Advertisement

ತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಳ; ಜನರ ಜೇಬಿಗೆ ಕತ್ತರಿ

03:57 PM Nov 30, 2018 | |

ಬಳ್ಳಾರಿ: ವಸತಿ ಪ್ರದೇಶ, ವಾಣಿಜ್ಯ ಕಟ್ಟಡ, ಉದ್ದಿಮೆಗಳಲ್ಲಿ ಪ್ರತಿದಿನ ಸಂಗ್ರಹಿಸಲಾಗುವ ತ್ಯಾಜ್ಯದ ಶುಲ್ಕವನ್ನು ಹೆಚ್ಚಳ ಮಾಡಿರುವ ಮಹಾನಗರ ಪಾಲಿಕೆ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ನಿರ್ವಹಣೆ ಕೊರತೆಯ ನೆಪವೊಡ್ಡಿ ಹಿಂದಿನ ದರಕ್ಕಿಂತ ದುಪ್ಪಟ್ಟು ಹೆಚ್ಚಳವಾಗಿರುವ ಹೊಸ ದರಗಳಿಗೆ ನ.28 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ಸಹ ಸಮ್ಮತಿ ಸೂಚಿಸಿದ್ದಾರೆ.

Advertisement

ನಗರದ ಸ್ವತ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಒಂದೆಡೆಯಾದರೆ, ಆ ಸ್ವತ್ಛತೆಗಾಗಿ ಕೆಲಸ ಮಾಡುವ ಪೌರ ಕಾರ್ಮಿಕರು, ಚಾ ಲಕರು, ಕ್ಲೀನರ್‌ಗಳ ವೇತನ ಮತ್ತು ವಾಹನಗಳ ನಿರ್ವಹಣೆ ಮಾಡುವುದು ಮಹಾನಗರ ಪಾಲಿಕೆಗೆ ಕಷ್ಟ ಸಾಧ್ಯವಾಗುತ್ತಿದೆ. 

ಪಾಲಿಕೆಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಕರ ಸಂಗ್ರಹವಾಗುವ ವಾರ್ಷಿಕ ಆದಾಯದಲ್ಲಿ ಬಹುಪಾಲು ಕಾಯಂ, ಹೊರ ಗುತ್ತಿಗೆದಾರರ ವೇತನ, ವಾಹನಗಳ ನಿರ್ವಹಣೆಗೆ ಸಾಲುತ್ತದೆ. ಮೇಲಾಗಿ ಇಂಧನ ದರಗಳು, ಗುತ್ತಿಗೆ ಪೌರ ಕಾರ್ಮಿಕರ ವೇತನಗಳು ಸಹ ಹೆಚ್ಚಳವಾಗಿವೆ. ಅಲ್ಲದೇ, 8 ವರ್ಷಗಳ ಹಿಂದೆ ಪರಿಷ್ಕರಿಸಲಾಗಿದ್ದ ದರಗಳನ್ನು ಇದೀಗ ಪುನಃ ಪರಿಷ್ಕರಿಸಿದ್ದು, ವಸತಿ ಪ್ರದೇಶ, ವಾಣಿಜ್ಯ ಕಟ್ಟಡ, ಉದ್ದಿಮೆಗಳಲ್ಲಿ ಪ್ರತಿನಿತ್ಯ ಸಂಗ್ರಹಿಸುವ ತ್ಯಾಜ್ಯದ ದರ ಹೆಚ್ಚಿಸಲಾಗಿದೆ. 

