆಯನ್ನು ಸ್ಫೂರ್ತಿಯಾಗಿ ಪಡೆಯಿರಿ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ, ಯುವಕರಿಗೆ ಈ ಆಧುನಿಕ ಯುಗದಲ್ಲಿ ಸಂವಹನ ಕೌಶಲ ಬಹಳ ಮುಖ್ಯ. ಯಾವ ವೇಳೆ ಯಾರ ಜೊತೆ ಎಷ್ಟು ಯಾವಾಗ ಹೇಗೆ ಮಾತನಾಡಬೇಕು, ಅಲ್ಲದೇ ಮಾತಿನ ಜೊತೆ ಅವರ ಸಾಂಧರ್ಬಿಕ ಸಂವಹನ ಜ್ಞಾನ ಗೊತ್ತಿರಬೇಕು ಎಂದು ತಿಳಿಸಿದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕ ಅನಿಲ್ ಅಪ್ರಾಳ್ ಮಾತನಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ| ನುಸ್ರತ್ ಫಾತಿಮಾ, ಅತಿಥಿ ಉಪನ್ಯಾಸಕಿ ಡಾ| ಪದ್ಮಜಾ ದೇಸಾಯಿ, ಡಾ| ಭಾರತಿ ಪಾಟೀಲ್, ಸಮಾಜ ಕಾರ್ಯ ವಿಭಾಗ ಡಾ| ರಶ್ಮೀರಾಣಿ ಅಗ್ನಿಹೋತ್ರಿ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.