ವಾಣಿಜ್ಯ ಕಟ್ಟಡ: ಇನ್ನು ವಾಣಿಜ್ಯ ಕಟ್ಟಡಗಳಿಗೆ ಆಯಾ ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕನುಗುಣವಾಗಿ ದರಗಳನ್ನು ಹೆಚ್ಚಿಸಲಾಗಿದೆ. 1000 ಚದರ ಅಡಿಗಿಂತ ಕಡಿಮೆ ಇರುವ ಮಳಿಗೆಗೆ 50 ರೂ. ಇದ್ದ ದರವನ್ನು 100 ರೂ., 1000ಕ್ಕಿಂತ ಹೆಚ್ಚು , 5000ಕ್ಕಿಂತ ಕಡಿಮೆಯಿದ್ದ ಮಳಿಗೆಗೆ 100 ರಿಂದ 200 ರೂ., 5000 ಚದರ ಅಡಿಗೂ ಮೇಲ್ಟಟ್ಟ ಮಳಿಗೆಗೆ 200 ರೂ.ಗಳಿಂದ 500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

ಉದ್ದಿಮೆ ಕಟ್ಟಡಗಳು (ಇಂಡಸ್ಟ್ರೀಯಲ್‌): ಅದೇ ರೀತಿ ಉದ್ದಿಮೆಗಳಲ್ಲೂ ತಿಂಗಳಿಗೆ ಉತ್ಪತ್ತಿಯಾಗುವ ತ್ಯಾಜ್ಯದ  ಪ್ರಮಾಣಕ್ಕನುಗುಣವಾಗಿ ಶುಲ್ಕವನ್ನು ವಿಧಿಸಲಾಗಿದೆ. 1000 ಚದರ ಅಡಿಗಿಂತ ಕಡಿಮೆ ಇರುವ ಉದ್ದಿಮೆಗೆ 100 ರೂ.ಗಳಿಂದ 200 ರೂ., 1000 ಚದರ ಅಡಿಗಿಂತ ಮೇಲ್ಪಟ್ಟು 5000 ಚದರ ಅಡಿಗಿಂತ ಕಡಿಮೆ ಇರುವ ಉದ್ದಿಮೆಗಳಿಗೆ 200 ರೂ. ಗಳಿಂದ 400 ರೂ., 5000 ಚದರ ಅಡಿಗೂ ಮೇಲ್ಪಟ್ಟ ಉದ್ದಿಮೆಗಳಿಗೆ 300 ರೂ.ಗಳಿಂದ 700 ರೂ.ಗಳವರೆಗೆ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ. ಹೋಟೆಲ್‌, ಕಲ್ಯಾಣ ಮಂಟಪ, ಛತ್ರಗಳು, ನರ್ಸಿಂಗ್‌ ಹೋಮ್‌ಗಳ ಕಟ್ಟಡಗಳ ದರಗಳನ್ನು ದುಪ್ಪಟ್ಟು ಹೆಚ್ಚಿಸಲಾಗಿದ್ದು, 10 ಸಾವಿರ ಚದರ ಅಡಿಗಿಂತ ಕಡಿಮೆಯಿರುವ ಕಟ್ಟಡಕ್ಕೆ 300 ರೂ.ಗಳಿಂದ 800 ರೂ., 10 ಸಾವಿರ ಚದರ ಅಡಿಗೂ ಮೇಲ್ಪಟ್ಟು, 50 ಸಾವಿರಕ್ಕೂ ಚದರ ಅಡಿ ಒಳಗಿನ ಪ್ರದೇಶಕ್ಕೆ 500 ರೂ.ಗಳಿಂದ 1500 ರೂ., 50 ಸಾವಿರ ಚದರ ಅಡಿಗೂ ಮೇಲ್ಪಟ್ಟ ಪ್ರದೇಶಕ್ಕೆ 600 ರೂ.ಗಳಿಂದ 2500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಮಹ್ಮದ್‌ ಮುನೀರ್‌ ತಿಳಿಸಿದ್ದಾರೆ.

Advertisement

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ನೀರುಗಂಟಿಗಳಿಗೆ ವೇತನ ಮತ್ತು ಇವರೊಂದಿಗೆ ಕಾರ್ಯನಿರ್ವಹಿಸುತ್ತಿರುವ 63 ವಾಹನಗಳಿಗೆ ಅಂದಾಜು 3.5 ಕೋಟಿ ರೂ. ವೆಚ್ಚವಾಗಲಿದೆ. 8 ವರ್ಷಗಳ ಹಿಂದೆ 6 ಸಾವಿರ ನೀಡುತ್ತಿದ್ದ ಪೌರ ಕಾರ್ಮಿಕರ ವೇತನ ಇಂದು 15 ಸಾವಿರ ರೂ. ಗಳಿಗೆ ಹೆಚ್ಚಳವಾಗಿದೆ. ಇಂಧನ ದರಗಳು ಸಹ ದುಪ್ಪಟ್ಟಾಗಿವೆ. ಸದ್ಯ ಪಾಲಿಕೆಗೆ ತ್ಯಾಜ್ಯಸಂಗ್ರಹ ಮತ್ತು ಆಸ್ತಿ ತೆರಿಗೆಯಿಂದ ಇದನ್ನೆಲ್ಲ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ ದರಗಳನ್ನು ಪರಿಷ್ಕರಿಸಿದ್ದು, ಸಭೆಯಲ್ಲಿ ಸದಸ್ಯರು ಸಹ ಒಪ್ಪಿಗೆ ಸೂಚಿಸಿದ್ದಾರೆ

 ಬಳ್ಳಾರಿ ಮಹಾನಗರ ಪಾಲಿಕೆಯಿಂದ ಮನೆ  ಮನೆಯಿಂದ ಸಂಗ್ರಹಿಸುವ ತ್ಯಾಜ್ಯದ ದರ ಸೇರಿ ವಾಣಿಜ್ಯ ಕಟ್ಟಡ, ಉದ್ದಿಮೆಗಳ ದರ ಪರಿಷ್ಕರಿಸಿದ್ದು, ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಪೌರಕಾರ್ಮಿಕರ ವೇತನ, ಇಂಧನ ದರಗಳು ಹೆಚ್ಚಳವಾಗುತ್ತಿದ್ದು, 8 ವರ್ಷಗಳ ಹಿಂದೆ ಪರಿಷ್ಕರಿಸಿದ್ದ ದರಗಳಿಂದ ಪೌರಕಾರ್ಮಿಕರ ವೇತನ, ವಾಹನಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಇಷ್ಟು ವರ್ಷಗಳ ಕಾಲ ಆಸ್ತಿ ತೆರಿಗೆ, ತ್ಯಾಜ್ಯಸಂಗ್ರಹದ ಆದಾಯದಿಂದ ಇದನ್ನು ನಿರ್ವಹಿಸಲಾಗಿದೆ. ಹಾಗಾಗಿ ತ್ಯಾಜ್ಯ ಸಂಗ್ರಹಗಳ ದರ ಹೆಚ್ಚಿಸಲಾಗಿದೆ.
 ಮಹ್ಮದ್‌ ಮುನೀರ್‌, ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ.

ಎಷ್ಟೆಷ್ಟು ದರ ಹೆಚ್ಚಳ ಸಾವಿರ ಚದರ ಅಡಿಗಿಂತ ಕಡಿಮೆ ಇರುವ ವಸತಿ ಪ್ರದೇಶಕ್ಕೆ ಈ ಹಿಂದೆ ತಿಂಗಳಿಗೆ 15
ರೂ. ಇದ್ದ ದರವನ್ನು ಇದೀಗ 40 ರೂ.ಗೆ ಹೆಚ್ಚಿಸಲಾಗಿದೆ. ಸಾವಿರ ಚದರ ಅಡಿಗಿಂತ ಮೆಲ್ಪಟ್ಟು 3 ಸಾವಿರ ಚದರ ಅಡಿಗಿಂತ ಕಡಿಮೆ ಇರುವ ಪ್ರದೇಶಕ್ಕೆ 30 ರೂ. ಗಳಿದ್ದ ದರವನ್ನು 70 ರೂ., 3 ಸಾವಿರಕ್ಕೂ ಮೇಲ್ಪಟ್ಟ ಪ್ರದೇಶಕ್ಕೆ 50 ರೂ.ಗಳಿಂದ 100 ರೂ.ಗಳಿಗೆ ಏರಿಕೆ ಮಾಡಲಾಗಿದೆ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next